ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೊಮ್ಮಕ್ಕಡ ಪರಿಷತ್ತಿನಿಂದ ತಿನಿಸುಗಳ ಹಬ್ಬ

Published : 13 ಸೆಪ್ಟೆಂಬರ್ 2024, 3:55 IST
Last Updated : 13 ಸೆಪ್ಟೆಂಬರ್ 2024, 3:55 IST
ಫಾಲೋ ಮಾಡಿ
Comments

ನಾಪೋಕ್ಲು: ಕೂವಲೆ ಪುಟ್ಟ್, ಮದ್ದ್ ಪುಟ್ಟ್, ಬಾಳೆನುರ್ಕ್, ಬಡವಕಜ್ಜಾಯ, ಕೇಂಬು ಕರಿ, ಕಾಡು ಮಾಂಗೆ ಕರಿ, ಕುರುಕರಿ, ಚಕ್ಕೆಕುರು ಪಜ್ಜಿ… ಒಂದೇ ಎರಡೇ ಹತ್ತು ಹಲವು ಕೊಡವ ಸಮುದಾಯದ ತಿಂಡಿ ತಿನಿಸುಗಳು ನೆರೆದಿದ್ದವರ ಬಾಯಲ್ಲಿ ನೀರೂರಿಸಿದವು.

ಕೈಲ್ ಪೋಳ್ದ್ ತೀನಿ ನಮ್ಮೆಯ ವೈವಿಧ್ಯಮಯ ಕಾರ್ಯಕ್ರಮಗಳಿಗೆ ನಾಪೋಕ್ಲು ಕೊಡವ ಸಮಾಜ ಸಾಕ್ಷಿಯಾಯಿತು.

ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಗುರುವಾರ ನಡೆದ ಕೈಲ್ ಪೋಳ್ದ್ ತೀನಿ ನಮ್ಮೆ ಕಾರ್ಯಕ್ರಮವನ್ನು ಸಮಾಜಸೇವಕಿ ಕೇಟೋಳಿರ ಜಾಜಿ ಕುಟ್ಟಪ್ಪ ಮತ್ತು ತಿನಿಸುಗಳ ಪ್ರದರ್ಶನವನ್ನು ಸಮಾಜಸೇವಕಿ ಮಂಡೀರ ಸರೋಜ ದೇವಯ್ಯ ಉದ್ಘಾಟಿಸಿದರು.

ನಾಪೋಕ್ಲು ಕೆಪಿಎಸ್ ಶಾಲೆಯ ಪ್ರಾಂಶುಪಾಲರಾದ ಮೇದುರ ವಿಶಾಲ ಕುಶಾಲಪ್ಪ ಮಾತನಾಡಿ, ‘ಕೊಡವ ಜನಾಂಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗಷ್ಟೇ ಜನಾಂಗದ ಅಭಿವೃದ್ಧಿ ಸಾಧ್ಯ. ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವ ಜನಾಂಗ ರೂಢಿಸಿಕೊಳ್ಳಬೇಕು’ ಎಂದರು.

‘ಸಮಾಜದ ಮಕ್ಕಳಿಗೆ ಪಾರಂಪರಿಕ ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕಿದೆ. ಮಕ್ಕಳ ಪೋಷಣೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂಥದ್ದು ಪೋಷಕರ ಜವಾಬ್ದಾರಿ.ಮಹಿಳೆಯರು ಸ್ವಾವಲಂಬಿಗಳಾಗಲು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ‘ಹಬ್ಬ, ಹರಿದಿನ, ಆಚಾರ, ವಿಚಾರಗಳಲ್ಲಿ ಕೊಡವ ಭಾಷೆಯ ಬಳಕೆ ಹೆಚ್ಚು ಹೆಚ್ಚು ಆಗಬೇಕು. ಭಾಷೆ ಉಳಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ತೀನಿ ನಮ್ಮೆ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಕೊಡವ ಮಹಿಳೆಯರು ಪಾಲ್ಗೊಳ್ಳಬೇಕು. ಈ ಕೂಟದಲ್ಲಿ ಪುರುಷರು ಸಹ ತಿಂಡಿ ತಿನಿಸು ತಯಾರಿಸಿ ಪಾಲ್ಗೊಳ್ಳುವಂತಾಗಲಿ’ ಎಂದರು.

ಕೊಡವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಕೊಡವ ಮಹಿಳೆಯರ ಪಾತ್ರ ವಿಷಯದ ಕುರಿತು ಕದ್ದಣಿಯಂಡ ವಂದನಾ ಚಿಣ್ಣಪ್ಪ ವಿಚಾರ ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಳೆಯಡ ನಿಶಾ ಮೇದಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಗ್ರಾಮದ ಲೇಖಕಿ ಅಪ್ಪಚೆಟ್ಟೋಳಂಡ ವನು ವಸಂತ, ಮಡಿಕೇರಿಯ ಕೆಎಸ್ಒಯು ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮುಕ್ಕಾಟಿರ ಸ್ಮಿತಾ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.

ಬಾಯಲ್ಲಿ ನೀರೂರಿಸುವ ಮಳೆಗಾಲದ ಖಾದ್ಯಗಳಾದ ಸಾರು, ಸಾಂಬಾರು, ಚಟ್ನಿ, ಪಲ್ಯ ಸೇರಿದಂತೆ ನೂರಾರು ತಿನಿಸು ಹಾಗೂ ವಿವಿಧ ಕ್ರೀಡಾ ಕೂಟ ಸ್ಪರ್ಧೆ ಆಯೋಜಿಸಿದ ಬಳಿಕ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಉಪ ಅಧ್ಯಕ್ಷ ಕರವಂಡ ಲವ ನಾಣಯ್ಯ, ಕೊಡವ ಸಮಾಜದ ಮತ್ತು ಮೊಮ್ಮಕ್ಕಡ ಪರಿಷತ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ  ಪರಿಷತ್ ವತಿಯಿಂದ  ಕೊಡವ ಸಮಾಜದಲ್ಲಿ ಗುರುವಾರ ನಡೆದ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ತಿನಿಸುಗಳ ಪ್ರದರ್ಶನವನ್ನು ಸಮಾಜ ಸೇವಕಿ ಮಂಡೀರ ಸರೋಜ ದೇವಯ್ಯ  ಉದ್ಘಾಟಿಸಿದರು.
ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ  ಪರಿಷತ್ ವತಿಯಿಂದ  ಕೊಡವ ಸಮಾಜದಲ್ಲಿ ಗುರುವಾರ ನಡೆದ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ತಿನಿಸುಗಳ ಪ್ರದರ್ಶನವನ್ನು ಸಮಾಜ ಸೇವಕಿ ಮಂಡೀರ ಸರೋಜ ದೇವಯ್ಯ  ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT