ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | 800 ಹೋಂಸ್ಟೇ ತೆರೆಯಲು ಅವಕಾಶ

ನೋಂದಣಿಯಾದ ಹೋಂಸ್ಟೇಗಳಿಗೆ ಮಾತ್ರ ಕೊಡಗು ಜಿಲ್ಲಾಡಳಿತ ಗ್ರೀನ್‌ ಸಿಗ್ನಲ್‌
Last Updated 9 ಜೂನ್ 2020, 11:34 IST
ಅಕ್ಷರ ಗಾತ್ರ

ಮಡಿಕೇರಿ: ಎರಡೂವರೆ ತಿಂಗಳಿಂದ ಮುಚ್ಚಿದ್ದ ಹೋಟೆಲ್, ರೆಸ್ಟೋರೆಂಟ್, ಹೋಂಸ್ಟೇ ಆರಂಭಕ್ಕೆ ಸರ್ಕಾರ ಅವಕಾಶ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ ಅಧಿಕೃತವಾಗಿ ನೋಂದಣಿಯಾದ 800 ಹೋಂಸ್ಟೇಗಳಿಗೆ ಮಾತ್ರ ಪುನರ್ ಪ್ರಾರಂಭಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.

ನಗರದ ಜಿ.ಪಂ.ಸಭಾಂಗಣದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖರೊಂದಿಗೆ ಸರ್ಕಾರದ ಮಾರ್ಗಸೂಚಿ ಪಾಲನೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಇರಿಸಬೇಕು. ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು. ಆರೋಗ್ಯವಂತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ. ಕಡ್ಡಾಯವಾಗಿ ಮಾಸ್ಕ್ ಅಥವಾ ಮುಖಗವಸು ಧರಿಸತಕ್ಕದ್ದು. ಸಾಕಷ್ಟು ಅಂತರವಿರುವಂತೆ ಆಸನ ವ್ಯವಸ್ಥೆ ಮಾಡಬೇಕು. ತುರ್ತು, ಅನಿವಾರ್ಯ, ವೈದ್ಯಕೀಯ ಹಿನ್ನಲೆ ಇದ್ದಲ್ಲಿ ಮಾತ್ರ 65 ವರ್ಷ ಮೇಲ್ಪಟ್ಟವರು, ಸಹ ಅಸ್ವಸ್ತತೆ ಉಳ್ಳವರು, ಗರ್ಭಿಣಿ ಮಹಿಳೆಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶವಿರುತ್ತದೆ. ಈ ರೀತಿಯಾಗಿ ಆಗಮಿಸಿದಲ್ಲಿ ಅವರುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಹೇಳಿದರು.

‌ರೆಸಾರ್ಟ್‍ಗಳಲ್ಲಿ ಸಭೆ, ಸಮಾರಂಭ, ಪಾರ್ಟಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಅವರು, ಪ್ರವಾಸಿಗರ ಆಗಮನ, ನಿರ್ಗಮನ, ಸಮಯ, ದಿನಾಂಕದ ನಿಖರ ಮಾಹಿತಿ ಒದಗಿಸಬೇಕು. ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಉದಾಸೀನ ತೋರಬಾರದು ಎಂದರು.

ಹೋಂಸ್ಟೇ ಅಸೋಷಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಪ್ರವಾಸಿಗರಿಗೆ ರಕ್ಷಣೆ ನೀಡಬೇಕು. ಯಾವುದೇ ಕಾರಣಕ್ಕೂ ಕಿರಿಕಿರಿ ಉಂಟಾಗಬಾರದು. ನೋಂದಣಿ ಹೋಂಸ್ಟೇಗಳಿಗೆ ರಕ್ಷಣೆ ನೀಡಬೇಕು ಎಂದು ಕೋರಿದರು.

ರೆಸಾರ್ಟ್ ಅಸೋಷಿಯೇಷನ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಮಾತನಾಡಿ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ಅವಕಾಶ ನೀಡುವಂತಾಗಬೇಕು ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಟೂರ್ಸ್ ಅಂಡ್ ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ, ವಿವಿಧ ಸಂಸ್ಥೆಯ ಪದಾಧಿಕಾರಿಗಳಾದ ಅಂಬೆಕಲ್ ನವೀನ್, ಸಾಗರ್ ಗಣಪತಿ, ಡಿ.ಕೆ.ಮಂಜುನಾಥ್, ಕೆ.ಕೆ.ಭಾಸ್ಕರ್, ಬಿ.ಸಿ.ಮಂಜುನಾಥ್, ಮಹೀಂದ್ರ ರೆಸಾರ್ಟ್ ಮುಖ್ಯಸ್ಥ ವಿಜಯ್ ಮೋಹನ್ ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ತಹಶೀಲ್ದಾರ್‌ ಮಹೇಶ್, ಗೋವಿಂದರಾಜು, ದಿನೇಶ್, ಡಿವೈಎಸ್‍ಪಿಗಳಾದ ದಿನೇಶ್ ಕುಮಾರ್, ಜಯಕುಮಾರ್, ಶೈಲೇಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ನಾನಾ ಇಲಾಖೆ ಅಧಿಕಾರಿಗಳು ಇದ್ದರು.

*
ಜಿಲ್ಲೆಯಲ್ಲಿ ಸದ್ಯ ಯಾವುದೇ ಕಂಟೈನ್ಮೆಂಟ್ ವಲಯ ಇರುವುದಿಲ್ಲ. ಮುಂದೆ ಯಾವ ರೀತಿ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ, ಹೋಂ ಸ್ಟೇ, ರೇಸಾರ್ಟ್ ಮಾಲೀಕರ ಜವಾಬ್ದಾರಿ ಹೆಚ್ಚಿನದ್ದು.
– ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT