ಬುಧವಾರ, ಆಗಸ್ಟ್ 10, 2022
25 °C
ಪರಿಸ್ಥಿತಿ ಅವಲೋಕಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್

ಭೂಮಿ ಬಿರುಕು ಬಿಟ್ಟಿಲ್ಲ; ಆತಂಕ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಈಚೆಗೆ ಸಂಭವಿಸಿದ ಭೂಕಂಪದಿಂದ ಎಲ್ಲೂ ಭೂಮಿ ಬಿರುಕು ಬಿಟ್ಟಿಲ್ಲ. ಜನರು ಆತಂಕಪಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅವರು ಮುಂಗಾರಿಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಮಾಹಿತಿ ಪಡೆದು ಮಾತನಾಡಿದರು.

‘ಹಿಂದೆ 2018ರ ಜುಲೈ 9 ರಂದು ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ 3.3 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿ ಕೆಲವೊಂದು ಕಡೆ ಭೂಮಿ ಬಿರುಕು ಬಿಟ್ಟಿತ್ತು. ನಂತರ, ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಬಿರುಕು ಬಿಟ್ಟ ಸ್ಥಳದಲ್ಲಿ ಮಳೆ ನೀರು ಹೋಗಿ ಭೂ ಕುಸಿತವಾಗಿತ್ತು’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ಅನನ್ಯ ವಾಸುದೇವ ಮಾಹಿತಿ ನೀಡಿದರು.

‘ಶನಿವಾರ ಕರಿಕೆಯಿಂದ 4 ಕಿ.ಮೀ. ವಾಯುವ್ಯ ಭಾಗದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.3 ಎಂದು ದಾಖಲಾಗಿದೆ ಹಾಗೂ ಕಳೆದ ವಾರ ಹಾಸನದ ಹೊಳೆನರಸೀಪುರ ತಾಲ್ಲೂಕಿನಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.4 ಎಂದು ದಾಖಲಾಗಿದೆ. ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹಾಗೂ ಮಡಿಕೇರಿ ತಾಲ್ಲೂಕಿನ ದೇವಸ್ತೂರು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಯಾವುದೇ ರೀತಿಯ ಭೂಮಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿಲ್ಲ’ ಎಂದು ಹೇಳಿದರು.

ಮಳೆಯ ಪ್ರಮಾಣ ಕಡಿಮೆ

ಈ ಬಾರಿ ಸರಾಸರಿ ಮಳೆಯ ಪ್ರಮಾಣ ಕಡಿಮೆ ಇದೆ. ಆದರೆ, ಈ ಕುರಿತೂ ಆತಂಕ ಪಡಬೇಕಿಲ್ಲ ಎಂದು ಸಚಿವ ನಾಗೇಶ್ ತಿಳಿಸಿದರು.

ಹಾರಂಗಿ ಜಲಾಶಯ ಭರ್ತಿಯಾದಲ್ಲಿ ಕನಿಷ್ಠ 6 ರಿಂದ 7 ಅಡಿ ನೀರನ್ನು ಸಂಗ್ರಹ ಮಾಡಿಕೊಂಡು ಉಳಿದ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಗೆ ಬಿಡಬೇಕು ಎಂದು ತಿಳಿಸಿದರು.

2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ನೀಡಲಾಗಿದೆ. ಬಾಕಿ ಇರುವ ಮನೆಗಳ ಹಸ್ತಾಂತರ ಮಾಡಬೇಕು ಎಂದೂ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ‘ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ನಿರ್ಮಾಣವಾಗಿರುವ ಮನೆಗಳು ಹಸ್ತಾಂತರಕ್ಕೆ ಬಾಕಿ ಇದ್ದು, ಜುಲೈ ಮೊದಲ ವಾರದಲ್ಲಿ ಮನೆ ಹಸ್ತಾಂತರಕ್ಕೆ ಸಿದ್ಧವಾಗಲಿದೆ’ ಎಂದು ಹೇಳಿದರು.

ರಸ್ತೆ ಒತ್ತುವರಿ ಪ್ರಕರಣ ದಾಖಲಿಸಿ

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಒತ್ತುವರಿ ತೆರವುಗೊಳಿಸಬೇಕು. ಈ ಸಂಬಂಧ ಪ್ರಕರಣ ದಾಖಲಿಸಬೇಕು. ರಸ್ತೆ ಬದಿ ಕಟ್ಟಡ ನಿರ್ಮಾಣ ಮಾಡುವುದು ಕಂಡುಬಂದಲ್ಲಿ ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಆಡಳಿತದಿಂದ ಯಾವುದೇ ಕಾರಣಕ್ಕೂ ಎನ್‍ಒಸಿ ನೀಡಬಾರದು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧೀಕ್ಷಕರಾದ ರೂಪೇಶ್ ಗೋಪಾಲ್, ತಹಶೀಲ್ದಾರರಾದ ಮಹೇಶ, ಗೋವಿಂದರಾಜು, ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ ಇದ್ದರು.

ಸಾಂಕ್ರಮಿಕ ರೋಗ; ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ

ಮುಂಗಾರು ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಬಿ.ಸಿ.ನಾಗೇಶ್ ನಿರ್ದೇಶನ ನೀಡಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಪರಿಸರ ಶುಚಿತ್ವಕ್ಕೆ ಒತ್ತು ನೀಡಬೇಕು. ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿಯಬೇಕು’ ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಪ್ರತಿಕ್ರಿಯಿಸಿ, ‘ಮುಂಗಾರಿನಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಭಣವಾಗದಂತೆ ಗಮನಹರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನಿಯೋಜಿಸಲು ಕ್ರಮವಹಿಸಲಾಗಿದೆ’ ಎಂದರು.

ಸೋಮವಾರವಷ್ಟೇ ‘ಪ್ರಜಾವಾಣಿ’ ಸಾಂಕ್ರಮಿಕ ರೋಗಭೀತಿ ಕುರಿತು ವಿಶೇಷ ವರದಿ ಪ್ರಕಟಿಸಿತ್ತು.

ರಸಗೊಬ್ಬರ ಸರಿಯಾಗಿ ದೊರಕದು!

ಜಿಲ್ಲೆಯಲ್ಲಿ ಸುಫಲಾ ಹೊರತುಪಡಿಸಿ ಡಿಎಪಿ ಮತ್ತಿತರ ರಸಗೊಬ್ಬರಗಳು ಸಹಕಾರ ಸಂಘಗಳಲ್ಲಿ ದೊರೆಯುತ್ತಿಲ್ಲ ಎಂಬ ವಿಷಯವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಸಭೆಯಲ್ಲಿ ಪ್ರಸ್ತಾಪಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪ್ರತಿಕ್ರಿಯಿಸಿ, ‘ಕಳೆದ ಸಭೆಯಲ್ಲಿ ರಸಗೊಬ್ಬರ ಸಮರ್ಪಕವಾಗಿ ಪೂರೈಸಲು ಸೂಚಿಸಲಾಗಿತ್ತು. ಆದರೂ, ಇಲ್ಲಿನ ರೈತರಿಗೆ ರಸಗೊಬ್ಬರ ಸರಿಯಾಗಿ ದೊರೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ರಸಗೊಬ್ಬರವು ನೆರೆ ರಾಜ್ಯಕ್ಕೆ ಕಳ್ಳಸಾಗಾಣಿಕೆ ಆಗುತ್ತಿರುವುದು ಕಂಡುಬಂದರೆ, ಕಠಿಣ ಕ್ರಮ ಜರುಗಿಸುವಂತೆಯೂ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.