ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತ್ತರಿ ಸಂಭ್ರಮಕ್ಕೆ ಕಾಫಿ ನಾಡು ಸಜ್ಜು

ಜಿಲ್ಲೆಯಾದ್ಯಂತ ವಾರಗಟ್ಟಲೆ ಮನೆ ಮಾಡಲಿದೆ ಸಂಭ್ರಮ, ವಿಶಿಷ್ಟ ಆಚರಣೆ, ಎಲ್ಲೆಡೆ ನವೋಲ್ಲಾಸ
Last Updated 7 ಡಿಸೆಂಬರ್ 2022, 6:18 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗಿನ ಕಾವೇರಿ ತವರಿನ ಸಿರಿ ಹಬ್ಬ ಎನಿಸಿದ ‘ಹುತ್ತರಿ’ಗೆ ಕಾಫಿನಾಡು ಸಜ್ಜಾಗಿದೆ. ರೈತರ ಪರಿಶ್ರಮಕ್ಕೆ ಕಾವೇರಿ ಮಾತೆ ನೀಡುವ ಕಾಣಿಕೆ ಇದು ಎಂದೇ ಜನರು ಭಾವಿಸುತ್ತಾರೆ. ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಈ ಹಬ್ಬ ಡಿ. 7ರಂದು ಹುಣ್ಣಿಮೆ ದಿನ ನಡೆಯಲಿದ್ದು, ನಾಲ್ಕುನಾಡು ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಭರದ ಸಿದ್ಧತೆಗಳು ನಡೆದಿವೆ.

ಕೊಡವ ನುಡಿಯ ಪುತ್ತರಿ (ಪುದಿಯ ಅರಿ) ಎಂದರೆ ಹೊಸ ಅಕ್ಕಿ. ವ್ಯವಸಾಯವನ್ನೇ ನೆಚ್ಚಿ ಬದುಕುವ ಬಹುತೇಕ ರೈತಾಪಿ ಜನರು ಪೈರುಗಳು ಬೆಳೆದಾಗ ನಿರ್ದಿಷ್ಟ ಕಾಲದಲ್ಲಿ ಶಾಸ್ತ್ರೋಕ್ತವಾಗಿ ಕೋಯ್ದು ತಂದು ಮನೆಯನ್ನು ತುಂಬಿಸಿಕೊಳ್ಳುವುದೇ ಈ ಹುತ್ತರಿ ಹಬ್ಬದ ವೈಶಿಷ್ಟ್ಯ. ದಿನಾಂಕವನ್ನು ಕೊಡಗಿನ ಪ್ರಮುಖ ದೇವಾಲಯವಾದ ಕಕ್ಕಬ್ಬೆಯ ಇಗ್ಗುತಪ್ಪ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಈಗಾಗಲೇ ನಿಗದಿ ಮಾಡಲಾಗಿದೆ.

ಹಬ್ಬದಂದು ಹುತ್ತರಿಯ ಸಾಂಪ್ರದಾಯಿಕ ಆಚರಣೆ ಆರಂಭಗೊ ಳ್ಳುವುದು ನೆಲ್ಲಕ್ಕಿ ಬಾಡೆಯಿಂದ. (ಇದು ನಡುಕೋಣೆ) ಕೊಡವರು ಸಾಂಪ್ರದಾಯಿಕ ಉಡುಪು ಧರಿಸಿ, ಕುಪ್ಪುಸ ತೊಟ್ಟು, ಸೊಂಟಕ್ಕೆ ನಡುಪಟ್ಟಿ ಬಿಗಿದು, ಅದರಲ್ಲಿ ಪೀಚೆ ಕತ್ತಿಯನ್ನು ಸಿಕ್ಕಿಸಿ, ಮನೆಯೊಡೆಯ ನೆಲ್ಲಕ್ಕಿ ಬಾಡೆಯಲ್ಲಿ ಬೆಳಗುತ್ತಿರುವ ತೂಗುದೀಪದ ಮುಂದೆ ಕೈಜೋಡಿಸಿ ಕುಲದೇವರನ್ನು ಪ್ರಾರ್ಥಿಸುತ್ತಾರೆ.

‘ಹುತ್ತರಿ ಹಬ್ಬದ ಈ ಸುಸಂದರ್ಭದಲ್ಲಿ ಕದಿರು ತೆಗೆಯಲು ಹೋಗುವಲ್ಲಿ, ಪುತ್ತರಿ ಕತ್ತಿಯನ್ನು ತೆಗೆದು ತರುವಲ್ಲಿ ಯಾವ ಅಡ್ಡಿ ಆತಂಕಗಳಾಗದಂತೆ ನಡೆಸಿಕೊಡುವ ಜವಾಬ್ದಾರಿ ಇಗ್ಗುತ್ತಪ್ಪನಿಗೆ ಸೇರಿದ್ದು’. ಈ ಪ್ರಾರ್ಥನೆಯ ಬಳಿಕ ಮನೆ ಮಂದಿಯೆಲ್ಲಾ ಒಟ್ಟುಗೂಡಿ ಭತ್ತದ ಗದ್ದೆಗೆ ತೆರಳುವರು. ಪ್ರಥಮ ಕೊಯ್ಲಿಗೆಂದು ನಿರ್ದಿಷ್ಟಪಡಿಸಿದ ಭೂಮಿಯಲ್ಲಿ ಕುಟುಂಬದ ಹಿರಿಯ ಭತ್ತದ ಪೈರುಗಳನ್ನು ಪೂಜಿಸಿ ಅದಕ್ಕೆ ಹಣ್ಣು ಕಾಯಿ, ಹಾಲು ಜೇನು ಗಳನ್ನು ಸಮರ್ಪಿಸುತ್ತಾರೆ. ಆ ಬಳಿಕ ‘ಪೊಲಿ ಪೊಲಿಯೇ ದೇವಾ’ ಎಂದು ಏರುದನಿ ಯಲ್ಲಿ ಕೂಗುತ್ತಾ ಶಾಸ್ತ್ರೋಕ್ತವಾಗಿ ಭತ್ತದ ತೆನೆಗಳನ್ನು ಕತ್ತರಿಸಿ ತಂದು ಮನೆಯನ್ನು ತುಂಬಿಕೊಳ್ಳುತ್ತಾರೆ.

ಹುತ್ತರಿಯಂದು ಅಡುಗೆ ವೈವಿಧ್ಯ ಮಯವೂ ಆಗಿದ್ದು, ವಿಶಿಷ್ಟವೂ ಆಗಿದೆ. ಬಾಳೆಹಣ್ಣಿನಿಂದ ತಯಾರಿಸಿದ ‘ತಂಬಿಟ್ಟು’, ಘಮಘಮಿಸುವ ಏಲಕ್ಕಿ ಪುಟ್, ಆಗತಾನೆ ಗದ್ದೆಯಿಂದ ಕೋಯ್ದು ಭತ್ತದ ಅಕ್ಕಿಯನ್ನು ಸೇರಿಸಿ ಮಾಡಿದ ಹೊಸ ಅಕ್ಕಿಗೆ ಐದಾರು ಪುಟ್ಟ ಕಲ್ಲುಚೂರುಗಳನ್ನು ಸೇರಿಸಿ ಪಾಯಸ ಮಾಡುತ್ತಾರೆ. ಊಟ ಮಾಡುವಾಗ ಕಲ್ಲು ಸಿಕ್ಕಿದವರಿಗೆ ಕಲ್ಲಾಯುಷ್ಯ (ದೀರ್ಘಾಯುಷ್ಯ) ಎಂಬುದಾಗಿ ಹೇಳುತ್ತಾರೆ.

ಹುತ್ತರಿ ಹಬ್ಬವೆಂದರೆ ವಾರಗಟ್ಟಲೆ ಸಂಭ್ರಮ. ಹಬ್ಬ ಒಂದು ದಿನವಾದರೂ ಅದಕ್ಕೆ ಸಂಬಂಧಿಸಿದ ಆಚರಣೆಗಳೂ ವಾರಗಟ್ಟಲೆ ಜರುಗುತ್ತವೆ. ಹುತ್ತರಿ ಅಂಗವಾಗಿ ಆ ದಿನಗಳಲ್ಲಿ ಮಂದ್ ಎಂಬ ಊರ ಕ್ರೀಡಾಂಗಣದಲ್ಲಿ ಊರವರೆಲ್ಲರೂ ಸೇರಿ ನೃತ್ಯ, ಕುಣಿತ ಮತ್ತು ಶೌರ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ.

ಎರಡೂ ಕೈಗಳಲ್ಲಿ ಬೆತ್ತದ ಬಾರು ಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಕ್ರಮಬದ್ದವಾಗಿ ಬೀಸುತ್ತಾ ಕುಣಿಯುವ ಕೋಲಾಟ ‘ಹುತ್ತರಿ ಕೋಲಾಟ’ವೆಂದೇ ಪ್ರಸಿದ್ಧಿ ಪಡೆದಿದೆ. ಕೊಡಗಿನಲ್ಲಿ ಮಾತ್ರವೇ ಕಾಣಬಹುದಾದ ಹುತ್ತರಿ ಹಬ್ಬವು ಇಲ್ಲಿನ ಸಂಪ್ರದಾಯ ಕೃಷಿ ಚಟುವಟಿಕೆಯ ಮೇಲಿನ ಆಸಕ್ತಿ ಇತ್ಯಾದಿಗಳ ಪ್ರತಿರೂಪವಾಗಿದೆ. ಚಳಿಯ ನಡುವೆ ಚುರುಕು ಮುಟ್ಟಿಸುವ ಕೊಡಗಿನ ಹುತ್ತರಿ ಹಬ್ಬ ರೈತಾಪಿ ಜನರಿಗೆ ನವೋಲ್ಲಾಸ ನೀಡುವ ಸಂಜೀವಿನಿಯಾಗಿದೆ.

ಇಗ್ಗುತ್ತಪ್ಪ ದೇಗುಲ; ಆಚರಣೆ ಡಿ. 07ರಂದು

l ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನ

l ಬುಧವಾರ ಸಂಜೆ 7.20ಕ್ಕೆ ಪಾಡಿ
ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನೆರೆ ಕಟ್ಟುವುದು

l 8.20 ಗಂಟೆಗೆ ಕದಿರು ತೆಗೆಯುವುದು

l 9.20 ಗಂಟೆಗೆ ಪ್ರಸಾದ ಸ್ವೀಕಾರ ಮಾಡಲು ಶುಭ ಘಳಿಗೆ.

ಸಾರ್ವಜನಿಕರಿಗೆ

l ಸಂಜೆ 7.50ಕ್ಕೆ ನೆರೆ ಕಟ್ಟುವುದು.

l 8.50ಕ್ಕೆ ಕದಿರು ತೆಗೆಯುವುದು.

l 9.50ಕ್ಕೆ ಪ್ರಸಾದ ಸ್ವೀಕರಿಸುವ ಅವಧಿ

ಓಂಕಾರೇಶ್ವರ ದೇಗುಲದಲ್ಲಿ ಇಂದು ಹಬ್ಬ

ಮಡಿಕೇರಿ: ಇಲ್ಲಿನ ಓಂಕಾರೇಶ್ವರ ದೇಗುಲದಲ್ಲಿ ಡಿ. 7ರಂದು ಸಂಜೆ 7.50ಕ್ಕೆ ನೆರೆ ಕಟ್ಟುವುದು, 8.50 ಕ್ಕೆ ಕದಿರು ತೆಗೆಯುವುದು ಹಾಗೂ ನಂತರ ಪ್ರಸಾದ ವಿತರಣೆ ನಡೆಯಲಿದೆ. ಡಿ. 8ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೋಟೆ ಆವರಣದಲ್ಲಿ ಹುತ್ತರಿ ಹಬ್ಬದ ಆಚರಣೆ ನಡೆಯಲಿದೆ.

ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ

ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.

ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯದಲ್ಲಿ ತುಲಾಭಾರ ಸೇವೆ ಬಳಿಕ ಭಕ್ತರು ಕಾಫಿ ಕಾಳುಮೆಣಸು, ಎಣ್ಣೆ ಸೇರಿದಂತೆ ಮತ್ತಿತರ ಹರಕೆ ಸಲ್ಲಿಸಿದರು.

ನಂತರ ದೇವಾಲಯದಲ್ಲಿ ಮಹಾಪೂಜೆ ಜರುಗಿತು. ಭಕ್ತರಿಗೆ ಪ್ರಸಾದ ವಿತರಣೆ ಬಳಿಕ ಎತ್ತುಪೋರಾಟ, ಅನ್ನಸಂತರ್ಪಣೆ ಬಳಿಕ ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ಎತ್ತುಪೋರಾಟದೊಂದಿಗೆ ತೆರಳಿ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ,ಸದಸ್ಯರು, ತಕ್ಕ ಮುಖ್ಯಸ್ಥರು,ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT