ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ: ಹಿಂಬರಹ ನೀಡಲು ಡಿವೈಎಸ್‌ಪಿ ಸ್ಪಷ್ಟ ಸೂಚನೆ

ಕುಂದುಕೊರತೆ ಸಭೆಯಲ್ಲಿ ಕೇಳಿ ಬಂದವು ಹಲವು ದೂರುಗಳು
Published 15 ಫೆಬ್ರುವರಿ 2024, 7:06 IST
Last Updated 15 ಫೆಬ್ರುವರಿ 2024, 7:06 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಅಧಿಕಾರಿಗಳು ಹಿಂಬರಹ ನೀಡಬೇಕು. ಮಾತ್ರವಲ್ಲ, ಸಾರ್ವಜನಿಕರೂ ಸಂಬಂಧಿಸಿದ ಅಧಿಕಾರಿಗಳಿಂದ ಹಿಂಬರಹ ಪಡೆದುಕೊಳ್ಳಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್.ಪವನ್‌ಕುಮಾರ್ ಸೂಚಿಸಿದರು.

ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಬುಧವಾರ ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಏರ್ಪಡಿಸಿದ್ದ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ಸ್ವೀಕಾರ ಮತ್ತು ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರಿ ಕಚೇರಿಗಳಲ್ಲಿ ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿಷಯಕ್ಕೆ ಸಂಬಂಧಿಸಿದ ಅಧಿಕಾರಿಯಿಂದ ಹಿಂಬರಹ ಪಡೆದುಕೊಂಡಲ್ಲಿ ಸಮಸ್ಯೆ ಪರಿಹಾರ ಸುಲಭವಾಗಲಿದೆ ಎಂದರು.

ಸರ್ಕಾರಿ ಕಚೇರಿಗೆ ದೂರದ ಊರುಗಳಿಂದ ಸಾಕಷ್ಟು ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಆಗಮಿಸುತ್ತಾರೆ. ಕಚೇರಿಗೆ ಬಂದ ಅವರನ್ನು ಮೊದಲು ಸ್ಥಳ ನೀಡಿ ಕೂರಿಸಿ ಮಾತನಾಡಿದಲ್ಲಿ ಹೆಚ್ಚಿನ ಸಮಸ್ಯೆ ಬಗೆಹರಿದಂತೆ ಆಗುತ್ತದೆ. ಯಾವುದೇ ಕಾರಣಕ್ಕೂ ಜನರನ್ನು ಅಲೆಯುವಂತೆ ಮಾಡುವುದು ಬೇಡ. ಜನರಿಂದ ಲಂಚ ಪಡೆಯುವುದು ಅಪರಾಧ ಎಂದು ಎಚ್ಚರಿಕೆ ನೀಡಿದರು.

ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೆ, ಪಕ್ಷಾತೀತವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಕಿವಿಮಾತನ್ನೂ ಅವರು ಹೇಳಿದರು.

ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು, ಬಯೊಮೆಟ್ರಿಕ್ ಅಳವಡಿಸಬೇಕು, ಬೆಳಿಗ್ಗೆ 9.45ಕ್ಕೆ ಕಚೇರಿಗೆ ಆಗಮಿಸಿ ಬೆರಳಚ್ಚು ನೀಡಬೇಕು ಎಂದು ಸೂಚಿಸಿದರು.

ಕೇಳಿ ಬಂದ ದೂರುಗಳು

ಬೀಕಳ್ಳಿ ಗ್ರಾಮದ ಬಿ.ಆರ್.ಮಂಜುನಾಥ್ ಅವರು ಮಾತನಾಡಿ, ‘ಕಂದಾಯ ಇಲಾಖೆಗೆ ಕಳೆದ 4 ವರ್ಷಗಳಿಂದ ವಂಶ ವೃಕ್ಷಕ್ಕೆ ಬೇಕಾದ ಎಲ್ಲ ದಾಖಲಾತಿಗಳನ್ನು ಸೇರಿಸಿ ವಂಶವೃಕ್ಷಕ್ಕೆ ಅರ್ಜಿ ಸಲ್ಲಿಸುತ್ತಿದ್ದರೂ, ಸಕಾರಣ ಇಲ್ಲದೆ, ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ’ ಎಂದು ದೂರಿದರು. ದಾಖಲಾತಿಯನ್ನು ಪರಿಶೀಲಿಸಿದ ಪವನ್‌ಕುಮಾರ್ ವಂಶವೃಕ್ಷ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಸೂಚಿಸಿದರು.

ತಾಲ್ಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ಕೃಷಿ ಭೂಮಿಯ ದುರಸ್ತಿ ಮಾಡಿಕೊಡದ ಬಗ್ಗೆ ಮಾದಪ್ಪ ದೂರಿಕೊಂಡರು. ಆಲೂರು ಸಿದ್ಧಾಪುರದ ಎಚ್.ಕೆ.ಕಾವೇರಮ್ಮ ದಾರಿಯನ್ನು ಮುಚ್ಚಿರುವ ಬಗ್ಗೆ, ಶಿರಂಗಾಲದ ಪಿ.ಈ ತಿಮ್ಮಯ್ಯ 2021ರಲ್ಲಿ ಕಂದಾಯ ನಿಗದಿಗೆ ಅರ್ಜಿ ಸಲ್ಲಿಸಿದ್ದು, ಯಾವ ಹಂತದಲ್ಲಿದೆ ಎಂದು ಮಾಹಿತಿ ನೀಡುವ ಬಗ್ಗೆ ದೂರು ನೀಡಿದರು.

ಗ್ರಾಹಕರ ರಕ್ಷಣಾ ವೇದಿಕೆಯ ಸುಬ್ರಮಣಿ, ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಸಿಸಿಟಿವಿ ಇರುವುದಿಲ್ಲ, ಎಲ್ಲ ಕಚೇರಿಗಳಲ್ಲಿ ಬಯೊಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಿಲ್ಲ ಎಂದು ದೂರಿದರು.

ಬಾಗೂರು ಗ್ರಾಮದ ಕಾವೇರಮ್ಮ, 1987ರಲ್ಲಿ ಮಂಜೂರಾದ ಕೃಷಿ ಭೂಮಿಯನ್ನು ಬೇರೆಯವರಿಗೆ ಮತ್ತೆ ಮಂಜೂರು ಮಾಡಿದ್ದು, ಬಿಡಿಸಿಕೊಡುವಂತೆ ಮನವಿ ಮಾಡಿದರು. ಹರಗ ಗ್ರಾಮದ ಎಚ್.ಕೆ.ಗಿರೀಶ್, ಶಾಂತಳ್ಳಿ ಕಂದಾಯ ಇಲಾಖೆಯ ಅಧಿಕಾರಿಗಳೂ ರಸ್ತೆಯನ್ನು ಬಿಡಿಸಿಕೊಡುವ ನೆಪದಲ್ಲಿ ಸ್ಮಶಾನದ ಜಾಗವನ್ನು ಬೇರೆ ಸ್ಥಳದಲ್ಲಿ ಗುರುತಿಸಿ ನೀಡಿರುವ ಬಗ್ಗೆ ದೂರು ನೀಡಿದರು.

ಇಲಾಖೆಗಳಿಂದ ಯಾವುದೇ ಅಧಿಕಾರಿಗಳಿಂದ ಸಮಸ್ಯೆಗೊಳಪಟ್ಟಲ್ಲಿ ತಮ್ಮ ಸಮಸ್ಯೆಗೆ ಸಂಬಂಧಿಸಿದಂತೆ, ನಿಗದಿತ ಅರ್ಜಿ ಭರ್ತಿ ಮಾಡಿ, ನೋಟರಿಯಿಂದ ಆಫಿಡೆವಿಟ್ ಮಾಡಿಸಿ ದೂರಿನೊಂದಿಗೆ ನೀಡಬೇಕು. ಮಾಹಿತಿಗಾಗಿ ದೂ.ಸಂ.08272-295297 ನ್ನು ಸಂಪರ್ಕಿಸಬಹುದು ಎಂದು ಪವನ್‌ಕುಮಾರ್ ಮಾಹಿತಿ ನೀಡಿದರು.

ಸಭೆಯಲ್ಲಿ ವಿ.ಎಸ್.ನವೀನ್ ಕುಮಾರ್ ಮತ್ತು ತಾಲ್ಲೂಕು ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT