ಶನಿವಾರ, ಏಪ್ರಿಲ್ 4, 2020
19 °C

ಚೆಟ್ಟಿಮಾನಿಯಲ್ಲಿ ಗೋಶಾಲೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ತಾಲ್ಲೂಕಿನ ಚೆಟ್ಟಿಮಾನಿ ಗೋಶಾಲೆಯಲ್ಲಿ ಆರಂಭಿಸಿರುವ ಗೋಶಾಲೆಗೆ ಮಾರ್ಚ್‌ 12ರಿಂದ ಬಿಡಾಡಿ ಗೋವುಗಳನ್ನು ತಂದು ಬಿಡಬಹುದು. ಅವುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಆಶ್ರಯ ನೀಡಲಾಗುವುದು ಎಂದು ಶ್ರೀಕೃಷ್ಣ ಗೋಶಾಲೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಗ್ರಾಮೀಣ ಪ್ರದೇಶಗಳ ಗೋವುಗಳು ಹಾಗೂ ಎಮ್ಮೆಗಳು ಬೀದಿ ಪಾಲಾದವು. ಆದ್ದರಿಂದ, ಪೋಷಿಸಲಾಗದ ಬಿಡಾಡಿ ಗೋವುಗಳನ್ನು ಟ್ರಸ್ಟ್ ಮೂಲಕ ಭಾಗಮಂಡಲದ ಚೆಟ್ಟಿಮಾನಿ ಗ್ರಾಮದಲ್ಲಿ ಸುಮಾರು 6 ಎಕರೆ ಪ್ರದೇಶದಲ್ಲಿ ಶ್ರೀಕೃಷ್ಣ ಗೋಶಾಲೆಯನ್ನು ಆರಂಭಿಸಿಲಾಗಿದ್ದು, ಇದೀಗ ಗೋಶಾಲೆಗೆ ಕೆಲವು ಗ್ರಾಮಸ್ಥರು ಜಾನುವಾರುಗಳನ್ನು ತಂದು ಬಿಟ್ಟಿದ್ದಾರೆ ಎಂದು ಹೇಳಿದರು.

ವಿವಿಧ ಸಂಘ–ಸಂಸ್ಥೆಗಳು ಬಿಡಾಡಿ ಹಸುಗಳನ್ನು ತಂದು ಬಿಡಲು ನಿರ್ಧರಿಸಿದ್ದಾರೆ. ಆದ್ದರಿಂದ, ನೂರಾರು ಜಾನುವಾರುಗಳ ಪೋಷಣೆ ಮತ್ತು ನಿರ್ವಹಣೆಗೆ ವಿಶಾಲವಾದ ಕೊಟ್ಟಿಗೆ (ಶೆಡ್) ಆಹಾರ, ಔಷಧಿ, ನೀರು ವಿದ್ಯುತ್‌ ಅಗತ್ಯವಿದೆ. ಮಾಸಿಕ ಅಂದಾಜು ₹ 2.50 ಲಕ್ಷ ವೆಚ್ಚವು ನಿರ್ವಹಣೆಗೆ ಆಗಲಿದೆ. ಆರೋಗ್ಯ ಸಮಸ್ಯೆ ಅನುಭವಿಸುವ ಗೋವುಗಳಿಗೆ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಗೋಶಾಲೆಯಿರುವ ಪ್ರದೇಶದಲ್ಲಿ ಹೆಚ್ಚು ಮಳೆ ಆಗುವುದರಿಂದ ಶೀಘ್ರ ಚಾವಣಿ ಅಳವಡಿಸುವ ಅಗತ್ಯವಿದೆ. ಕೊಡಗು ಜಿಲ್ಲೆಗೆ ಇನ್ನೆರಡು ತಿಂಗಳಿನಲ್ಲಿ ಮಳೆಗಾಲ ಆರಂಭಗೊಳ್ಳಲಿದೆ. ಬಿಡಾಡಿ ಹಸುಗಳ ರಕ್ಷಣೆಗಾಗಿ ಕೊಟ್ಟಿಗೆಯನ್ನು ನಿರ್ಮಿಸಲು ಮತ್ತು ಆಹಾರವನ್ನು ಸಂಗ್ರಹಿಸಲು ಆರ್ಥಿಕ ನೆರವು ಬೇಕಾಗಿದ್ದು ದಾನಿಗಳು ಸಹಾಯ ಮಾಡಬಹುದು ಎಂದು ಅವರು ಕೋರಿದರು.

ಕೊಟ್ಟಿಗೆ (ಶೆಡ್) ನಿರ್ಮಾಣಕ್ಕೆ ಅಗತ್ಯವಿರುವ ಕಲ್ಲು, ಮರಳು, ಇಟ್ಟಿಗೆ, ಸಿಮೆಂಟ್, ಚಾವಣಿ ಶೀಟ್‌ಗಳು ಮತ್ತು ಗೋವಿನ ಆಹಾರವನ್ನು ದಾನವಾಗಿ ನೀಡಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿ ಎ.ಜಿ.ವಸಂತ್, ಕುಮಾರ್, ಸಲಹೆಗಾರರಾದ ಗಣೇಶ್, ಪಳಂಗಡ ಈಶ್ವರ್ ಹಾಜರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)