ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ನಾಡಿನಲ್ಲಿ ಸಿಎಂ; ಕಾರ್ಯಕರ್ತರ ಉತ್ಸಾಹ

ಏಕಕಾಲಕ್ಕೆ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಇಂದು; 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ
Last Updated 18 ಮಾರ್ಚ್ 2023, 4:36 IST
ಅಕ್ಷರ ಗಾತ್ರ

ಮಡಿಕೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಕೊಡಗು ಜಿಲ್ಲೆಗೆ ಆಗಮಿಸಲಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ. ಮಧ್ಯಾಹ್ನದಿಂದ ಸಂಜೆಯವರೆಗೂ ಜಿಲ್ಲೆಯಲ್ಲೇ ಇದ್ದು, ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇಲ್ಲಿನ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನ ಹಾಗೂ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭವು ಬೆಳಿಗ್ಗೆ 11.30ಕ್ಕೆ ನಿಗದಿಯಾಗಿದೆ. ಇಲ್ಲಿ ಸುಮಾರು 8ರಿಂದ 10 ಸಾವಿರ ಜನ ಸೇರುವ ನಿರೀಕ್ಷೆ ಇದೆ.

ಇಲ್ಲಿಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಕರೆತರುವುದಕ್ಕೆಂದೇ 110 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಮಡಿಕೇರಿಯಲ್ಲಿನ ಬಸ್‌ ಡಿಪೊದಲ್ಲಿರುವ ಬಸ್‌ಗಳು ಸಾಕಾಗದೆ, ಸುಳ್ಯ ಹಾಗೂ ಪುತ್ತೂರಿನಿಂದಲೂ ಬಸ್‌ಗಳನ್ನು ನಿಯೋಜಿಸಲಾಗಿದೆ. ಮಧ್ಯಾಹ್ನದ ಹೊತ್ತಿಗೆ ಸಮ್ಮೇಳನ ಆರಂಭವಾಗುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಬೆಳಿಗ್ಗೆ 10.05ಕ್ಕೆ ಬಂದು ಮಲೆಮಹದೇಶ್ವರ ಸ್ವಾಮಿಯ 108 ಎತ್ತರದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. ನಂತರ, ಅವರು ಹೆಲಿಕಾಪ್ಟರ್ ಮೂಲಕ ಇಲ್ಲಿನ ಕೆ.ಬಾಡಗ ಗ್ರಾಮದ ಗಾಲ್ಫ್ ಮೈದಾನಕ್ಕೆ ಮಧ್ಯಾಹ್ನ 12.05ಕ್ಕೆ ಬರಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ 12.15ಕ್ಕೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಮುಖ್ಯಮಂತ್ರಿ ಸಂವಾದ ಮಾಡಲಿದ್ದು, ಸರ್ಕಾರದ ಯೋಜನೆಗಳಿಂದ ಅವರಿಗೆ ಅನುಕೂಲವಾಗಿರುವ ಬಗೆಯನ್ನು ಅವರಿಂದಲೇ ಕೇಳಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ.ಸುಜಾ ಕುಶಾಲಪ್ಪ, ಸಂಸದ ಪ್ರತಾಪಸಿಂಹ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್.ಜಯರಾಮ್, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪಾಲ್ಗೊಳ್ಳಲಿದ್ದಾರೆ.

ಬಳಿಕ ಮಧ್ಯಾಹ್ನ 3.10ಕ್ಕೆ ನಾಪೋಕ್ಲು ಬೇತು ಗ್ರಾಮದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ (ಚೆರಿಯಪರಂಬು) ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ನಡೆಯುವ 23ನೇ ‘ಕೊಡವ ಹಾಕಿ ಉತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 4.30ಕ್ಕೆ ಹೆಲಿಕಾಪ‍್ಟರ್ ಮೂಲಕ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT