ಸೋಮವಾರ, ಸೆಪ್ಟೆಂಬರ್ 27, 2021
28 °C
ಕಾಮಗಾರಿ ಬಾಕಿಯಿರುವಾಗಲೇ ಪ್ರಮಾಣ ಪತ್ರ ನೀಡಿದ ಹಾಕಿ ಫೆಡರೇಷನ್!

8 ವರ್ಷವಾದರೂ ಮುಗಿಯದ ‘ಟರ್ಫ್‌’ ಕಾಮಗಾರಿ

ಡಿ.ಪಿ.ಲೋಕೇಶ್‌ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಹಾಕಿ ಕ್ರೀಡೆಯ ತವರೂರು ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆ ಅಂತರರಾಷ್ಟ್ರೀಯ ಮಟ್ಟ
ದಲ್ಲಿ ಅಸಂಖ್ಯಾತ ಕ್ರೀಡಾ ಪ್ರತಿಭೆಗ ಳನ್ನು ಕೊಡುಗೆಯಾಗಿ ನೀಡಿದ್ದರೂ, ತಾಲ್ಲೂಕಿನಲ್ಲಿ ಒಂದು ಸುಸಜ್ಜಿತ ಟರ್ಫ್ ಮೈದಾನ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸುಸಜ್ಜಿತ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, 2021ರ ಮಾರ್ಚ್ 14ಕ್ಕೆ ಬರೋಬ್ಬರಿ 8 ವರ್ಷಗಳು ಕಳೆದಿವೆ!

ಪ್ರಸಕ್ತ ಸಾಲಿನಲ್ಲಿ ಹಾಕಿ ಪ್ರೇಮಿಗಳಿಗೆ ಆಸ್ಟ್ರೋ ಟರ್ಫ್ ಮೈದಾನ ಲೋಕಾರ್ಪಣೆಗೊಳ್ಳಲಿದೆ ಎಂಬ ಸಂತಸ ಒಂದೆಡೆ ಇತ್ತು. ಆದರೆ, ಶೇ 65ರಷ್ಟು ಮಾತ್ರ ಕಾಮಗಾರಿ ಮುಗಿಸಿ, ಹಚ್ಚ ಹಸಿರಿನಿಂದ ಕಂಗೊಳಿಸುವ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮ್ಯಾಟ್ ಅಳವಡಿಸಲಾಗಿದೆ. ವರ್ಷಾಂತ್ಯದ ಕೊನೆ ಆಗಿರುವುದರಿಂದ ಕಾಮಗಾರಿ ಪೂರ್ಣಗೊಳ್ಳದೇ ಬಿಲ್ ಪಡೆದಿದ್ದಾರೆ ಎಂಬ ಆರೋಪವಿದೆ.
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮೂಲಕ ಬಿಡುಗಡೆಯಾಗಿರುವ ₹4.84 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಮುಂದಾದ ಹೈದರಾಬಾದ್ ಗ್ರೇಟ್ ಸ್ಪೋರ್ಟ್ಸ್‌ ಇನ್ಪ್ರಾ ಸಂಸ್ಥೆಯು, ನೋಡುಗರಿಗೆ ನಳನಳಿಸುವ ಕೃತಕ ಹುಲ್ಲು ಹಾಸನ್ನು ಕಂಗೊಳಿಸುವಂತೆ ಮಾಡಿದ್ದರೂ, ಕಾಮಗಾರಿ ಪೂರ್ಣಗೊಳ್ಳದೇ ತರಾತುರಿಯಲ್ಲಿ ಬಿಲ್ ಪಡೆಯಲು ಮುಂದಾಗಿದೆ. ಸ್ಪಿಂಕ್ಲರ್, ಸಂಪ್‌ ವ್ಯವಸ್ಥೆ, ಪೈಪ್‌ಲೈನ್, ಮೆಷಿನ್ ರೂಮ್, ಫೆನ್ಸಿಂಗ್ ಇಂಟರ್‌ಲಾಕ್ ವ್ಯವಸ್ಥೆ, ಕೊಳವೆಬಾವಿ, ಮೋಟಾರ್‌, ಚರಂಡಿ, ಮೇಲುಹಾಸು, ತಡೆಗೋಡೆಗಳು ಯಾವುದೂ ಪೂರ್ಣಗೊಂಡಿಲ್ಲ. ಬಾಸ್ಕೆಟ್ ಬಾಲ್, ಅಥ್ಲೆಟಿಕ್ಸ್, ಫುಟ್‌ಬಾಲ್ ಆಟಗಾರರಿಗೆ ಆಟವಾಡುವ ಅವಕಾಶ ಇಲ್ಲದಂತಾಗಿದೆ. ಅತ್ಯುತ್ತಮ ಬಾಸ್ಕೆಟ್ ಬಾಲ್ ಕ್ರೀಡಾಂಗಣವನ್ನು ತೆರವುಗೊಳಿಸಲಾಗಿದೆ.
ಸಿಂಥೆಟಿಕ್ ಟರ್ಫ್ ಹಾಕಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಈ ಸಂದರ್ಭದಲ್ಲೇ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಗುಣಮಟ್ಟದ ಖಾತ್ರಿ ಮತ್ತು ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರವನ್ನು ನೀಡಿರುವುದು ತಾಲ್ಲೂಕಿನ ಕ್ರೀಡಾಭಿಮಾನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೂರ್ಣಗೊಳ್ಳದ ಟರ್ಫ್ ಕಾಮಗಾರಿಗೆ ಎಫ್‍ಐಎಚ್ ಉತ್ತಮ ಗುಣಮಟ್ಟದ ಕ್ರೀಡಾಂಗಣ ಎಂದು ಪ್ರಮಾಣ ಪತ್ರ ನೀಡಿರುವುದು ತಪ್ಪು. ಪೂರ್ಣ ಕಾಮಗಾರಿ ಮುಗಿದ ಮೇಲೆ ಮ್ಯಾಟ್ ಹಾಕಬೇಕು. ಆದರೆ, ಇನ್ನು ಶೇ 50ರಷ್ಟು ಕಾಮಗಾರಿ ಬಾಕಿಯಿದೆ. ಆದರೂ, ಇಲ್ಲಿ ಮ್ಯಾಟ್ ಹಾಕಿದ್ದಾರೆ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ ಎಂದು ಕಳೆದ ಜನವರಿಯಲ್ಲಿ ಉಸ್ತುವಾರಿ ಸಮಿತಿ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು, ಹೈದರಾಬಾದ್ ಮೂಲದ ಗ್ರೇಟ್ ಸ್ಪೋರ್ಟ್ಸ್‌ ಇನ್‍ಫ್ರಾ ಸಂಸ್ಥೆಯ ಮುಖ್ಯ ಎಂಜಿನಿಯರ್‌ ಅವರು ಆಗಮಿಸಿ ಪರಿಶೀಲಿಸಿ, ಕೆಲ ಕಡೆ ಹೆಚ್ಚುವರಿ ಡಾಂಬರೀಕರಣ ಮಾಡುವಂತೆ ಸೂಚಿಸಿದ್ದರು. ಈಗ ಕಾಮಗಾರಿ ಪೂರ್ಣಗೊಳ್ಳದೆ ಪ್ರಮಾಣ ಪತ್ರ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ನಿಗದಿತ ಸ್ಥಳದಲ್ಲಿ ಟರ್ಫ್ ನಿರ್ಮಾಣಕ್ಕೆ ಅಕ್ಷೇಪ ಇತ್ತು; ಸುರಕ್ಷಿತವಲ್ಲದ ಜಾಗದಲ್ಲಿ ಟರ್ಫ್ ನಿರ್ಮಾಣಕ್ಕೆ ಈ ಮೊದಲೇ ಕೆಲವು ಸಾರ್ವಜನಿಕರು, ಹಾಕಿ ಕ್ರೀಡಾಪಟುಗಳ ಆಕ್ಷೇಪವಿತ್ತು. ಸೂಕ್ತ ಸ್ಥಳಾವಕಾಶ ಇಲ್ಲವೆಂದು ತಗಾದೆ ತೆಗೆದಿದ್ದರು. ಆದರೆ, ಇಲಾಖೆ ನಡೆಸಿದ ಸರ್ವೆಯಲ್ಲಿ ಟರ್ಫ್ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಟರ್ಫ್ ನಿರ್ಮಾಣವಾಗಿರುವುದರಿಂದ ಇತರ ಕ್ರೀಡೆಗೂ ಅವಕಾಶ ಇಲ್ಲದಂತಾಯಿತು. ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದ ಶಾಲಾ–ಕಾಲೇಜು ಮಕ್ಕಳ ಕ್ರೀಡಾಕೂಟಕ್ಕೂ ತೊಂದರೆಯಾಯಿತು ಎಂದು ಕ್ರೀಡಾಭಿಮಾನಿಗಳ ಅಳಲು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು