ಮಡಿಕೇರಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ. 15ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಜಿಲ್ಲೆಯಲ್ಲಿ ನಡೆಯಲಿರುವ 77 ಕಿ.ಮೀ ಉದ್ದದ ಮಾನವ ಸರಪಳಿ ಹಾಗೂ ರಿಲೇಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಧಿಕಾರಿಗಳನ್ನು ನಿಯೋಜಿಸಿದರು. ಜೊತೆಗೆ, ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲು ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಶಾಲಾ-ಕಾಲೇಜಿನ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಡೆದ 2ನೇ ಸುತ್ತಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಸಂಪಾಜೆಯಿಂದ ಶಿರಂಗಾಲ ಬಳಿಯ ಗಡಿ ಪ್ರದೇಶದವರೆಗೆ ಸುಮಾರು 77 ಕಿ.ಮೀ. ಮಾನವ ಸರಪಳಿ ಹಾಗೂ ರಿಲೇ ನಡೆಯಲಿದೆ. ಆ ನಿಟ್ಟಿನಲ್ಲಿ ಪ್ರತೀ 100 ಮೀಟರ್‌ಗೆ ಒಬ್ಬರಂತೆ ವಿಭಾಗಾಧಿಕಾರಿ, ಪ್ರತೀ ಒಂದು ಕಿ.ಮೀ.ಗೆ ಒಬ್ಬರಂತೆ ಪ್ರದೇಶ ಅಧಿಕಾರಿ, 3 ರಿಂದ 5 ಕಿ.ಮೀ.ವರೆಗೆ ಒಬ್ಬರಂತೆ ತಾಲ್ಲೂಕು ಮಟ್ಟದ ಅಧಿಕಾರಿ ಜೊತೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರ ಸುರಕ್ಷತೆಗೆ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ’ ಎಂದು ತಿಳಿಸಿದರು.
‘ಮಾನವ ಸರಪಳಿ ಸಂದರ್ಭದಲ್ಲಿ ಸಾರಿಗೆ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯ ಇರುವುದಿಲ್ಲ. ಸುಗಮವಾಗಿ ಸಾರಿಗೆ ಸಂಚಾರ ನಡೆಯಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪ್ರತಿಯೊಬ್ಬರೂ ಗಮನಹರಿಸಬೇಕು’ ಎಂದು ಅವರು ಕೋರಿದರು.
‘ಮಳೆ ಇರುವುದರಿಂದ ರೈನ್‍ಕೋಟ್ ಹಾಗೂ ಕೊಡೆಯನ್ನು ತೆಗೆದುಕೊಂಡು ಬರಬೇಕು’ ಎಂದೂ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಸರ್ಕಾರವು ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ಚಾಮರಾಜನಗರದವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಮಾನವ ಸರಪಳಿ ಏರ್ಪಡಿಸುತ್ತಿದ್ದು, ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಪಾಜೆಯಿಂದ ಶಿರಂಗಾಲ ಬಳಿಯ ಗಡಿ ಪ್ರದೇಶದವರೆಗೆ ಮಾನವ ಸರಪಳಿ ಏರ್ಪಡಿಸಬೇಕಿದೆ. ಆ ದಿಸೆಯಲ್ಲಿ ಆಯಾಯ ಗ್ರಾಮ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಎಲ್ಲರೂ ಪಾಲ್ಗೊಂಡು ಸಹಕರಿಸುವಂತೆ ಮನವಿ ಮಾಡಿದರು.
‘ಭಾರತವು ವಿಶ್ವದಲ್ಲಿ ಬೃಹತ್ ಸಂವಿಧಾನವನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಮಹತ್ವ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಭಾಗವಹಿಸಬೇಕು’ ಎಂದು ಕೋರಿದರು.
‘ಸೆ.15 ರಂದು ಬೆಳಗ್ಗೆ 9 ರಿಂದ 10 ಗಂಟೆವರೆಗೆ ಒಂದು ಗಂಟೆ ಕಾರ್ಯಕ್ರಮ ಇರಲಿದೆ. ಮಾನವ ಸರಪಳಿ ಸಂದರ್ಭದಲ್ಲಿ ಎಲ್ಲರ ಸುರಕ್ಷತೆ ಮತ್ತು ಸುಭದ್ರತೆ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಬೇಕು’ ಎಂದು ಮನವಿ ಮಾಡಿದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಹತ್ವ ಕುರಿತು ಹೊರತಂದಿರುವ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಧನರಾಜ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ- ಕಾಲೇಜಿನ ಮುಖ್ಯಸ್ಥರು ಭಾಗವಹಿಸಿದ್ದರು.
ಸೆ.15 ರಂದು ಬೆಳಗ್ಗೆ 9 ರಿಂದ 10 ಗಂಟೆವರೆಗೆ ಮಾನವ ಸರಪಳಿ ಹೆಚ್ಚಿನ ಪಾಲು ವಿದ್ಯಾರ್ಥಿಗಳೇ ಭಾಗಿ ಎಲ್ಲರ ಸಹಕಾರಕ್ಕೆ ಜಿಲ್ಲಾಧಿಕಾರಿ ಮನವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.