ಶನಿವಾರ, ಮಾರ್ಚ್ 28, 2020
19 °C
ಅರಮೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮೇಲತ್ತಂಡ ರಮೇಶ್ ಅಭಿಪ್ರಾಯ

ಕೊಡಗಿನ ಸಂಸ್ಕೃತಿಗೆ ಐರಿ ಜನಾಂಗದ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯ ಮೂಲ ನಿವಾಸಿಗಳ ಸಂಸ್ಕೃತಿ ಜಗತ್ತಿನಲ್ಲೇ ಅತಿವಿಶಿಷ್ಟವಾಗಿದ್ದು ಇದಕ್ಕೆ ಐರಿ ಜನಾಂಗದ ಕೊಡುಗೆ ಅಪಾರ ಎಂದು ಕೊಡಗು ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಅರಮೇರಿ ಸಮೀಪದ ಐರಿ ಸಮಾಜದ ಜಾಗದಲ್ಲಿ ನಡೆದ 2019-20ನೇ ಸಾಲಿನ ಕೊಡಗು ಐರಿ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನಾಂಗದ ಏಳಿಗೆಗಾಗಿ ಎಲ್ಲಾ ಐರಿ ಮನೆ ತನಗಳು ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದರು.

ಅರಮೇರಿ ಬಳಿ ಖರೀದಿಸಲಾಗಿರುವ 1.50 ಎಕರೆ ಜಾಗದಲ್ಲಿ ಐರಿ ಸಮಾಜದ ಕಟ್ಟಡ ನಿರ್ಮಾಣ ಮಾಡಬೇಕಾಗಿದ್ದು ಇದಕ್ಕೆ ಸಮಾಜ ಬಾಂಧವರು ನೆರವು ನೀಡುವಂತೆ ಕೋರಿದರು.

ಕೊಡಗು ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಮಾತನಾಡಿ, ಕೊಡವ ಭಾಷಿಕರ ಒಡವೆ, ಆಯುಧಗಳು, ದೇವಸ್ಥಾನಗಳು ಮತ್ತು ಐನ್ ಮನೆಗಳು ಐರಿ ಜನಾಂಗದ ಕೊಡುಗೆಯಾಗಿದ್ದು ಇದನ್ನು ಗುರುತಿಸುವಂತಹ ಕೆಲಸವಾಗಬೇಕಿದೆ, ಈ ನಿಟ್ಟಿನಲ್ಲಿ ಐರಿ ಸಮಾಜ ಮುಂದಿನ ದಿನಗಳಲ್ಲಿ ರಚನಾತ್ಮಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು. ಸಮಾಜ ಬಾಂಧವರು ಐರಿ ಸಮಾಜದ ಸದಸ್ಯತ್ವ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಸಭೆಯಲ್ಲಿ ಸಮಾಜ ಬಾಂಧವರ ಏಳಿಗೆ ನಿಟ್ಟಿನಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮೇಲತ್ತಂಡ ರಮೇಶ್ ನೇತೃತ್ವದ ಈಗಿರುವ ಆಡಳಿತ ಮಂಡಳಿಯನ್ನೇ ಮುಂದಿನ ಅವಧಿಗೂ ಮುಂದುವರಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಿವೃತ್ತ ಡಿವೈಎಸ್ಪಿ ತಟ್ಟಂಡ ಕುಶಾಲಪ್ಪ, ಉರಗ ತಜ್ಷ ಪೊನ್ನೀರ ಸ್ನೇಕ್ ಗಗನ್, ಹಿರಿಯ ಶಿಕ್ಷಕಿ ಮುಲ್ಲೈರೀರ ಹೇಮಾವತಿ ಹಾಗೂ ಪತ್ರಕರ್ತ ಐಮಂಡ ಗೋಪಾಲ್ ಸೋಮಯ್ಯ ಅವರನ್ನು ಕೊಡಗು ಐರಿ ಸಮಾಜದ ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಾಧಕರಾದ ತಟ್ಟಂಡ ಹರೀಶ್ ತಮ್ಮಯ್ಯ ಹಾಗೂ ಕುಟ್ಟೈರೀರ ಸಾತ್ವಿಕ್ ಉತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಕಾಮೆಯಂಡ ಗಣೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)