ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿವೃಷ್ಟಿಯಿಂದ ಬೆಳೆ ಹಾನಿ | ಎಕರೆಗೆ ₹1 ಲಕ್ಷ ಪರಿಹಾರ ನೀಡಿ: ಒತ್ತಾಯ

Published : 29 ಆಗಸ್ಟ್ 2024, 5:12 IST
Last Updated : 29 ಆಗಸ್ಟ್ 2024, 5:12 IST
ಫಾಲೋ ಮಾಡಿ
Comments

ಗೋಣಿಕೊಪ್ಪಲು: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಕಾಫಿ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಬೆಂಗಳೂರು ಭಾರತೀಯ ಕಾಫಿ ಮಂಡಳಿ ಜಂಟಿ ನಿರ್ದೇಶಕ ಪಾರ್ಥ ಪ್ರಧಾನ್ ಚೌಧರಿ ಅವರು ಶ್ರೀಮಂಗಲ, ಹುದಿಕೇರಿ, ಬಿರುನಾಣಿ ಮೊದಲಾದ ದಕ್ಷಿಣ ಕೊಡಗಿನ ಕಾಫಿ ತೋಟಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಕೋಣಗೇರಿ, ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮಗಳ ತೋಟಗಳಿಗೆ ಭೇಟಿ ನೀಡಿದರು.

ಸ್ಥಳೀಯ ಬೆಳೆಗಾರರು ಪ್ರಸಕ್ತ ವರ್ಷ ಬಿರುಗಾಳಿ ಸಹಿತ ಅತಿವೃಷ್ಟಿಗೆ ಕಾಫಿ ಬೆಳೆ, ಕೊಳೆ ರೋಗ ಹಾಗೂ ತೊಟ್ಟು ಕೊಳೆಯುವ ರೋಗದಿಂದ ಪೀಡಿತವಾಗಿ ಶೇ70 ಫಸಲು ನಷ್ಟವಾಗಿದೆ. ಇನ್ನೂ ಸಹ ಮಳೆ ಮುಂದುವರೆದಿದ್ದು, ನಷ್ಟ ಪ್ರಮಾಣ ಹೆಚ್ಚಾಗಲಿದೆ. ಕಾಫಿ ಮಂಡಳಿ ಕೊಳೆರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆಗೆ ಸಲಹೆ ನೀಡಿದ್ದರೂ, ಔಷಧಿಯು ದುಬಾರಿಯಾಗಿದೆ. ಮಳೆ ಬಿಡುವು ನೀಡದೇ ಈ ಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ. ಕಾರ್ಮಿಕರ ಕೊರತೆ, ರಸಗೊಬ್ಬರ ದರ ಏರಿಕೆ, ಫಸಲು ಕುಂಠಿತ ಇದರಿಂದ ತೋಟ ನಿರ್ವಹಣೆ ದೊಡ್ಡ ಸವಾಲಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೆಚ್ಚಿನ ಮಟ್ಟದ ಪರಿಹಾರವನ್ನು ನೀಡಲು ಸರಕಾರಕ್ಕೆ ವರದಿ ಸಲ್ಲಿಸಲು ಬೆಳೆಗಾರರು ಮನವಿ ಮಾಡಿದರು.

ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಕಾಫಿಗೆ ಎನ್.ಡಿ.ಆರ್.ಎಫ್ ಪರಿಹಾರ ಮೊತ್ತ ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ ಪ್ರತಿ ಎಕರೆಗೆ ₹1 ಲಕ್ಷ ಪರಿಹಾರವನ್ನು ನೀಡಬೇಕೆಂದು ಬೆಳೆಗಾರರು ಕೋರಿದರು.

ಪ್ರಸಕ್ತ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆ ದರ ಏರಿಕೆಯಾಗಿದ್ದಾರು, ಅದಕ್ಕೆ ಅನುಸಾರ ದರ ಬೆಳೆಗಾರರಿಗೆ ಸಿಗುತ್ತಿಲ್ಲ. ಸಣ್ಣ ಬೆಳೆಗಾರರು ಬ್ಯಾಂಕ್ ಸಾಲ ಪಾವತಿ, ತೋಟ ನಿರ್ವಹಣೆ ವೆಚ್ಚ ಭರಿಸಬೇಕಾದ ಹಿನ್ನೆಲೆ ಮಾರುಕಟ್ಟೆ ಬರುವವರೆಗೆ ದಾಸ್ತಾನು ಇಟ್ಟುಕೊಳ್ಳಲು ಸಾಧ್ಯವಾಗದೆ ಮಾರ್ಚ್‌ ತಿಂಗಳಲ್ಲಿಯೇ ಮಾರಾಟ ಮಾಡುತ್ತಾರೆ. ಇತ್ತೀಚೆಗೆ ಮಾರುಕಟ್ಟೆ ದರ ಏರಿಕೆಯಾಗಿದ್ದರೂ, ಅದು ಸಣ್ಣ ಬೆಳೆಗಾರರಿಗೆ ದಕ್ಕುತ್ತಿಲ್ಲ ಎಂದು ಬೆಳೆಗಾರರು ವಿವರಿಸಿದರು. ರಸಗೊಬ್ಬರ, ಕೊಳೆರೋಗದ ಔಷಧಿಗಳನ್ನು ಸಬ್ಸಿಡಿಯಡಿ ಕಾಫಿ ಬೆಳೆಗಾರರಿಗೆ ನೀಡಬೇಕು. ಕಾಫಿ ಬೆಳೆನಷ್ಟಕ್ಕೆ ವಿಮೆ ಸೌಲಭ್ಯ ವ್ಯಾಪ್ತಿಗೆ ತರಬೇಕೆಂದು ಮನವಿ ಮಾಡಿದರು.

ಬೆಳೆಗಾರರ ಅಹವಾಲು ಹಾಗೂ ವಸ್ತು ಸ್ಥಿತಿ ಬಗ್ಗೆ ಕಾಫಿ ಮಂಡಳಿಯ ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಜಂಟಿ ನಿರ್ದೇಶಕರು ಭರವಸೆ ನೀಡಿದರು.

ಸ್ಥಳೀಯ ಬೆಳೆಗಾರರೊಂದಿಗೆ ಭಾರತೀಯ ಕಾಫಿ ಮಂಡಳಿಯ ಗೋಣಿಕೊಪ್ಪ ವಿಭಾಗದ ಹಿರಿಯ ಸಂಪರ್ಕ ಅಧಿಕಾರಿ ಶ್ರೀರಮಣ ಹಾಗೂ ಶ್ರೀಮಂಗಲ ಕಿರಿಯ ಸಂಪರ್ಕ ಅಧಿಕಾರಿ ಸುನಿಲ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT