ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ | ಗೋವುಗಳ ಕಳ್ಳ ಸಾಗಾಟ ಜಾಲ ಪತ್ತೆ: ಆರೋಪಿಯನ್ನು ಹಿಡಿದ ಗ್ರಾಮಸ್ಥರು

Published 4 ಮಾರ್ಚ್ 2024, 4:45 IST
Last Updated 4 ಮಾರ್ಚ್ 2024, 4:45 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯದಲ್ಲಿನ ಕಾಡು ದನಗಳಿಗೆ ಹಲಸಿನ ಹಣ್ಣಿನ ಆಸೆ ತೋರಿಸಿ, ಅವುಗಳಿಗೆ ಉರುಳು ಹಾಕಿ ಹಿಡಿಯಲು ಯತ್ನಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಈ ಕೃತ್ಯದಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

‘ಯಡವನಾಡು ಅರಣ್ಯ ಪ್ರದೇಶದಲ್ಲಿ ಮೇಯುತ್ತಿದ್ದ ಜಾನುವಾರುಗಳಿಗೆ ಹಲಸಿನ ಹಣ್ಣು ನೀಡಿ, ನಂತರ ಕೊರಳಿಗೆ ಉರುಳು ಹಾಕಿ ಅಪಹರಿಸಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ಕೇರಳ ಮಾನಂದವಾಡಿಯ ಝಾಕೀರ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಇವನೊಂದಿಗಿದ್ದ ಇಬ್ಬರು ಪರಾರಿಯಾಗಿದ್ದಾರೆ. ಮಾನಂದವಾಡಿಯ ಉಬೇದ್ ಹಾಗೂ ಮುನ್ನಾ ಎಂಬುವವರೊಂದಿಗೆ ತಾನು ಇಲ್ಲಿಗೆ ಬಂದಿರುವುದಾಗಿ ಝಾಕೀರ್‌ ಮಾಹಿತಿ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಯಡವನಾಡು ಮೀಸಲು ಅರಣ್ಯದಲ್ಲಿ ಹಲವು ಬೀಡಾಡಿ ಕಾಡು ದನಗಳಿದ್ದು, ಇವುಗಳನ್ನು ಯಾರೂ ನಿಯಂತ್ರಣ ಮಾಡುತ್ತಿಲ್ಲ. ಇವುಗಳು ಎಲ್ಲೆಂದರಲ್ಲಿ ಸುತ್ತುತ್ತಾ, ಸುತ್ತಲಿನ ಕೃಷಿಕರು ಹಾಗೂ ರಾತ್ರಿ ಸಮಯದಲ್ಲಿ ವಾಹನ ಚಾಲಕರಿಗೆ ತೊಂದರೆ ಕೊಡುತ್ತಿವೆ. ಇವುಗಳ ನಿಯಂತ್ರಣ ಮಾಡಲು ಸಾಕಷ್ಟು ಬಾರಿ ಸ್ಥಳೀಯರು, ಐಗೂರು ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಪಶು ವೈದ್ಯಕೀಯ ಇಲಾಖೆಗಳಿಗೆ ಮನವಿ ಮಾಡಿದರೂ, ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇಂತಹ ದನಗಳನ್ನು ಸಾಗಿಸುವ ಜಾಲವೊಂದು ಸಕ್ರಿಯವಾಗಿರುವುದು ಈ ಘಟನೆಯಿಂದ ಗೊತ್ತಾಗಿದೆ.

ಈ ಬಗೆಯ ದನಗಳ ಸಾಗಾಟ ಕುರಿತು ಹಿಂದಿನ ವರ್ಷವೇ ದೂರು ದಾಖಲಾಗಿದ್ದರೂ, ಸಾಗಾಟ ತಡೆಯುವ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT