ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ಲು ಶೆಟ್ಟಳ್ಳಿ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

ಮಾರಮ್ಮನ ಪೂಜೆ, ಸುಗ್ಗಿ ಮುಕ್ತಾಯ ಪೂಜೆ ಇಂದು
Published 30 ಏಪ್ರಿಲ್ 2024, 5:11 IST
Last Updated 30 ಏಪ್ರಿಲ್ 2024, 5:11 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಹಲವು ಧಾರ್ಮಿಕ ಆಚರಣೆಗಳೊಂದಿಗೆ ಶ್ರದ್ಧಾ–ಭಕ್ತಿಯಿಂದ ಸೋಮವಾರ ನಡೆಯಿತು.

ಏ. 18ರಿಂದ ಗ್ರಾಮದಲ್ಲಿ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದಲೂ ಗ್ರಾಮದಲ್ಲಿ ಹಲವು ಕಟ್ಟುಪಾಡುಗಳೊಂದಿಗೆ ವಿಶೇಷ ಶ್ರದ್ಧೆಯಿಂದ ದೇವರ ಒಡೆಕಾರರು ಹಾಗೂ ಗ್ರಾಮಸ್ಥರು ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಬೀರೇದೇವರಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವದಲ್ಲಿ ದೇವರಿಗೆ ಊಲು ಏರಿಸುವುದು, ದೊಡ್ಡಸುಗ್ಗಿ, ಮಹಾಮಂಗಳಾರತಿ, ಹಗಲು ಸುಗ್ಗಿ, ಹೆದ್ದೇವರ ಪೂಜೆ, ಮಲ್ಲು ಸುಗ್ಗಿ, ಪ್ರಸಾದ ವಿನಿಯೋಗ ನಡೆದವು. 29ರಂದು ಬೆಳಿಗ್ಗೆಯಿಂದಲೂ ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಸಬ್ಬಮ್ಮ ದೇವಿಯ ದೇವಾಲಯ ಹಾಗೂ ಸುಗ್ಗಿ ಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು. ಸುಗ್ಗಿ ಕಂಬದಲ್ಲಿ ದೇವರ ಊಲು ತೂಗುವುದು, ಮಲ್ಲು ಕುಣಿಯುವುದು, ಬಿಲ್ಲು ಕುಣಿತ, ಬಾಳೆ ಚೊಟ್ಟೆ ಕುಣಿತ, ಸುಗ್ಗಿ ಕುಣಿತ, ದೇವರಿಗೆ ಈಡುಗಾಯಿ ಹಾಕುವ ಕಾರ್ಯಗಳು ನಡೆದವು.

ಇದೇ ಸಂದರ್ಭ ಗ್ರಾಮಸ್ಥರಿಗೆ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಕ್ಕಳಿಗೆ ಕಾಯಿ ಕೀಳುವ ಸ್ಪರ್ಧೆಗಳು ನಡೆದವು. ದೇವರ ಒಡೆಕಾರರು ವಿಶೇಷ ಶುದ್ಧಿಯೊಂದಿಗೆ ಸುಗ್ಗಿ ಕಟ್ಟೆಯಲ್ಲಿ ಪೂಜೆ ಸಲ್ಲಿಸಿದರು. ಗ್ರಾಮವು ಸುಭೀಕ್ಷೆಯಲ್ಲಿರಲಿ, ಉತ್ತಮ ಮಳೆ-ಬೆಳೆಯಾಗಲಿ, ಜನ ಜಾನುವಾರುಗಳಿಗೆ ರೋಗ ರುಜಿನ ಹರಡದಂತೆ ಶ್ರೀ ಸಬ್ಬಮ್ಮ ತಾಯಿ ಕಾಪಾಡಬೇಕೆಂದು ಗ್ರಾಮಸ್ಥರು ಹಾಗೂ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಾರಮ್ಮನ ಪೂಜೆ: ಏ.30ರಂದು ಮಾರಮ್ಮನ ಪೂಜೆ ಹಾಗೂ ಸುಗ್ಗಿ ಮುಕ್ತಾಯ ಪೂಜೆಯೊಂದಿಗೆ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಶ್ರೀ ಸಬ್ಬಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಲ್.ಎಂ. ಪ್ರಸನ್ನ ತಿಳಿಸಿದ್ದಾರೆ.

ಈ ಬಾರಿಯ ಉತ್ಸವದ ಉಸ್ತುವಾರಿಯನ್ನು ಕಾರ್ಯದರ್ಶಿ ಪವನ್, ಖಜಾಂಚಿ ಎಂ.ಟಿ. ಉಮೇಶ್, ಮರಣ ನಿಧಿ ಖಜಾಂಚಿ ಎಲ್.ಈ. ವೆಂಕಟೇಶ್, ಸಲಹೆಗಾರ ಡಿ.ಟಿ. ರವಿ, ಡಿ.ಪಿ. ಲೋಕೇಶ್, ಸಚಿನ್, ಎಂ.ಎಸ್. ರಾಜೇಶ್ ವಹಿಸಿದ್ದರು. ದೇವರ ಒಡೆಕಾರರಾಗಿ ಡಿ.ಆರ್. ದಿನೇಶ್, ಎ.ಜೆ. ರಘು, ಎಲ್.ಕೆ. ಚಂದ್ರಶೇಖರ್, ಎಂ.ಕೆ. ಪ್ರಸನ್ನ ಸೇವೆ ಸಲ್ಲಿಸಿದರು. ಶಾಸಕ ಡಾ. ಮಂತರ್ ಗೌಡ, ಮಿಥುನ್ ಹಾನಗಲ್ಲು ಸೇರಿದಂತೆ ಗ್ರಾಮಸ್ಥರು, ಗ್ರಾಮದ ಪ್ರಮುಖರು ಸುಗ್ಗಿಯಲ್ಲಿ ಭಾಗಿಯಾಗಿದ್ದರು.

ಸೋಮವಾರಪೇಟೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಸುಗ್ಗಿಯಲ್ಲಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡಿದ್ದರು
ಸೋಮವಾರಪೇಟೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಸುಗ್ಗಿಯಲ್ಲಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT