ಮಂಗಳವಾರ, ಏಪ್ರಿಲ್ 13, 2021
23 °C
ಗೌಡ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸಂಸ್ಥೆಯ ಮಡಿಕೇರಿ ಶಾಖೆ ಉದ್ಘಾಟನೆ

‘ದಕ್ಷಿಣ ಕನ್ನಡ, ಕೊಡಗು ಸಹಕಾರ ಸಂಘದಲ್ಲಿ ಶಿಸ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಸಹಕಾರ ಬ್ಯಾಂಕ್‌ಗಳಲ್ಲಿ ಅತ್ಯಂತ ಶಿಸ್ತು ಕಾಣಬಹುದಾಗಿದೆ’ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ಇಲ್ಲಿ ಸೋಮವಾರ ಹೇಳಿದರು.

ನಗರದ ಕಾವೇರಿ ಹಾಲ್‌ನಲ್ಲಿ ನಡೆದ ಕೊಡಗು– ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ನ ಮಡಿಕೇರಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಭಾಗದ ಜಿಲ್ಲೆಯಲ್ಲಿರುವ ಸಹಕಾರ ಬ್ಯಾಂಕ್‌ಗಳಲ್ಲಿ ಇನ್ನಷ್ಟು ಶಿಸ್ತು ಅಳವಡಿಸಿಕೊಳ್ಳುವ ಅಗತ್ಯವಿದೆ. ಪರಸ್ಪರ ನಂಬಿಕೆಯ ಮೇಲೆ ಸಹಕಾರ ರಂಗವು ಮುನ್ನೆಡೆಯುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಕೆಲವು ಸಣ್ಣಪುಟ್ಟ ಲೋಪದೋಷಗಳಿವೆ. ಅವುಗಳನ್ನು ಸರಿಪಡಿಸಿಕೊಂಡರೆ, ರಾಷ್ಟ್ರೀಕೃತ ಬ್ಯಾಂಕ್‌ಗಿಂತಲೂ ಸಹಕಾರ ಬ್ಯಾಂಕ್‌ಗಳು ಬೆಳವಣಿಗೆ ಸಾಧಿಸಲು ಸಾಧ್ಯವಾಗಲಿದೆ’ ಎಂದು ಸಲಹೆ ನೀಡಿದರು.

‘ಮನುಷ್ಯನ ಜನ್ಮದಿಂದ ಹಿಡಿದು ಸಾವಿನ ತನಕವೂ ಸಹಕಾರಿ ಕ್ಷೇತ್ರವು ಜೊತೆಗಿರಲಿದೆ. ತಮ್ಮ ಸಮಾಜ ಹಾಗೂ ಸಮುದಾಯದ ಏಳಿಗೆಗೆ ಹಲವರು ಸಹಕಾರ ಬ್ಯಾಂಕ್‌ ಸ್ಥಾಪಿಸಿಕೊಂಡಿದ್ದಾರೆ. ಹಕ್ಕಿಪಿಕ್ಕಿ ಸಮುದಾಯ, ಹಾವಾಡಿಗರೂ ಸಹಕಾರ ಬ್ಯಾಂಕ್‌ ಸ್ಥಾಪಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೀನುಗಾರಿಕೆ ಸಚಿವ ಎಸ್‌. ಅಂಗಾರ ಮಾತನಾಡಿ, ಸಹಕಾರ ಬ್ಯಾಂಕ್‌ಗಳಿಗೆ ಜನಾಕರ್ಷಣೆ ಹಾಗೂ ಧನಾಕರ್ಷಣೆ ಇರಬೇಕು. ಜೊತೆಗೆ, ಆಡಳಿತ ಮಂಡಳಿ ಸದಸ್ಯರೂ, ಬ್ಯಾಂಕ್‌ನ ಗ್ರಾಹಕರನ್ನು ಅತ್ಯಂತ ಪ್ರೀತಿ ಹಾಗೂ ವಿಶ್ವಾಸದಿಂದ ಕಾಣಬೇಕು’ ಎಂದು ಹೇಳಿದರು.

ಯಾವುದೇ ಸಂಸ್ಥೆಯು ಬೆಳವಣಿಗೆ ಹೊಂದಬೇಕಾದರೆ, ತನ್ನ ಕಾರ್ಯ ವ್ಯಾಪ್ತಿಯ ವಿಸ್ತರಣೆ ಅಗತ್ಯವಾಗಿ ಮಾಡಿಕೊಳ್ಳಬೇಕು. ಈ ಕೋ ಆಪರೇಟಿವ್‌ ಸೊಸೈಟ್‌ ಮತ್ತಷ್ಟು ಶಾಖೆಗಳನ್ನು ಆರಂಭಿಸಲು ಎಂದು ಹಾರೈಸಿದರು.

ಬ್ಯಾಂಕ್‌ ನಿರ್ದೇಶಕ ನಿಂಗರಾಜು ನಂಗಾರ ಅವರು ಮಾತನಾಡಿ, ‘ಬ್ಯಾಂಕ್‌ನಲ್ಲಿ ಉದ್ಘಾಟನಾ ಕೊಡುಗೆಯಾಗಿ ಶೇ 9ರಷ್ಟು ಬಡ್ಡಿ ನೀಡಲಾಗುತ್ತಿದೆ. ಗ್ರಾಹಕರು ಇದನ್ನು ಸದುಪಯೋಗ ಮಾಡಿಕೊಳ್ಳಬಹುದು. ಈ ಹಿಂದೆಯೇ ಕುಶಾಲನಗರದಲ್ಲೂ ಬ್ಯಾಂಕ್‌ನ ಶಾಖೆಯನ್ನು ಆರಂಭಿಸಲಾಗಿತ್ತು. ಅಲ್ಲಿಯೂ ಉತ್ತಮವಾಗಿ ನಡೆಯುತ್ತಿದೆ. ನಿವೃತ್ತ ನೌಕರರು ಠೇವಣಿ ಇಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ಕೊಡಗು ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಪಿ.ಸಿ.ಜಯರಾಮ್‌, ಗೌಡ ವಿದ್ಯಾಸಂಘದ ಹೊಸೂರು ರಮೇಶ್‌ ಜೊಯಪ್ಪ, ಬ್ಯಾಂಕ್‌ ಅಧ್ಯಕ್ಷ ಹರೀಶ್‌ ದೇವಂಗೋಡಿ ಹಾಗೂ ಪಳಂಗಪ್ಪ ಪಾಣತ್ತಲೆ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.