ಮಂಗಳವಾರ, ಅಕ್ಟೋಬರ್ 20, 2020
22 °C
ಗಣೇಶೋತ್ಸವ: ಕನಿಷ್ಠ ಸಂಖ್ಯೆಯೊಂದಿಗೆ ಆಚರಣೆಗೆ ಅವಕಾಶ, ಸರ್ಕಾರದಿಂದ ಪರಿಷ್ಕೃತ ಆದೇಶ

ಸತತ ಎರಡನೇ ವರ್ಷವೂ ಕೊಡಗಿನಲ್ಲಿ ಇಲ್ಲವಾದ ಗಣೇಶೋತ್ಸವದ ಸಂಭ್ರಮ!

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಈ ವರ್ಷವೂ ಕೊಡಗಿನಲ್ಲಿ ಗಣೇಶೋತ್ಸವದ ಸಂಭ್ರಮ ಇಲ್ಲ. ಕಳೆದೆರಡು ವರ್ಷಗಳಿಂದ ಮಹಾಮಳೆ, ಭೂಕುಸಿತ ಹಾಗೂ ‍ಪ್ರವಾಹದಿಂದ ಗಣೇಶೋತ್ಸವಕ್ಕೆ ಕೊಡಗಿನಲ್ಲಿ ಅಡ್ಡಿ ಉಂಟಾಗಿತ್ತು. ಈ ವರ್ಷವು ಪ್ರವಾಹ ಹಾಗೂ ಭೂಕುಸಿತದ ಜತೆಗೆ ಸಾಂಕ್ರಾಮಿಕ ಕಾಯಿಲೆ ಕೊರೊನಾ ಸಹ ಸೇರಿಕೊಂಡು ಸಂಭ್ರಮವನ್ನು ಕಸಿದಿದೆ.

ಜಿಲ್ಲೆಯಲ್ಲಿ ಈ ವೇಳೆಗೆ ವಿವಿಧ ಸಂಘಟನೆಗಳು, ಗಣೇಶೋತ್ಸವ ಆಚರಣೆಗೆ ತಯಾರಿ ನಡೆಸುತ್ತಿದ್ದವು. ಆದರೆ, ಸಂಭ್ರಮ ಕಾಣಿಸುತ್ತಿಲ್ಲ. 

ಆರಂಭದಲ್ಲಿ ಮನೆ, ದೇವಸ್ಥಾನ ಹೊರತು ‍‍‍ಪಡಿಸಿ ರಸ್ತೆ, ಗಲ್ಲಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿತ್ತು. ಆದರೆ, ಮಂಗಳವಾರ ಪರಿಷ್ಕೃತ ಆದೇಶ ಹೊರಡಿಸಿದೆ.

ತಮ್ಮ ಮನೆಗಳಲ್ಲಿ, ಸರ್ಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶದಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡಬಹುದು. ಸ್ಥಳೀಯ ಆಡಳಿತದ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದೆ. ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶ ಇಲ್ಲ ಎಂದು ಸೂಚಿಸಿದೆ. ಆದರೆ, ಜಿಲ್ಲೆಯಲ್ಲಿ ತಯಾರಿ ಮಾತ್ರ ಕಾಣಿಸುತ್ತಿಲ್ಲ. 

ಲಾಕ್‌ಡೌನ್‌ ತೆರವು ಮಾಡಲಾಗಿದೆ. ಯಾವುದೇ ಕಟ್ಟುಪಾಡು ಇಲ್ಲ. ವೈನ್‌ ಶಾಪ್‌ಗಳಿಗೆ ಅನುಮತಿ ನೀಡಲಾಗಿದೆ. ದೇಗುಲಗಳೂ ನಿತ್ಯ ಬಾಗಿಲು ತೆಗೆದು ಪೂಜಾ ಕೈಂಕರ್ಯ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಗಣೇಶೋತ್ಸವಕ್ಕೆ ಏಕೆ ಅಡ್ಡಿ ಎಂದು ಸಂಘಟನೆಗಳು ಪ್ರಶ್ನಿಸಿದ್ದವು. ಇದರಿಂದ ಎಚ್ಚೆತ್ತ ಸರ್ಕಾರವು, ಗಣೇಶೋತ್ಸವಕ್ಕೆ ಷರತ್ತುಬದ್ಧ ಅವಕಾಶ ನೀಡಿದೆ.  

2018ರಲ್ಲಿ ಜಿಲ್ಲೆಯ ಮಹಾಮಳೆ ಸುರಿದು ಜಿಲ್ಲೆಯನ್ನೇ ನಡುಗಿಸಿತ್ತು. ಗೌರಿ, ಗಣೇಶ ಹಬ್ಬ ಬರುವ ವೇಳೆಗೆ ಸಾವಿರಾರು ಜನರು ಸಂತ್ರಸ್ತರಾಗಿದ್ದರು. ಇನ್ನು 2019ರಲ್ಲೂ ಕಾವೇರಿ ಉಕ್ಕೇರಿ ನೂರಾರು ಮಂದಿಯನ್ನು ನೆಲೆ ಕಳೆದುಕೊಳ್ಳುವಂತೆ ಮಾಡಿತ್ತು.

ಈ ವರ್ಷವೂ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಗಜರಾಜಗಿರಿಯ ಬೆಟ್ಟವೇ ಕುಸಿದಿರುವುದು ಜಿಲ್ಲೆಯ ಜನರಿಗೆ ನೋವು ತರಿಸಿದೆ. ಆ ನೋವು ಮರೆಯಾಗಿ ಜನರು ಸಹಜಸ್ಥಿತಿಯತ್ತ ಮರಳಲು ಇನ್ನೂ ಕೆಲವು ತಿಂಗಳು ಬೇಕು. ಗಣೇಶೋತ್ಸವದ ಮೂಲಕ ನೋವು ಮರೆಯೋಣವೆಂದರೂ ಕೊರೊನಾ ಸಹ ಕಾಡುತ್ತಿದೆ ಎಂದು ನಗರದ ನಿವಾಸಿ ಹಿತೇಶ್‌ ನೋವು ತೋಡಿಕೊಳ್ಳುತ್ತಾರೆ.

ಮಡಿಕೇರಿಯ ಕಾನ್ವೆಂಟ್‌ ಜಂಕ್ಷನ್‌, ಕೊಹಿನೂರು ರಸ್ತೆಯಲ್ಲಿ ಹಿಂದೂ ಯುವ ಶಕ್ತಿ, ಶಾಂತಿನಿಕೇತನ ಯುವಕ ಸಂಘದಿಂದ ಪ್ರತಿವರ್ಷ ಅದ್ದೂರಿ ಗಣೇಶೋತ್ಸವ ನಡೆಯುತ್ತಿತ್ತು. ಅವರ್‍ಯಾರೂ ಈ ವರ್ಷ ಸಿದ್ಧತೆ ಆರಂಭಿಸಿಲ್ಲ. ಹಿಂದೂ ಯುವ ಶಕ್ತಿಯಿಂದ ಗಣೇಶ ಚತುರ್ಥಿಯಂದೇ ಬೆಳಿಗ್ಗೆ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಂದು ಸಂಜೆಯೇ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಸಂಭ್ರಮ ಇಲ್ಲವಾಗಿದೆ.

‘ಇನ್ನೂ ತಯಾರಿ ನಡೆದಿಲ್ಲ. ಸರ್ಕಾರವು ಪರಿಷ್ಕೃತ ಆದೇಶ ಹೊರಡಿಸಿದೆ. ಇನ್ನು ನೋಡಬೇಕು’ ಎಂದು ಸಂಘಟನೆಗಳ ಮುಖಂಡರು ಹೇಳುತ್ತಾರೆ.

ಶಾಂತಿನಿಕೇತನ ಯುವಕ ಸಂಘದಿಂದ ಪ್ರತಿವರ್ಷವೂ ವಿಭಿನ್ನ ಆಚರಣೆ ನಡೆಯುತ್ತಿತ್ತು. 8ರಿಂದ 10 ದಿನಗಳ ಕಾಲ ಪೂಜೆ ಸಲ್ಲಿಸಿ ಬಳಿಕ ಅದ್ದೂರಿ ಶೋಭಾಯಾತ್ರೆ ನಡೆಸಿ ವಿಸರ್ಜನೆ ಮಾಡಲಾಗುತ್ತಿತ್ತು. ವಿದ್ಯುತ್‌ ಬೆಳಕಿನಲ್ಲಿ ಮಂಟಪಗಳು ಕಂಗೊಳಿಸುತ್ತಿದ್ದವು. ಪೌರಾಣಿಕ ಕಥಾ ಸಾರಾಂಶವುಳ್ಳ ಪ್ರದರ್ಶನವೂ ಇರುತ್ತಿತ್ತು.

ಗಣೇಶೋತ್ಸವ ಆಚರಣೆಯಲ್ಲಿ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ವಿರಾಜಪೇಟೆ ಪಟ್ಟಣದಲ್ಲಿ ಈ ಬಾರಿಯ ಹಬ್ಬಕ್ಕೆ ಸೂತಕದ ಛಾಯೆ ಆವರಿಸಿದೆ. ಈಚಿನ ವರ್ಷಗಳಲ್ಲಿ ಪಟ್ಟಣದಲ್ಲಿ ಗಣೇಶೋತ್ಸವ ಕೇವಲ ಒಂದು ವರ್ಗದ ಹಬ್ಬವಾಗಿ ಉಳಿದುಕೊಂಡಿಲ್ಲ, ಊರ ಹಬ್ಬವಾಗಿ ಬೆಳೆದಿತ್ತು. ಜಿಲ್ಲೆಯಲ್ಲಿ ದಸರೆಗೆ ಮಡಿಕೇರಿ ಹೇಗೋ, ಹಾಗೆ ಗೌರಿ-ಗಣೇಶ ಉತ್ಸವ ಆಚರಣೆಗೆ ವಿರಾಜಪೇಟೆ ಪ್ರಸಿದ್ಧಿ. ಆದರೆ, ಈ ವರ್ಷ ಯಾವುದೇ ತಯಾರಿಯೂ ಇಲ್ಲವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು