ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಮನ ರಂಜಿಸಿದ ಗ್ರಾಮೀಣ ಕ್ರೀಡೆ: ಹೆಬ್ಬಾಲೆಯಲ್ಲಿ ‘ಜಾನಪದ ಗ್ರಾಮ ಸಿರಿ’

Published 6 ಮಾರ್ಚ್ 2024, 8:44 IST
Last Updated 6 ಮಾರ್ಚ್ 2024, 8:44 IST
ಅಕ್ಷರ ಗಾತ್ರ

ಕುಶಾಲನಗರ: ಗ್ರಾಮೀಣ ಕ್ರೀಡೆಗಳಲ್ಲಿ ಹೆಬ್ಬಾಲೆ ಗ್ರಾಮದ ಮಹಿಳೆಯರು, ಮಕ್ಕಳು ಮತ್ತು ಪುರುಷರು ಪಾಲ್ಗೊಂಡು ಸಂಭ್ರಮಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕುಶಾಲನಗರ ತಾಲ್ಲೂಕು ಘಟಕ, ಹೆಬ್ಬಾಲೆ ಹೋಬಳಿ ಘಟಕ ಮತ್ತು ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಹೆಬ್ಬಾಲೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ‘ಜಾನಪದ ಗ್ರಾಮ ಸಿರಿ’ ಅಂಗವಾಗಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟ ಕಂಡು ಬಂದ ದೃಶ್ಯಗಳು ಇವು.

ತುಂಬಿಗೆ ಬಿಂದಿಗೆ ಹೊತ್ತು ಓಡುವುದು, ಕೆರೆದಡ, ಲಿಂಬು ಚಮಚ ಓಟ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವುದು, ಹಗ್ಗ ಜಗ್ಗಾಟ, ಮಕ್ಕಳಿಗೆ ಚಿನ್ನಿದಾಂಡು, ಗೋಲಿ ಹೀಗೆ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಎಲ್ಲ ವಯೋಮಾನದವರು ಪಾಲ್ಗೊಂಡು ಪ್ರೇಕ್ಷಕರನ್ನು ರಂಜಿಸಿದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಾಜಿ ಸೈನಿಕ ಎಚ್.ಪಿ.ರಾಜಣ್ಣ ಮಾತನಾಡಿ, ‘ಗ್ರಾಮೀಣ ಕ್ರೀಡೆಗಳ ಉಳಿಸಿ ಬೆಳೆಸುವಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯತೆ ಇದೆ ಎಂದರು. ಆಧುನಿಕ ಯುಗದಲ್ಲಿ ಯುವಜನಾಂಗ ಕೇವಲ ಮೊಬೈಲ್ ಗೇಮ್ ಗಳಲ್ಲಿ ಮಗ್ನರಾಗಿ ದೈಹಿಕವಾಗಿ ಬಹಳ ದುರ್ಬಲರಾಗುತ್ತಿದ್ದಾರೆ. ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಿ ಆಸಕ್ತಿ ಬೆಳೆಯುವಂತೆ ಮಾಡಬೇಕು’ ಎಂದರು.

ತೊರೆನೂರು ಗ್ರಾಮದ ರಾಜ್ಯಮಟ್ಟದ ಕ್ರೀಡಾಪಟು ಟಿ.ಎಚ್.ಗಣೇಶ್ ಕ್ರೀಡಾ ಜ್ಯೋತಿ ಬೆಳಗಿಸಿ, ‘ಯುವ ಜನಾಂಗ ಗ್ರಾಮೀಣ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಬೇಕು’ ಎಂದರು.

ಗ್ರಾಮ ಸಿರಿ ಆಚರಣಾ ಸಮಿತಿಯ ಆರ್ಥಿಕ ಸಮಿತಿ ಅಧ್ಯಕ್ಷ ಎಚ್.ಕೆ.ನಟೇಶ್ ಮಾತನಾಡಿ, ‘ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತು ಇಂತಹ ಕ್ರೀಡಾಕೂಟ ಆಯೋಜನೆ ಮಾಡಿ ಇಂದಿನ ಯುವ ಪೀಳಿಗೆಯಲ್ಲಿ ಗ್ರಾಮೀಣ ಆಟಗಳ ಬಗ್ಗೆ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಈ ಸಂದರ್ಭ ನಿವೃತ್ತ ಶಿಕ್ಷಕ ಡಿ.ಪಿ.ವೀರಭದ್ರಪ್ಪ, ಹೆಬ್ಬಾಲೆ ಗ್ರಾ.ಪಂ ಅಧ್ಯಕ್ಷೆ ಅರುಣಕುಮಾರಿ, ಸದಸ್ಯ ಎಚ್.ಪಿ.ತನುಕುಮಾರ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ನಾಗೇಶ್, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಎಚ್.ಎಲ್.ರಮೇಶ್, ಕೆ.ವಿ.ಉಮೇಶ್, ಪುಟ್ಟೇಗೌಡ, ಕ್ರೀಡಾ ಸಮಿತಿ ಅಧ್ಯಕ್ಷ ಭೋಜೆಗೌಡ, ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷ ಎಚ್.ಆರ್.ಪ್ರದೀಪ್ ರೆಡ್ಡಿ, ಕಣಿವೆ ರಾಜ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT