ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಕಾಫಿಯ ತೋಟಗಳಲ್ಲಿ ಅಣಬೆ ನರ್ತನ

ತೇವಗೊಂಡ ಮಣ್ಣಿನಲ್ಲಿ ಮೂಡುವ ಅಣಬೆಗಳು
Published 21 ಮೇ 2024, 5:54 IST
Last Updated 21 ಮೇ 2024, 5:54 IST
ಅಕ್ಷರ ಗಾತ್ರ

ಅರಳಿದ ಮಲ್ಲಿಗೆಯಂತೆ, ಬಿಡಿಸಿದ ಛತ್ರಿಯಂತೆ, ಮುಸುಕು ಹೊದ್ದ ಮಾಯಾಂಗನೆಯಂತೆ, ಗುಂಡಗಿನ ಐಸ್ ಕ್ರೀಂ ನಂತೆ, ಅತಿಥಿಗಳಿಗೆ ಉಣಬಡಿಸಲು ಇಟ್ಟ ಸಮೋಸದಂತೆ, ಮೆರವಣಿಗೆ ಹೊರಟ ತರುಣಿಯರಂತೆ ಈ ಅಣಬೆಗಳು ನೋಡುಗರ ಮನತಣಿಸುತ್ತವೆ. ತಿನ್ನಲು ಕೆಲವಷ್ಟೇ ಯೋಗ್ಯ. ಮತ್ತೆ ಹಲವು ವಿಷಕಾರಿ. ಅಣಬೆಗಳ ಬಗ್ಗೆ ತಿಳಿದವರನ್ನು ಕೇಳಿ ಸೇವಿಸುವುದರಲ್ಲಿದೆ ಜಾಣತನ.

ನಾಪೋಕ್ಲು: ಬಿಸಿಲ ಬೇಗೆಯಿಂದ ಬರಡಾಗಿದ್ದ ಮಣ್ಣು ಇದೀಗ ಸುರಿಯುತ್ತಿರುವ ಮಳೆಯಿಂದ ತೋಯ್ದಿದ್ದು ಸಕಲ ಜೀವರಾಶಿಗಳಿಗೂ ಕಳೆನೀಡಿದೆ. ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಮೆದುವಾದ ಮರದ ಬುಡ, ತೋಟಕ್ಕೆ ಹಾಕಿದ ಸಗಣಿರಾಶಿ, ಗೆದ್ದಲಿನ ಗೂಡು, ರಾಶಿ ಬಿದ್ದ ತರಗೆಲೆಗಳ ನಡುವಿನಿಂದ ಜಿಗಣೆಗಳು ಮೇಲೆದ್ದು ರಕ್ತಹೀರಿದರೆ ಅತ್ತ ಅಣಬೆಗಳೂ ಕೂಡಾ ಸದ್ದಿಲ್ಲದೇ ನೆಲದಿಂದ ಮೇಲೆದ್ದು ವಸುಂಧರೆಯ ಸೌಂದರ್ಯಕ್ಕೆ ಅಚ್ಚೊತ್ತುತ್ತಿವೆ.

ಅಲ್ಲಲ್ಲಿ ನಾನಾ ಅಣಬೆಗಳು ಪುಟಿದೆದ್ದು ರಸಗವಳ ಪ್ರಿಯರನ್ನು ನಾಲಿಗೆ ಚಪ್ಪರಿಸುವಂತೆ ಮಾಡಿದರೆ, ಪ್ರಕೃತಿ ಪ್ರಿಯರ ಕಣ್ಣುಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಸುಮಾರು ಒಂದು ವಾರಗಳಿಂದ ನಾಲ್ಕುನಾಡಿನಲ್ಲಿ ಮಳೆ ಸುರಿಯುತ್ತಿದೆ. ಕಾಪಿ ತೋಟಗಳಲ್ಲಿ ಹಸಿರುಕ್ಕಿದೆ. ಅದೇ ಸಮಯಕ್ಕೆ ನೆಲದೊಳಗೆ ಅಡಗಿದ್ದ ಅಣಬೆಗಳೂ ತಲೆ ಎತ್ತುತ್ತಿವೆ. ಕೆಲವು ರುಚಿಕರ ಆಹಾರ ಅಣಬೆಗಳಾಗಿದ್ದು, ಇವುಗಳನ್ನು ಕಾಫಿಯ ತೋಟಗಳಲ್ಲಿ ಅರಸುವವರು ಅಧಿಕ. ಕೆಲವು ಅಲ್ಪಾಯುಷಿ ಅಣಬೆಗಳಾಗಿದ್ದು ಕೆಲವೇ ಗಂಟೆಗಳ ಸೌಂದರ್ಯ ತೋರಿ ಮರೆಯಾಗುತ್ತವೆ.

ಮೊದಲ ಮಳೆಯಿಂದ ನೆಲ ತೇವಗೊಂಡಾಗ ಅಲ್ಲಿ ವಿವಿಧ ಅಣಬೆಗಳ ನರ್ತನವಾಗುತ್ತದೆ. ಮುಂಗಾರು ಮಳೆಗೂ ಮುನ್ನ ಪ್ರಕೃತಿಗೆ ವಿಶಿಷ್ಟ ಸೌಂದರ್ಯವೂ ಮೇಳೈಸುತ್ತದೆ. ಆಗ ಅರಳುವ ನಾನಾ ನಮೂನೆಯ ಅಣಬೆಗಳು ಮನಸೂರೆಗೊಳ್ಳುತ್ತವೆ. ಮಳೆಗಾಲ ಆರಂಭವಾಗುವ ಮುನ್ನ ತೇವದ ನೆಲದಿಂದ ಅಪರೂಪದ ಅಣಬೆಗಳು ಮೂಡಿದರೆ ಮಳೆಗಾಲದಲ್ಲಿ ಕಾಡುಗಳಲ್ಲಿ ಓಡಾಡಿದವರಿಗೆಲ್ಲ ಮತ್ತಷ್ಟು ಚಿತ್ರ ವಿಚಿತ್ರ ಅಣಬೆಗಳು ಕಾಣಸಿಗುತ್ತವೆ. ದಟ್ಟ ಹಸಿರಿನ ಗಿಡಮರಗಳ ನಡುವೆ, ಒಣಗಿದ ಮರಗಳ ಕಾಂಡಗಳ ಮೇಲೆ ಬಿಳಿ, ಹಳದಿ, ಕಂದು ಬಣ್ಣದ ಅಣಬೆಗಳು ಅರಳಿ ತಮ್ಮ ಬೆಡಗು ಬಿನ್ನಾಣ ಪ್ರದರ್ಶಿಸತೊಡಗುತ್ತವೆ. ಅವು ತಮ್ಮಷ್ಟಕ್ಕೆ ತಾವೇ ನಗುತ್ತಿವೆಯೋ ಏನೋ ಎಂಬಂತೆ ಭಾಸವಾಗುತ್ತವೆ.

ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ ಆಕಾರ ಹಾಗೂ ರೂಪಗಳಿವೆ. ತೇವದ ಮಣ್ಣಿನಲ್ಲಿ ಅಲ್ಲಲ್ಲಿ ಅಪರೂಪದ ಅಣಬೆಗಳು ಕಾಣ ಸಿಗುತ್ತವೆ. ಕೆಲವು ಆಹಾರವಾಗಿ ಬಳಕೆಯಾದರೆ ಮತ್ತೆ ಕೆಲವು ನೋಟಕ್ಕಷ್ಟೇ ಚೆನ್ನ. ಕಾಫಿಯ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮಳೆಗಾಲದ ಆರಂಭಕ್ಕೆ ಮೊದಲು ತಿನ್ನುವ ಅಣಬೆಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸಿ ಹುಡುಕುತ್ತಾರೆ. ತೇವದ ಮಣ್ಣಿನಲ್ಲಿ ಮರಗಳ ಬುಡದಲ್ಲಿ ಹೂವಿನ ಮೊಗ್ಗುಗಳಂತೆ ಹುಟ್ಟಿಕೊಳ್ಳುವ ಅಣಬೆಗಳನ್ನು ಕಂಡರೆ ಸಾಕು ಕಿತ್ತೊಯ್ಯುತ್ತಾರೆ. ಹಾಗೆಂದು ಎಲ್ಲಾ ಅಣಬೆಗಳನ್ನು ತಿನ್ನಲಾಗುವುದಿಲ್ಲ.

ಅಣಬೆಗಳ ಜೀವನ ಶೈಲಿಯೇ ವಿಶಿಷ್ಟ. ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ. ಬಗೆಬಗೆಯ ಆಕಾರ. ಅಣಬೆಗಳು ಕೊಳೆತು ನಾರುವ ವಸ್ತುಗಳ ಮೇಲೆ, ಮರಗಳ ಕಾಂಡಗಳ ಮೇಲೆ, ಸೆಗಣಿಯ ಮೇಲೆ, ಕೊಳೆತ ಎಲೆಗಳ ಮೇಲೆ ಹೀಗೆ ಹತ್ತು ಹಲವು ಸ್ಥಳಗಳಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಬಿಡುತ್ತವೆ. ಇವು ಶಿಲೀಂಧ್ರ ಸಸ್ಯಗಳು. ಆದರೆ ಕೊಂಬೆ, ರೆಂಬೆ, ಬೇರು ಎಲೆಗಳಿಂದ ವಂಚಿತವಾಗಿವೆ. ಪತ್ರ ಹರಿತ್ತಿಲ್ಲದ ಕಾರಣ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲಾರವು. ಒಂದರ್ಥದಲ್ಲಿ ಇವು ಜೀವಿ-ನಿರ್ಜೀವಿಗಳ ನಡುವೆ ಸಂಬಂಧ ಕಲ್ಪಿಸುವ ಕೊಂಡಿಗಳು.

ಅಣಬೆಯನ್ನು ಕಿತ್ತಾಗ ನೆಲದೊಳಗೆ ಹುದುಗಿ ಬೇರಿನಂತೆ ಕಾಣುವ ಬಿಳಿ ದಂಟುಗಳೇ ಈ ಸಸ್ಯದ ಮುಖ್ಯ ಅಂಗ ಇದಕ್ಕೆ ಹೈಫ್ ಎನ್ನುತ್ತಾರೆ. ಭೂಮಿಯ ಮೇಲ್ಭಾಗಕ್ಕೆ ಛತ್ರಿಯಂತೆ ಬೆಳೆಯುವ ಭಾಗ ಸಸ್ಯದ ಫಲಕಾಯಗಳು.

ಗುಂಡಗಿನ ಐಸ್ ಕ್ರೀಂ ಅಣಬೆ
ಗುಂಡಗಿನ ಐಸ್ ಕ್ರೀಂ ಅಣಬೆ
ಅಣಬೆಯೇ...ಮುಸುಕು ಹೊದ್ದ ಮಾಯಾಂಗನೆಯೇ
ಅಣಬೆಯೇ...ಮುಸುಕು ಹೊದ್ದ ಮಾಯಾಂಗನೆಯೇ
ಉಣಬಡಿಸಲುಇಟ್ಟ ಸಮೋಸಗಳಂತಿರುವ ಈ ಅಣಬೆಗಳು
ಉಣಬಡಿಸಲುಇಟ್ಟ ಸಮೋಸಗಳಂತಿರುವ ಈ ಅಣಬೆಗಳು
ಮಳೆಯ ರಕ್ಷಣೆಗೆ ಅಣಬೆ ಛತ್ರಿಗಳು
ಮಳೆಯ ರಕ್ಷಣೆಗೆ ಅಣಬೆ ಛತ್ರಿಗಳು

ಕಾಡುಗಳಲ್ಲಿವೆ ಬಗೆಬಗೆಯ ಅಣಬೆಗಳು ಎಲ್ಲ ಅಣಬೆಗಳೂ ಸೇವಿಸಲು ಯೋಗ್ಯವಲ್ಲ ಕೊಂಬೆ, ರೆಂಬೆ, ಬೇರು ಎಲೆಗಳಿಂದ ವಂಚಿತವಾಗಿರುವ ಅಣಬೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT