ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಭಾಷೆ ಬಳಸಿದರೆ ಸಂಸ್ಕೃತಿ ಜೀವಂತವಾಗಿರುತ್ತದೆ- ಸಚಿವ ವಿ. ಸುನಿಲ್‌ಕುಮಾರ್

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ
Last Updated 4 ಜನವರಿ 2022, 13:56 IST
ಅಕ್ಷರ ಗಾತ್ರ

ಮಡಿಕೇರಿ: ‘ಸ್ಥಳೀಯ ಭಾಷೆ ಮತ್ತು ಸಂಸ್ಕೃತಿ ಜೀವಂತವಾಗಿರಬೇಕು. ಮೂಲ ಭಾಷೆಯನ್ನು ಮರೆಯಬಾರದು. ಆ ದಿಸೆಯಲ್ಲಿ ಸ್ಥಳೀಯ ಅರೆಭಾಷೆ ಬಳಸುವುದರಿಂದ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ಕುಮಾರ್ ಅಭಿಪ್ರಾಯಪಟ್ಟರು.

ಸುಳ್ಯದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರಿಗೆ 2019-20 ಮತ್ತು 2020-21ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಸ್ಥಳೀಯ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಮತ್ತಷ್ಟು ವಿಸ್ತರಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕಾಡೆಮಿ ಮೂಲಕ ಹಲವು ಪ್ರಯತ್ನ ನಡೆಸುತ್ತಿದೆ’ ಎಂದು ಹೇಳಿದರು.

‘ಅರೆಭಾಷೆಯ ಭಾಷೆ ಕೇವಲ ದೈನಂದಿನ ಚಟುವಟಿಕೆಗೆ ಮಾತ್ರವಲ್ಲ. ನಮ್ಮ ಬದುಕಿನ ಭಾಷೆಯಾಗಿದೆ. ಭಾಷೆ, ಸಂಸ್ಕೃತಿ ಮತ್ತು ಜೀವನ ಪದ್ಧತಿ ಒಂದಕ್ಕೊಂದು ಸಂಬಂಧವಿದೆ. ಸ್ಥಳೀಯ ಅರೆಭಾಷೆಯು ಪ್ರೀತಿ, ಸಂಸ್ಕೃತಿಯನ್ನು ಬಿಂಬಿಸುತ್ತದೆ’ ಎಂದು ಸುನಿಲ್‌ಕುಮಾರ್‌ ಹೇಳಿದರು.

ಮೀನುಗಾರಿಕೆ ಸಚಿವ ಎಸ್.ಅಂಗಾರ ಮಾತನಾಡಿ, ‘ಸಾಂಸ್ಕೃತಿಕ ನೆಲೆಗಟ್ಟನ್ನು ಉಳಿಸುವಲ್ಲಿ ಸಾಧಕರಿಗೆ ಸನ್ಮಾನಿಸುತ್ತಿರುವುದು ಭಾಷೆ ಮತ್ತು ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿದೆ’ ಎಂದರು.

‘ಆಯಾಯ ಪ್ರದೇಶದ ಸ್ಥಳೀಯ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಕಲೆಗಳಿಗೆ ಪ್ರೋತ್ಸಾಹಿಸಬೇಕು. ಸ್ವಾತಂತ್ರ್ಯ ಪೂರ್ವದ ಮಹನೀಯರನ್ನು ಸ್ಮರಿಸಬೇಕು’ ಎಂದರು.

‘ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಕೆದಂಬಾಡಿ ರಾಮೇಗೌಡರ ಹೆಸರಿನಲ್ಲಿ ಸ್ಮಾರಕ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ’ ಎಂದು ತಿಳಿಸಿದರು.

‘ಹಾಗೆಯೇ ಸುಳ್ಯ ಭಾಗದಲ್ಲಿ ಅರೆಭಾಷೆ ಬೆಳವಣಿಗೆಗೆ ಶ್ರಮಿಸಿದ ಮಹನೀಯರ ಇತಿಹಾಸ ತಿಳಿಯುವಂತಾಗಬೇಕು ಮತ್ತು ಪುಸ್ತಕ ಹೊರತರಬೇಕು’ ಎಂದು ಸಲಹೆ ಮಾಡಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ‘ರಾಷ್ಟ್ರದಲ್ಲಿ ಪರಿವರ್ತನೆಯ ಯುಗ ಆರಂಭವಾಗಿದೆ. ವಿವಿಧ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಕುಗ್ರಾಮದವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ’ ಎಂದು ಹೇಳಿದರು.

‘ಭಾಷೆ, ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ದಾಖಲು ಮಾಡಬೇಕು. ಭಾಷೆ, ಪರಂಪರೆ ಇತಿಹಾಸ ತಿಳಿದು ಮುನ್ನಡೆಯಬೇಕು. ಭಾಷೆ ನಾಶವಾದರೆ ಸಂಸ್ಕೃತಿ ನಾಶವಾಗುತ್ತದೆ ಎಂಬುದನ್ನು ಮರೆಯಬಾರದು’ ಎಂದು ಪ್ರತಿಪಾದಿಸಿದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ‘ಕಳೆದ ಎರಡು ವರ್ಷ ಎರಡು ತಿಂಗಳಲ್ಲಿ ಸುಮಾರು 115 ಕಾರ್ಯಕ್ರಮ ಅಕಾಡೆಮಿಯಿಂದ ಏರ್ಪಡಿಸಲಾಗಿದೆ. 15 ಸಂಸ್ಕೃತಿ ಶಿಬಿರ, 2 ನಾಟಕ ಶಿಬಿರ, 2 ಲೇಖನ ಕೌಶಲ ಕಾರ್ಯಾಗಾರ, 2 ವಿಶ್ವಕೋಶ ಕಾರ್ಯಾಗಾರ, 3 ಅರ್ಥಕೋಶ ಕಾರ್ಯಾಗಾರ, ಹಾಗೆಯೇ ಒಂದು ವಾರಗಳ ಕಾಲ ಚಿತ್ರಕಲಾ ಶಿಬಿರ ಏರ್ಪಡಿಸಲಾಗಿದೆ’ ಎಂದರು.

ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ, ‘ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಅರೆಭಾಷೆ ಬೆಳವಣಿಗೆಗೆ ವಿವಿಧ ಕ್ರಿಯಾಶೀಲ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದರು.

ಉಪನ್ಯಾಸಕ ಪಟ್ಟಡ ಶಿವಕುಮಾರ್ ಮಾತನಾಡಿ, ‘ಅರೆಭಾಷೆ ಆಚಾರ-ವಿಚಾರ, ಪರಂಪರೆ ಉಳಿಸಿ ಬೆಳೆಸುವಲ್ಲಿ ಪ್ರಶಸ್ತಿ ಪುರಸ್ಕೃತರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

‘ಸಾಹೇಬ್ರು ಬಂದವೇ!!’ ಅರೆಭಾಷೆ ರಂಗಪಯಣ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಧನಂಜಯ ಅಗೋಳಿಕಜೆ, ದಂಬೆಕೋಡಿ ಎಸ್. ಆನಂದ, ಕೂಡಕಂಡಿ ದಯಾನಂದ, ಕುಸುಮಾಧರ ಎ.ಟಿ., ಡಾ.ವಿಶ್ವನಾಥ ಬದಿಕಾನ, ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಡಾ.ಪುರುಷೋತ್ತಮ ಕೆ.ವಿ.ಕರಂಗಲ್ಲು, ಕಿರಣ್ ಕುಂಬಳಚೇರಿ, ಭರತೇಶ್ ಅಲಸಂಡೆಮಜಲು, ಕೆ.ಆರ್.ಗೋಪಾಲಕೃಷ್ಣ, ರಮ್ಯ ದಿಲೀಪ್, ಮಯೂರ್ ಅಂಬೆಕಲ್ಲು, ಅಕಾಡೆಮಿ ಸದಸ್ಯರಾದ ವಿಶ್ವನಾಥ ಬದಿಕಾನ, ಕುಸುಮಾದರ ಎ.ಟಿ., ರಿಜಿಸ್ಟ್ರಾರ್ ಚಿನ್ನಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT