ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ | ಹಗಲಲ್ಲೇ ಕಾಡಾನೆ ಉಪಟಳ: ಆತಂಕ

Published 9 ಮೇ 2024, 7:17 IST
Last Updated 9 ಮೇ 2024, 7:17 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸುಂಟಿಕೊಪ್ಪ ಮತ್ತು ಹೋಬಳಿ ವ್ಯಾಪ್ತಿಯ ತೋಟ ಮತ್ತು ಮನೆಗಳ ಸುತ್ತಮುತ್ತಲಿನಲ್ಲಿ ಕಾಡಾನೆಗಳು ಹಗಲು ವೇಳೆಯಲ್ಲೇ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸುತ್ತಿವೆ.

ಒಂದೆಡೆ ಹಲವು ದಿನಗಳಿಂದ ಉರಿಬಿಸಿಲಿನ ತಾಪದಿಂದ ಕಾಫಿ ಸೇರಿದಂತೆ ಇತರೆ ಬೆಳೆಗಳು ನಾಶವಾಗುತ್ತಿದೆ. ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ರೈತರು ಇನ್ನಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಇಲ್ಲಿನ ತೊಂಡೂರು, ಏಳನೇ ಹೊಸಕೋಟೆ, ಹೆರೂರು, ಹೊರೂರು, ಮತ್ತಿಕಾಡು, ಕಾಜೂರು, ಕಂಬಿಬಾಣೆ, ಚೆಟ್ಟಳ್ಳಿ, ಶ್ರೀದೇವಿ, ನಾಕೂರು ಶಿರಂಗಾಲ, ಐಗೂರು ಸೇರಿದಂತೆ ಹಲವು ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಬಾಳೆ, ಕಾಫಿ, ಹಲಸು ಮತ್ತಿತರ ಗಿಡಗಳನ್ನು ನಾಶಪಡಿಸುತ್ತಿವೆ.

ಸುಂಟಿಕೊಪ್ಪ- ಚೆಟ್ಟಳ್ಳಿ ರಸ್ತೆ ಮಾರ್ಗದ ಮತ್ತಿಕಾಡು ಬಳಿ ಕಳೆದ ವಾರ ಮಧ್ಯಾಹ್ನ 2 ಕಾಡಾನೆಗಳು ರಸ್ತೆಯಲ್ಲಿ ಲೋಕಾಭಿರಾಮವಾಗಿ ಸಂಚರಿಸಿ ನಂತರ ರಸ್ತೆ ದಾಟಿದವು. ಈ ಭಾಗದ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಇದನ್ನು ಕಂಡ ಕಾರ್ಮಿಕರು ಭಯಭೀತರಾಗಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಮೀನುಕೊಲ್ಲಿ ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾದರು.

ಸಮೀಪದ ಏಳನೇ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಯೊಂದು ರಾಜಾರೋಷವಾಗಿ ಘೀಳಿಡುತ್ತಾ ಸಂಚರಿಸಿ ಕೆಲಕಾಲ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಆತಂಕ ತಂದೊಡ್ಡಿತ್ತು. ಕೂಡಲೇ ಕಾಡಾನೆ ಅಲ್ಲೇ ಪಕ್ಕದ ಮುರುಳಿ ಅವರ ತೋಟದೊಳಗೆ ಹೋಯಿತು.

ಏಳನೇ ಹೊಸಕೋಟೆಯ ವ್ಯಾಪ್ತಿಯ ಕೋರೆ ಎಸ್ಟೇಟ್ ಈ ಕಾಡಾನೆಗಳ ಆವಾಸಸ್ಥಾನವಾಗಿದ್ದು, ಅಲ್ಲಿಂದಲೇ ಅಕ್ಕಪಕ್ಕದ ತೋಟಗಳಿಗೆ ಹಾಡಹಗಲೇ ನುಗ್ಗಿ ದಾಂಧಲೆ ನಡೆಸುತ್ತಿವೆ ಎಂಬುದು ಸ್ಥಳೀಯರ ಹೇಳಿಕೆ. ಈ ಭಾಗದ ಮರಿಯ, ಭರತನ್, ದಿಲೀಪ್, ಮೂರ್ತಿ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ, ಕಾಫಿ, ಪಪ್ಪಾಯ ಸೇರಿದಂತೆ ಫಸಲು ಭರಿತ ಹಲವು ಬೆಳೆಗಳನ್ನು ತಿಂದು ನಾಶಗೊಳಿಸಿವೆ. ನಂತರ, ಹಾಡಹಗಲೇ ತೊಂಡೂರು ಗ್ರಾಮದ ಮನೆಗಳತ್ತ ಸಂಚರಿಸಿ ಆತಂಕ ಮೂಡಿಸಿದೆ. ಇದರಿಂದಾಗಿ ರಜೆ ಸಿಕ್ಕಿದರೂ, ವಿದ್ಯಾರ್ಥಿಗಳು ಮನೆ ಬಿಟ್ಟು ಹೊರಗೆ ಬರದಂತಹ ಸ್ಥಿತಿ ಎದುರಾಗಿದೆ.

ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ, ಐಗೂರು ಗ್ರಾಮದ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಕಳೆದ ಹಲವು ದಿನಗಳಿಂದ ರಸ್ತೆಯಲ್ಲಿ ಸಂಚರಿಸುವುದಲ್ಲದೇ ತೋಟದ ಬೆಳೆಗಳನ್ನು ನಾಶಗೊಳಿಸುತ್ತಿವೆ. ರಾತ್ರಿ ವೇಳೆಯಲ್ಲಿ ಬಂದು ತೋಟದ ಬೆಳೆಗಳನ್ನು ಧ್ವಂಸಗೊಳಿಸುತ್ತಿದ್ದ ಕಾಡಾನೆ
ಗಳು ಇದೀಗ ಹಗಲು ವೇಳೆಯಲ್ಲಿ ತೋಟದ ಮೂಲಕ ರಸ್ತೆಯಲ್ಲಿ ಸಂಚರಿಸುತ್ತಿರುವುದು ತಮಗೆ ಭಯ ಉಂಟು ಮಾಡಿದೆ ಎಂದು ಹೇಳುತ್ತಾರೆ ತೊಂಡೂರಿನ ದಿನೇಶ್ ಮತ್ತು ಯಡವಾರೆಯ ಪದ್ಮಿನಿ, ಮಂಜುನಾಥ್.

ಕಳೆದ ಶುಕ್ರವಾರ ಸಂಜೆ 7 ಘಂಟೆಗೆ ಮೆಟ್ನಲ್ಲ ತೊಂಡೂರು ರಸ್ತೆಯ ರಿಜೇಶ್‌ ಅವರ ಮನೆ ಪಕ್ಕದಲ್ಲಿ ಸುಮಾರು 11 ಆನೆಗಳು ತೋಟಕ್ಕೆ ನುಗ್ಗಿ ಆತಂಕ ಸೃಷ್ಟಿ ಮಾಡಿದವು. ಕೂಡಲೇ ರಿಜೇಶ್ ಅವರು ವಾಟ್ಸ್‌ಆ್ಯಪ್ ಸಂದೇಶದ ಮೂಲಕ
ದಯವಿಟ್ಟು ಗ್ರಾಮಸ್ಥರು ಕಾಡಾನೆಗಳಿವೆ. ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದರು.

ಹಿ‌ಂದೇಟು ಹಾಕುವ ಆಟೋ ಚಾಲಕರು; ರಾತ್ರಿ ವೇಳೆಯಲ್ಲಿ ಕಾಡಾನೆಗಳು ಗ್ರಾಮಗಳ ರಸ್ತೆ ಮತ್ತು ತೋಟಗಳಲ್ಲಿ ಸಂಚರಿಸುತ್ತಿರುವುದರಿಂದ ಆ ಗ್ರಾಮಗಳಿಗೆ ತೆರಳಲು  ಆಟೊ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ತಡರಾತ್ರಿಯಲ್ಲಿ ದೂರದ ಪ್ರಯಾಣ ಮುಗಿಸಿ ಸುಂಟಿಕೊಪ್ಪ ಬಸ್ ನಿಲ್ದಾಣಕ್ಕೆ ಬಂದು ಹೊರೂರು, ಹೆರೂರು, ನಾಕೂರು ಶಿರಂಗಾಲ, ತೊಂಡೂರು, ಕಂಬಿಬಾಣೆಗಳಿಗೆ ಆಟೊ ಬಾಡಿಗೆಗೆ ಕರೆದರೆ ಚಾಲಕರು ಮುಂಜಾನೆ ಆಗುವವರೆಗೆ ಆ ಸ್ಥಳಕ್ಕೆ ಬರಲ್ಲ ಎನ್ನುತ್ತಾರೆ. ಇದರಿಂದಾಗಿ ಬೆಳಗಿನವರೆಗೆ ಅಂಗಡಿಗಳ ಮುಂದೆ ಕುಳಿತು ಕಾಲಕಳೆದು ಬೆಳಕಾದ ಮೇಲೆ ಬಾಡಿಗೆ ಆಟೊ ಹಿಡಿದು ಹೋಗುವ ಸ್ಥಿತಿ ಎದುರಾಗಿದೆ. ಒಂದು ವೇಳೆ ರಾತ್ರಿ ಇಲ್ಲವೇ ನಸುಕಿನಲ್ಲಿ ಆ ಕಡೆ ಹೋದರೆ ಕಾಡಾನೆಗಳು ಎದುರಾಗುವುದು ಖಚಿತ ಎನಿಸಿದೆ.

ತೊಂಡೂರಿನಲ್ಲಿ ಈಚೆಗೆ ಸಂಚರಿಸಿದ ಕಾಡಾನೆಗಳು
ತೊಂಡೂರಿನಲ್ಲಿ ಈಚೆಗೆ ಸಂಚರಿಸಿದ ಕಾಡಾನೆಗಳು
ತೊಂಡೂರಿನಲ್ಲಿ ಈಚೆಗೆ ಸಂಚರಿಸಿದ ಕಾಡಾನೆಗಳು
ತೊಂಡೂರಿನಲ್ಲಿ ಈಚೆಗೆ ಸಂಚರಿಸಿದ ಕಾಡಾನೆಗಳು
ಅನೇಕ ಕಡೆ ತೋಟಗಳಲ್ಲೇ ಇರುವ ಕಾಡಾನೆಗಳು ಕಾಡಾನೆಗಳ ಕಾಟಕ್ಕೆ ರೋಸಿಹೋದ ರೈತರು ಕಾಡಾನೆಗಳಿಂದ ಮುಕ್ತಿ ಕೊಡಲು ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT