ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು| ಅಕಾಲಿಕ ಮಳೆಗೆ ಅರಳಿದ ಹೂವು

ಕಾಫಿ ಕೊಯ್ಲಿಗೆ ಅಡ್ಡಿ, ಇಳುವರಿ ಕುಸಿತದ ಭೀತಿಯಲ್ಲಿ ರೈತರು
Last Updated 11 ಡಿಸೆಂಬರ್ 2019, 16:30 IST
ಅಕ್ಷರ ಗಾತ್ರ

ನಾಪೋಕ್ಲು: ಹತ್ತು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ಹೋಬಳಿ ವ್ಯಾಪ್ತಿಯ ಹಲವು ತೋಟಗಳಲ್ಲಿ ಅಲ್ಲಲ್ಲಿ ಕಾಫಿ ಹೂ ಅರಳಿದ್ದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಹವಾಮಾನ ವೈಪರೀತ್ಯದಿಂದ ಕಾಫಿಯ ಹೂ ಅರಳಿದ್ದು ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ರೋಬಸ್ಟಾ ಕಾಫಿ ಹಣ್ಣು ಕೊಯ್ಲು ಮಾಡುವ ಅವಧಿ ಇದಾಗಿದ್ದು ಹಣ್ಣು ಕೊಯ್ಲಿನ ಸಂದರ್ಭದಲ್ಲಿ ಹೂಗಳು ಉದುರಿ ಹೋಗುತ್ತವೆ. ಇದರಿಂದ ಮುಂದಿನ ವರ್ಷದ ಇಳುವರಿಗೆ ಹಾನಿಯಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಬಹುತೇಕ ಕಾಫಿ ತೋಟಗಳಲ್ಲಿ ಹೆರತೆ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಔಷಧಿ ಸಿಂಪಡಣೆಯತ್ತ ಗಮನಹರಿಸಿದ್ದು ಆ ಕೆಲಸಗಳ ನಡುವೆಯೂ ಹಣ್ಣಾಗಿರುವ ಕಾಫಿ ಕೊಯ್ಲು ಮಾಡುವುದು ಸವಾಲಾಗಿದೆ. ಕೆಲವರು ರೋಬಸ್ಟಾ ಕಾಫಿ ಕೊಯ್ಲು ಆರಂಭಿಸಿದ್ದು ಮೋಡ ಕವಿದ ವಾತಾವರಣ ಇರುವುದರಿಂದ ಒಣಗಿಸುವುದೂ ಸಮಸ್ಯೆಯಾಗಿದೆ. ಅಲ್ಲದೇ ಅಕಾಲಿಕ ಮಳೆಯಿಂದ ಇಳುವರಿ ಕುಂಠಿತವಾಗುತ್ತಿದೆ ಎನ್ನುತ್ತಾರೆ ನೆಲಜಿ ಗ್ರಾಮದ ಕಾಫಿ ಬೆಳೆಗಾರ ಮಾಚಯ್ಯ.

ಕಾಡು ಹಂದಿ ಉಪಟಳ: ಭತ್ತದ ಕೊಯ್ಲಿನ ಸಮಯ ಇದಾಗಿದ್ದು ಕಾಡುಹಂದಿಗಳು ರೈತರನ್ನು ಸಂಕಷ್ಟಕ್ಕೆ ದೂಡಿವೆ. ಅವುಗಳಿಂದ ಬೆಳೆ ರಕ್ಷಣೆ ಮಾಡಲು ದಾರಿ ಕಾಣದೆ ಸಧ್ಯ ಗದ್ದೆಗಳಲ್ಲಿ ಕೆಂಪು ಬಟ್ಟೆಗಳನ್ನು ಹಾರಾಡಿಸುತ್ತಿದ್ದಾರೆ.

ಭಾಗಮಂಡಲ, ಬಲ್ಲಮಾವಟಿ, ಪೇರೂರು, ಅಯ್ಯಂಗೇರಿ, ಸಣ್ಣಪುಲಿಕೋಟು, ಚೇರಂಬಾಣೆ ಬಾಡಗ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗಮಂಡಲ ವಲಯ ಅರಣ್ಯಾಧಿಕಾರಿ ಕಚೇರಿಗೆ ತೆರಳಿ ಹಂದಿಗಳನ್ನು ಕೊಲ್ಲಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಕಾಡುಹಂದಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಮಾಡುತ್ತಿದ್ದು ಅವುಗಳಿಗೆ ಗುಂಡು ಹೊಡೆಯಲು ಅನುಮತಿ ನೀಡಬೇಕು ಎಂದು ಬಲ್ಲಮಾವಟಿ ಗ್ರಾಮದ ಬಲ್ಲತ್ತನಾಡು ಕೊಡವ ಫಾರ್ಮರ್ಸ್ ಸ್ಫೋರ್ಟ್‌ ಮತ್ತು ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಕರವಂಡ ಲವ ನಾಣಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT