ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್ ಜಾತಿ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ’

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಹೇಳಿಕೆ
Published 19 ಏಪ್ರಿಲ್ 2024, 7:25 IST
Last Updated 19 ಏಪ್ರಿಲ್ 2024, 7:25 IST
ಅಕ್ಷರ ಗಾತ್ರ

ಮಡಿಕೇರಿ: ‘ಸೋಲು ಕಟ್ಟಿಟ್ಟಬುತ್ತಿ ಎಂಬುದು ಗೊತ್ತಾಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಜಾತಿ ರಾಜಕೀಯದ ಆರೋಪ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಜಾತಿ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ’ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಹೇಳಿದರು.

ಈಚೆಗೆ ನಡೆದ ಒಕ್ಕಲಿಗರ ಸಮಾಜದ ಸಭೆಯಲ್ಲಿ ಸಮುದಾಯದ ಸಮಸ್ಯೆಗಳನ್ನು ಕುರಿತು ಚರ್ಚಿಸಲಾಗಿತ್ತು. ಅದರಲ್ಲಿ ತುಳಸಿದಾಸಪ್ಪ ನಂತರ ದಶಕಗಳ ನಂತರ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಹೇಳಿದರೆ ತಪ್ಪೇನು ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸೋಲುವುದು ಖಚಿತ ಎಂಬುದು ಗೊತ್ತಿರುವುದರಿಂದಲೇ ಬಿಜೆಪಿ ನಾಯಕರು ಈ ಸಭೆಗೆ ಜಾತಿಯ ಲೇಪನ ಹಾಕುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಕಾಂಗ್ರೆಸ್ ಎಂದಿಗೂ ಜಾತಿ ರಾಜಕಾರಣ ಮಾಡಿಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದಿನ ಚುನಾವಣೆಗಳಲ್ಲಿ ಕೆಲವು ಮುಖಂಡರು ಬಹಿರಂಗವಾಗಿಯೇ ಬಿಜೆಪಿ ಪರವಾಗಿ ಮತಯಾಚಿಸಿದ್ದರು. ಆದರೆ, ಮೊನ್ನೆ ನಡೆದ ಸಭೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಯಾವ ಮುಖಂಡರೂ ಹೇಳಿಲ್ಲ ಎಂದು ತಿಳಿಸಿದರು.

ಮೈಸೂರು ಮಹಾರಾಜರು ಸರ್ವಶ್ರೇಷ್ಠರು ಅದರಲ್ಲಿ ಎರಡು ಮಾತಿಲ್ಲ. ಆದರೆ, ನಮಗೆ ಪ್ರತಾಪ‍ಸಿಂಹ ಅವರಿಗೆ ಏಕೆ ಟಿಕೆಟ್ ಕೊಡಲಿಲ್ಲ ಎಂಬುದಕ್ಕೆ ಸಮಜಾಯಿಷಿ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನ ಸಮಿತಿಯ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಮಂದ್ರೀರ ಮೋಹನದಾಸ್ ಮಾತನಾಡಿ, ‘ಕಾಂಗ್ರೆಸ್‌ನ ಇಬ್ಬರೂ ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿಯವರು ಅರೆಭಾಷೆ ಒಕ್ಕಲಿಗ ಸಮುದಾಯವನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಮಾತನಾಡಿ, ‘ಯುಪಿಎ ಅಧಿಕಾರದಲ್ಲಿದ್ದಾಗ ಗೊಬ್ಬರದ ಬೆಲೆ ಎಷ್ಟು ಇತ್ತು. ಈಗ ಎಷ್ಟಿದೆ ಎಂಬದುನ್ನು ಯೋಚಿಸಿ. ಈಗ ಮೋದಿ ಸರ್ಕಾರ 3–4 ತಿಂಗಳಿಗೆ ಒಮ್ಮೆ ₹ 2 ಸಾವಿರ ನೀಡಿದರೆ ಎಲ್ಲಿಗೆ ಸಾಕಾಗುತ್ತದೆ. ರೈತರ ಬದುಕು ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀರಾ ಸಂಕಷ್ಟಕ್ಕೆ ಒಳಗಾಗಿದೆ’ ಎಂದರು.

ಕಾಂಗ್ರೆಸ್ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಪಕ್ಷ ವೃತ್ತಿಪರ ಘಟಕದ ಅಧ್ಯಕ್ಷ ಅಂಬೆಕಲ್ ನವೀನ್, ಸಂಪಾಜೆ ವಲಯದ ಅಧ್ಯಕ್ಷ ಸಿ.ಎಲ್.ಸುರೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT