ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಬೇಸರ ನೀಗಿಸಲು ಓದುಗರ ಸಂಗಾತಿ ‘ಸುಧಾ’

ಹಳ್ಳಿಮನೆಯ ಪುಸ್ತಕ ಭಂಡಾರದಲ್ಲಿವೆ 2,000ಕ್ಕೂ ಅಧಿಕ 40 ವರ್ಷಗಳ ‘ಸುಧಾ’ ಸಂಚಿಕೆಗಳು
Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗು ಜಿಲ್ಲೆಯ ಕಗ್ಗೋಡ್ಲು ಗ್ರಾಮದ ಶಂಕರನಾರಾಯಣ ಅವರ ಮನೆ ‘ಭಗವತಿ ಕೃಪಾ’ದಲ್ಲಿ ನೋಡಿದವರೆಲ್ಲಾ ಬೆರಗಾಗುವಷ್ಟು ‘ಸುಧಾ’ ವಾರ ಪತ್ರಿಕೆಗಳ ಬೃಹತ್ ಸಂಗ್ರಹವೇ ಇದೆ. ಇದೀಗ ಲಾಕ್‌ಡೌನ್ ಅವಧಿಯಲ್ಲಿ ಮನೆಮಂದಿಗೆಲ್ಲಾ ಹಳೆಯ ಸುಧಾ ಸಂಚಿಕೆಗಳು ಸಮಯ ಕಳೆಯುವ ಸಂಗಾತಿಯಾಗಿವೆ.

1980ನೇ ಇಸ್ವಿಯಿಂದ ಆರಂಭಿಸಿ, ನಿರಂತರವಾಗಿ ಸುಧಾ ಓದುವ ಹವ್ಯಾಸ ಬೆಳೆಸಿಕೊಂಡ ಶಂಕರನಾರಾಯಣ ಅವರ ಕುಟುಂಬ ವಾರಪತ್ರಿಕೆಯನ್ನು ಜತನವಾಗಿ ಕಾಪಾಡಿಕೊಂಡು ಬಂದಿದೆ.

ವರ್ಷಕ್ಕೆ 52 ಸಂಚಿಕೆಗಳಂತೆ 40 ವರ್ಷಗಳಲ್ಲಿ ಎರಡು ಸಾವಿರಕ್ಕೂ ಅಧಿಕ ‘ಸುಧಾ’ಗಳನ್ನು ಸಂಗ್ರಹಿಸಿಡಲಾಗಿದೆ. ಈಚೆಗೆ ಹೊಸ ಮನೆಯನ್ನು ನಿರ್ಮಿಸಿ ಮನೆಯ ಸಾಮಗ್ರಿಗಳನ್ನು ಸ್ಥಳಾಂತರಿಸುವಾಗ ಪ್ರತಿ ವರ್ಷದ 52 ಸಂಚಿಕೆಗಳನ್ನು ಜೊತೆಯಾಗಿಸಿ ಕಪಾಟಿನಲ್ಲಿ ಜೋಡಿಸಿಡಲಾಗಿದೆ. ಮನೆ ಹಿರಿಯರಿಗೂ ಮಕ್ಕಳಿಗೂ ಈಗ ಸುಧಾ ನಲ್ಮೆಯ ಸಂಗಾತಿಯಾಗಿದೆ.

ಮಾಹಿತಿಪೂರ್ಣ ಲೇಖನಗಳ ಕಣಜವಾಗಿರುವ ಸುಧಾ ವಾರಪತ್ರಿಕೆಯಲ್ಲಿ ಹಿರಿ, ಕಿರಿಯರಿಂದ ಎಲ್ಲಾ ವಯೋಮಾನದವರಿಗೂ ಸರಿ ಹೊಂದುವ ಲೇಖನಗಳಿವೆ. ಕುತೂಹಲ ಕೆರಳಿಸುವ ಧಾರಾವಾಹಿಗಳಿವೆ. ಮನೋಲ್ಲಾಸಕ್ಕೆ ಸಣ್ಣಕಥೆಗಳಿವೆ. ಜ್ಞಾನವೃದ್ಧಿಗೆ ವೈವಿಧ್ಯಮಯ ಬರಹಗಳಿವೆ ಎನ್ನುತ್ತಾರೆ ಶಂಕರನಾರಾಯಣ.

ಮಡಿಕೇರಿಯ ರತ್ನತ್ರಯ ಏಜೆನ್ಸೀಸ್ ಪುಸ್ತಕದ ಅಂಗಡಿಯಿಂದ 1980ರ ನವೆಂಬರ್‌ನಲ್ಲಿ ಸುಧಾ ಕೊಂಡುಕೊಳ್ಳಲು ಆರಂಭಿಸಿದಾಗ ಪತ್ರಿಕೆಗೆ ಒಂದು ರೂಪಾಯಿ ಬೆಲೆಯಿತ್ತು. ನೆರೆ ಕರೆಯವರಿಂದ ಪ್ರಜಾಮತ ಮತ್ತಿತರ ಪತ್ರಿಕೆಗಳನ್ನು ಕೇಳಿ ತಂದು ಓದುತ್ತಿದ್ದೆವು. ಬಳಿಕ ಸ್ವತಃ ಸುಧಾ ಕೊಂಡುಕೊಳ್ಳುವ ಮನಸ್ಸಾಯಿತು. ಹಲವು ವರ್ಷಗಳು ನಿರಂತರವಾಗಿ ಸುಧಾ ಖರೀದಿಸಿದೆ. ಇದೀಗ ಮಗ ಮತ್ತು ಅವನ ಕುಟುಂಬದ ಸಂಗಾತಿ ‘ಸುಧಾ’ ಆಗಿದೆ. ಲಾಕ್‌ಡೌನ್ ಅವಧಿಯಲ್ಲಿ ಸುಧಾ ಸಂಚಿಕೆಗಳು ಸಮಯ ಕಳೆಯಲು ನೆರವಾಗುತ್ತಿವೆ ಎಂದು ಅವರು ಪುಸ್ತಕ ಪ್ರೇಮ ವ್ಯಕ್ತಪಡಿಸಿದರು.

ಸುಧಾ ಮಾತ್ರವಲ್ಲ, ಮಯೂರ ಮಾಸಪತ್ರಿಕೆ, ಕನ್ನಡ ಲೇಖಕರ ಉತ್ತಮ ಕೃತಿಗಳು, ರಾಮಾಯಣ, ಮಹಾಭಾರತ ಗ್ರಂಥಗಳು ಸಹ ಅವರ ಪುಸ್ತಕ ಭಂಡಾರದೊಳಗೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT