ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ: ಪರ್ಯಾಯ ಕೆಲಸದ ಮೊರೆ ಹೋದ ‘ಅತಿಥಿ ಉಪನ್ಯಾಸಕರು’

ಬೀದಿಗೆ ಬಿದ್ದ ಉಪನ್ಯಾಸಕರ ಬದುಕು, ಸಿಗದ ವೇತನ, ಸರ್ಕಾರದ ವಿರುದ್ಧ ಆಕ್ರೋಶ
Last Updated 10 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ದಿನದಿಂದ ದಿನಕ್ಕೆ ಕೊರೊನಾ ವೈರಸ್ ವ್ಯಾಪಿಸುತ್ತಿದ್ದು, ಶಾಲಾ-ಕಾಲೇಜು ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿಯಿದದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಕಾಲೇಜಿನಿಂದ ಬರುವ ವೇತನದಲ್ಲಿಯೇ ಜೀವನ ನಡೆಸುತ್ತಿದ್ದ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಗೆ ಇದರಿಂದ ಬಹುದೊಡ್ಡ ಆಘಾತವಾಗಿದೆ.

ಮಾರ್ಚ್ ತಿಂಗಳ ನಂತರ ಪದವಿ ಕಾಲೇಜು ತೆರೆಯದ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ತಾವು ನಂಬಿರುವ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಇಲ್ಲದೇ ಸಿಕ್ಕಸಿಕ್ಕ ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಿ, ತಮ್ಮ ದಿನನಿತ್ಯದ ಬದುಕನ್ನು ಮುನ್ನೆಡುಸುತ್ತಿದ್ದಾರೆ.

ಕೊಡಗಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 100ಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರಿದ್ದು, ಲಾಕ್‌ಡೌನ್ ನಂತರದಲ್ಲಿ ತೋಟದ ಕಾರ್ಮಿಕರಾಗಿ, ಹಣ್ಣು ಹಂಪಲು ಮಾರಾಟಗಾರರಾಗಿ, ಗಾರೆ ಕೆಲಸ, ಕೂಲಿ ಕೆಲಸ, ಅಂಗಡಿಗಳಲ್ಲಿ ಕೆಲಸ ಮಾಡುವ ಸ್ಥಿತಿಗೆ ಬಂದಿದ್ದಾರೆ. ಅದರಿಂದ ಬಂದ ಆದಾಯದಿಂದ ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ.

ಲಾಕ್‌ಡೌನ್ ನಂತರದಲ್ಲಿ ಮಾನವೀಯತೆಯಿಂದ ಸರ್ಕಾರ ವೇತನ ನೀಡಬೇಕಾಗಿತ್ತು. ಆ ಬಗ್ಗೆ ಉನ್ನತ ಶಿಕ್ಷಣ ಸಚಿವರು ಚಕಾರವೇ ಎತ್ತದಿರುವುದು ಬೇಸರ ತಂದಿದೆ ಎನ್ನುತ್ತಾರೆ ಮಡಿಕೇರಿ ಸ.ಪ್ರ ಕಾಲೇಜಿನ ಅತಿಥಿ ಉಪನ್ಯಾಸಕ ಸುರೇಶ್.

ಈ ಉಪನ್ಯಾಸಕ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿಯನ್ನು ಅವಲಂಬಿಸಬೇಕು ಎಂದು ಭಾವಿಸಿದರೆ ಕೊಡಗಿನಲ್ಲಿ ಅಂತಹ ದೊಡ್ಡ ದೊಡ್ಡ ಕಂಪನಿಗಳಿಲ್ಲ. ದೂರದ ಬೆಂಗಳೂರು, ಮಂಗಳೂರು, ಮೈಸೂರು, ಕೇರಳಕ್ಕೆ ಉದ್ಯೋಗ ಅರಸಿ ಹೋಗಬೇಕು. ಅದು ಕೂಡ ಕಷ್ಟಕರವಾಗಿದೆ ಎನ್ನುತ್ತಾರೆ ಮಹಿಳಾ ಉಪನ್ಯಾಸಕಿಯೊಬ್ಬರು.

ಈ ಬಾರಿಯ ಅಧಿವೇಶನದಲ್ಲಿ ಎಂಎಲ್‌ಸಿಗಳ ಒತ್ತಾಯಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ‘ಅತಿಥಿ ಉಪನ್ಯಾಸಕರ ಕಷ್ಟವನ್ನು ಆಲಿಸಿದ್ದೇನೆ. ಅವರಿಗೆ 5 ತಿಂಗಳ ವೇತನ ಬಿಡುಗಡೆಗೊಳಿಸಲು ಆದೇಶ ನೀಡಿದ್ದೇನೆ’ ಎಂದು ಮಾಹಿತಿ ನೀಡಿದ್ದರು. ಆದರೆ, ಇದುವರೆಗೆ ವೇತನದ ಬಗ್ಗೆ ಸರ್ಕಾರ ಏನು ಮಾತನಾಡುತ್ತಿಲ್ಲ ಎಂಬ ದೂರುಗಳು ಕೂಡ ಇದೆ.

ಸೇವಾ ಭದ್ರತೆ ಬೇಕು:ಅತಿಥಿ ಉಪನ್ಯಾಸಕರಿಗೆ ಭದ್ರತೆ ಒದಗಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವರಾಗಲಿ, ಮುಖ್ಯಮಂತ್ರಿಯಾಗಲಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿರುವುದು ಅತಿಥಿ ಉಪನ್ಯಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅತಿಥಿ ಉಪನ್ಯಾಸಕಿ ಗಾಯತ್ರಿ ಅವರು, ‘ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ವಿಚಾರ ಕೂಡಲೇ ಸಂಪುಟ ಸಮಿತಿಗೆ ತರಲು ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರು ಕ್ರಮ ಕೈಗೊಳ್ಳಬೇಕು. ನಮಗೆ ನ್ಯಾಯ ಒದಗಿಸಬೇಕು ಎಂದು ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT