ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಕೋಟೆ ಬೆಟ್ಟದಲ್ಲಿ ಅರಳಿತು ನೀಲಿ ಕುರಿಂಜಿ

ಏಳು ವರ್ಷದ ಬಳಿಕ ಅರಳಿದ ಹೂವು
Last Updated 1 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ (ಕೊಡಗು): ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಮಾತ್ರ ಅರಳಿ, ಬೆಟ್ಟಗುಡ್ಡಗಳು ನೀಲಿಯಾಗಿ ಕಂಗೊಳಿಸುವ ಕಾಲ ಪ್ರಾರಂಭವಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕೋಟೆ ಬೆಟ್ಟ ಹಾಗೂ ಪುಷ್ಪಗಿರಿ ವ್ಯಾಪ್ತಿಯ ಕುಮಾರ ಪರ್ವತದಲ್ಲಿ ಕುರಿಂಜಿ ಹೂವುಗಳು ಅರಳಿ ನಿಂತಿದ್ದು ಕಣ್ಮನ ಸೆಳೆಯುತ್ತಿವೆ.

ಈ ಪರ್ವತಗಳಿಗೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ಅರಳಿರುವುದರಿಂದ ರಸ್ತೆಯಲ್ಲಿ ಸಂಚರಿಸುವವರು, ಇದರ ಸೌಂದರ್ಯ ಸವಿಯುತ್ತಿದ್ದಾರೆ. ಹೂವಿನ ಚೆಲುವಿನೊಂದಿಗೆ ಅನೇಕರು ನಲಿಯುತ್ತಿದ್ದಾರೆ. ಈ ಹೂವಿಗೆ ‘ಗುರ್ಗಿ’ ಅಂತಲೂ ಕರೆಯುತ್ತಾರೆ.

ಕೋಟೆ ಬೆಟ್ಟದಲ್ಲಿ 7 ವರ್ಷಗಳ ಬಳಿಕ ಈ ಹೂವು ಅರಳಿದ್ದು ತಿಂಗಳುಗಳ ಕಾಲ ತನ್ನ ಸೌಂದರ್ಯ ಹೊರ ಚೆಲ್ಲುತ್ತಿದೆ. ಪಶ್ಚಿಮಘಟ್ಟ ಸಂರಕ್ಷಿತ ಪ್ರದೇಶ ಆಗಿರುವುದರಿಂದ ಈ ಹೂವು ಇನ್ನೂ ಜೀವಂತವಾಗಿದ್ದು, ದೀರ್ಘ ಕಾಲದ ಬಳಿಕ ಕಾಫಿನಾಡನ್ನು ಭೂಲೋಕದ ಸ್ವರ್ಗವಾಗಿಸುತ್ತಿದೆ. ಸಂಘಜೀವಿಗಳಾಗಿ ಅರಳುವ ಹೂವು ಸಹ ಹೌದು.

ಧಾರ್ಮಿಕವಾಗಿಯೂ ಇತಿಹಾಸವಿದೆ. ಈ ಗುರ್ಗಿಯನ್ನು ಪ್ರೇಮದ ಸಂಕೇತವಾಗಿ ಪ್ರೇಮದ ಹೂವು ಎಂದೂ ಕರೆಯುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂವು ಅರಳಲಿದೆ ಎಂದು ಹಿರಿಯರು ಹೇಳುತ್ತಾರೆ. ಈ ಹೂವುಗಳು ಅರಳಿ ನಿಂತಾಗ ಕಾಂಡಗಳಲ್ಲಿ ಔಷಧೀಯ ಗುಣಗಳಿರುವುದರಿಂದ ನಾನಾ ಕಾಯಿಲೆಗೂ ಬಳಸುತ್ತಾರೆ.

ಈ ಕುರಿಂಜಿ ಹೂವುಗಳಲ್ಲಿ 250 ವಿಧವಿದೆ. ಅದರಲ್ಲಿ 46 ಜಾತಿಯ ಹೂವುಗಳು ಭಾರತ ದೇಶದಲ್ಲಿ ಕಂಡುಬರುತ್ತವೆ. ಕುರಿಂಜಿ ಹೂವಿನಲ್ಲಿ ನಾನಾ ವಿಧಗಳಿದ್ದು 5, 7, 12, 14 ವರ್ಷಗಳಿಗೊಮ್ಮೆ ಅರಳುವ ಪ್ರಭೇದವಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.

12 ವರ್ಷಕ್ಕೊಮ್ಮೆ ಅರಳುವ ಕುರಿಂಜಿ ಕುಮಾರ ಪರ್ವತ ಪ್ರದೇಶದಲ್ಲಿ2018ರಲ್ಲಿ ಅರಳಿ ನಿಂತು ಆಕರ್ಷಕವಾಗಿತ್ತು. ಈಗ ಅರಳಿರುವ ಕುರಿಂಜಿ 7 ವರ್ಷಕ್ಕೊಮ್ಮೆ ಅರಳುವ ಹೂವು ಎಂದು ಪುಷ್ಪಗಿರಿ ವೈಲ್ಡ್‌ಲೈಫ್‌ ಡಿಆರ್‌ಎಫ್‌ಒ ಶಶಿ ತಿಳಿಸಿದರು.

ಕುಮಾರ ಪರ್ವತದಲ್ಲಿ ಜನರಿಗೆ ಪ್ರವೇಶ ನಿರ್ಬಂಧವಿದೆ. ಈ ಸ್ಥಳಕ್ಕೆ ತೆರಳಿ ವೀಕ್ಷಿಸುವ ಅವಕಾಶವನ್ನು ಜನರು ಕಳೆದುಕೊಂಡಿದ್ದಾರೆ. ಆದರೆ, ಕೋಟೆ ಬೆಟ್ಟಕ್ಕೆ ತೆರಳಿ ನೋಡಬಹುದಾಗಿದೆ. ದೀರ್ಘಕಾಲದ ಬಳಿಕ ಅರಳುವ ಕುರಿಂಜಿ ಹೂವಿನ ಸೊಬಗನ್ನು ಸವಿಯಲು ಎಲ್ಲರಿಗೂ ಅನುಕೂಲವಾದರೆ ಸಾಕಷ್ಟು ಪ್ರವಾಸಿಗರು ಸಂಭ್ರಮಿಸಬಹುದು ಎಂದು ಕಾಜೂರು ಸತೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT