ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಶ್ರದ್ಧಾಭಕ್ತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯಿಂದ 60ನೇ ವರ್ಷದ ಅಂಗವಾಗಿ ಶನಿವಾರ ಬೆಳಿಗ್ಗೆ ಗಣಹೋಮದ ನಂತರ 11.30ಕ್ಕೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ನಂತರ ವಿಶೇಷ ಪೂಜೆ, ಹೂವಿನ ಅಲಂಕಾರ, ಪೂಜೆ ನೆರವೇರಿಸಲಾಯಿತು, ಮುಖ್ಯ ಅರ್ಚಕ ದರ್ಶನ್ ಭಟ್ ಅವರ ನೇತೃತ್ವದಲ್ಲಿ ಮಹಾಪೂಜೆ, ಮಹಾಮಂಗಳಾರತಿ ನಡೆಯಿತು. ಸುತ್ತಮುತ್ತಲಿನ ನೂರಾರು ಭಕ್ತರು ಆಗಮಿಸಿ ಗೌರಿ, ಗಣೇಶನಿಗೆ ಪೂಜೆ ಸಲ್ಲಿಸಿದರು. 9 ದಿನಗಳ ಕಾಲ ಪೂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇಂದು ಜಾದೂ ಪ್ರದರ್ಶನ: ಸೋಮವಾರ (ಸೆ.9) ಸಂಜೆ 7 ಗಂಟೆಯಿಂದ ಅಮ್ಮತ್ತಿಯ ರಾಷ್ಟ್ರಪ್ರಶಸ್ತಿ ವಿಜೇತ ರಾಜೇಶ್ ಮತ್ತು ತಂಡದಿಂದ ಜಾದೂ ಪ್ರದರ್ಶನ ನಡೆಯಲಿದೆ.
ಸಮಿತಿಯ ವಿಘ್ನೇಶ್, ಪದ್ಮನಾಭ, ಸುರೇಶ್ ಗೋಪಿ, ಪಿ.ಆರ್.ಸುನಿಲ್ ಕುಮಾರ್, ಧನುಕಾವೇರಪ್ಪ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಸಮೀಪದ ನಾರ್ಗಾಣೆ ಗ್ರಾಮದ ಶ್ರೀದೇವಿ ಬಡಾವಣೆಯ ವಿನಾಯಕ ಸೇವಾ ಸಮಿತಿಯ 11ನೇ ವರ್ಷದ ಅಂಗವಾಗಿ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಇದಕ್ಕೂ ಮೊದಲು ದೇವಾಲಯದ ಅನತಿ ದೂರದಲ್ಲಿರುವ ಗೌರಿ ಕೆರೆಯಲ್ಲಿ ಪೂಜೆ ಸಲ್ಲಿಸಿ ಗಂಗಾ ಜಲದೊಂದಿಗೆ ಚಂಡೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಆಗಮಿಸಲಾಯುತು. ಗಣಪತಿ ಹೋಮ ನಡೆದ ನಂತರ ವಿಶೇಷ ಅಲಂಕಾರದೊಂದಿಗೆ ಪ್ರತಿಷ್ಠಾಪನಾ ವಿಧಿವಿಧಾನಗಳು ನಡೆದವು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ವಿತರಿಸಲಾಯಿತು. ಸುತ್ತಮುತ್ತಲಿನ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಪ್ರಮುಖರಾದ ರಾಜು ರೈ, ವಿವೇಕ ರೈ, ಪುನಿತ್, ಪಿ.ಆರ್.ಸುನಿಲ್ ಕುಮಾರ್, ಪ್ರಶಾಂತ್ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಮೀಪದ ಕೆದಕಲ್ ಗ್ರಾಮದ ಮಹದೇಶ್ವರ ಈಶ್ವರ ದೇವಾಲಯದಲ್ಲಿ ಬಾಲಕ ಭಕ್ತ ಮಂಡಳಿಯಿಂದ 12ನೇ ವರ್ಷದ ಗೌರಿ ಗಣೇಶೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ವಿಶೇಷ ಪೂಜೆ, ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆದು ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಕೂರಿಸಿ ಮೆರವಣಿಗೆ ಮೂಲಕ ಸಾಗಿ ವಿಸರ್ಜಿಸಲಾಯಿತು.
ಸಮೀಪದ ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿಯಿಂದ 6ನೇ ವರ್ಷದ ಗೌರಿ, ಗಣೇಶ ಪ್ರತಿಷ್ಠಾಪನೆ ಮಾಡಲಾಯಿತು. ಶನಿವಾರ ಬೆಳಿಗ್ಗೆ 5ಗಂಟೆಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಂಜೆ 6 ಗಂಟೆಯಿಂದ ಬೈತೂರಪ್ಪ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಮಠದ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿಯಿಂದ ಗಣಪತಿ ಪ್ರತಿಷ್ಠಾಪನೆ ನೆರವೇರಿತು.
ಬೆಳಿಗ್ಗೆ ಸ್ಥಳ ಶುದ್ಧೀಕರಣ, ಗಣಹೋಮ, ಬೆಳಿಗ್ಗೆ 7.30ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಮತ್ತು ಸಂಜೆ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಇಲ್ಲಿನ ಮಾದಾಪುರ ರಸ್ತೆಯ ವೃಕ್ಷೋಧ್ಭವ ಶಕ್ತಿ ಗಣಪತಿ ದೇವಾಲಯ, ಕೊಡಗರಹಳ್ಳಿ, ನಾಕೂರು, ಕಾನ್ ಬೈಲ್‌ಗಳಲ್ಲೂ ಗಣೇಶ ಪ್ರತಿಷ್ಠಾಪನೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.