ಮಡಿಕೇರಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿರುವ ಕ್ರಮವನ್ನು ಖಂಡಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಇಲ್ಲಿನ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
ಸರ್ಕಾರ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ ಮುಖಂಡರು, ರಾಹುಲ್ ಗಾಂಧಿ ಅವರ ಧ್ವನಿಯನ್ನು ಅಡಗಿಸಬೇಕು ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ವಿರೋಧ ಪಕ್ಷಗಳು ಇಲ್ಲದೇ ಇರುವಂತೆ ಮಾಡುವುದೇ ಅದರ ಉದ್ದೇಶವಾಗಿದೆ. ಅದರ ಒಂದು ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಕಿಡಿಕಾರಿದರು.
ಹೈಕೋರ್ಟ್ ವಕೀಲ ಚಂದ್ರಮೌಳಿ ಮಾತನಾಡಿ, ‘ಈ ಪ್ರತಿಭಟನೆ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಅಲ್ಲ. ಇದು ಸರ್ಕಾರದ ದಮನಕಾರಿ ನೀತಿಯ ವಿರುದ್ಧ’ ಎಂದು ಸ್ಪಷ್ಟಪಡಿಸಿದರು.
‘ರಾಹುಲ್ ಗಾಂಧಿ ಅವರ ಧ್ವನಿಯನ್ನು ಅಡಗಿಸಬೇಕು ಎಂಬ ಕಾರಣಕ್ಕೆ ಸರ್ಕಾರ ಸಣ್ಣ ನೆಪ ಸಿಕ್ಕ ತಕ್ಷಣವೇ ಅನರ್ಹಗೊಳಿಸಿದೆ. ತೀರ್ಪನ್ನು ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಅವಕಾಶವೂ ಇದೆ. ಹೀಗಿರುವಾಗ ಸರ್ಕಾರ ಆತುರವಾಗಿ ಕ್ರಮ ಕೈಗೊಂಡಿದೆ’ ಎಂದರು.
ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ‘ಸರ್ಕಾರ ಈ ಕ್ರಮದ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಮುನಿರ್ ಅಹಮ್ಮದ್, ಎಚ್.ಎ.ಹಂಸ, ಸುರಯ್ಯ ಅಬ್ರಾರ್, ತೆನ್ನೀರಾ ಮೈನಾ, ಬಿ.ವೈ.ರಾಕೇಶ್, ಆರ್.ಪಿ.ಚಂದ್ರಶೇಖರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.