ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ದಸರಾ: ಶೋಭಾಯಾತ್ರೆಗೆ ಅಬ್ಬರ ಇರಲ್ಲ, ಪ್ರಖರ ದೀಪವೂ ಇಲ್ಲ...!

Published 22 ಅಕ್ಟೋಬರ್ 2023, 6:26 IST
Last Updated 22 ಅಕ್ಟೋಬರ್ 2023, 6:26 IST
ಅಕ್ಷರ ಗಾತ್ರ

ಮಡಿಕೇರಿ: ವಿಜಯದಶಮಿಯಂದು ನಡೆಯುವ ದಸರಾ ದಶಮಂಟಪಗಳ ಶೋಭಾಯಾತ್ರೆಯ ಮೇಲೆ ಈ ಬಾರಿ ಹಲವು ನಿಬಂಧನೆಗಳನ್ನು ಹಾಗೂ ನಿರ್ಬಂಧಗಳನ್ನು ವಿಧಿಸಲಾಗಿದೆ.

ಮಡಿಕೇರಿ ದಸರಾ ದಶಮಂಟಪ ಸಮಿತಿ ತುರ್ತು ಸಭೆ ನಡೆಸಿದ್ದು, ಶಬ್ದಮಾಲಿನ್ಯ ಕುರಿತು ನ್ಯಾಯಾಲಯದ ಆದೇಶವನ್ನು ಪರಿಪಾಲಿಸಲು ನಿರ್ಧರಿಸಿತು.

ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಅಧ್ಯಕ್ಷ ಎಚ್.ಮಂಜುನಾಥ್, ‘ಧ್ವನಿವರ್ಧಕದ ಶಬ್ದದ ಪ್ರಮಾಣಕ್ಕೆ ಸಂಬಂಧಿಸಿದಂತೆ ಸು‍ಪ್ರೀಂಕೋರ್ಟ್ ಆದೇಶ ಪಾಲಿಸಲು ನಿರ್ಧರಿಸಲಾಗಿದೆ. ಜತೆಗೆ, ಲೇಸರ್ ಲೈಟ್‌ಗಳು, ಸಿಡಿಮದ್ದುಗಳ ಬಳಕೆಯನ್ನೂ ನಿಷೇಧಿಸಲಾಗಿದೆ’ ಎಂದು ತಿಳಿಸಿದರು.

ಧ್ವನಿವರ್ಧಕಕ್ಕೆ ಯಾವುದೇ ಬಗೆಯ ಕ್ರೇನ್ ಬಳಕೆ ಮಾಡುವಂತಿಲ್ಲ. ತೀರ್ಪುಗಾರರ ವಿರುದ್ಧ ದಿಕ್ಕಾರ ಕೂಗುವ ಮಂಟಪ ಸಮಿತಿಯನ್ನು 3 ವರ್ಷಗಳ ಕಾಲ ನಿಷೇಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಬ್ಬರದ ಧ್ವನಿಬಳಕೆಯಲ್ಲಿ ಪೊಲೀಸ್ ಇಲಾಖೆ ನೀಡುವ ಎಲ್ಲ ಸೂಚನೆಗಳನ್ನೂ ಸಾರಸಗಟಾಗಿ ಎಲ್ಲ ಸಮಿತಿಯವರೂ ಪಾಲಿಸಬೇಕು. ಜತೆಗೆ, ಪಾಶ್ಚಾತ್ಯ ಸಂಗೀತ, ಚಿತ್ರಗೀತೆಗಳ ಬದಲಿಗೆ ಭಕ್ತಿಸಂಗೀತಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದೂ ಸೂಚಿಸಿದರು.

‍ಪ್ರತಿ ಮಂಟಪವೂ ತಮ್ಮ ಪ್ರದರ್ಶನವನ್ನು 22 ನಿಮಿಷಕ್ಕೆ ಸೀಮಿತಗೊಳಿಸಬೇಕು. ಇತರ ಮಂಟಪ‍ಗಳ ಪ್ರದರ್ಶನದ ವೇಳೆ ಪ್ರದರ್ಶನ ಮಂಟಪದ ಹಿಂದೆ ಮತ್ತು ಮುಂದೆ ಇರುವ ಮಂಟಪಗಳು ತಮ್ಮ ಧ್ವನಿವರ್ಧಕಗಳನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ತಾಂತ್ರಿಕದೋಷದಿಂದ ಮಂಟಪಗಳು ನಿಂತರೆ ಹಿಂದಿನ ಮಂಟಪಗಳಿಗೆ ಸ್ಥಳಾವಕಾಶ ನೀಡಿ ಶೋಭಾಯಾತ್ರೆಯನ್ನು ಮುಂದುವರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.

ಎಲ್ಲಾ ಸಮಿತಿಗಳು ಕಡ್ಡಾಯವಾಗಿ ಕೇವಲ 2 ಟ್ರಾಕ್ಟರ್‌ಗಳನ್ನಷ್ಟೇ ಬಳಕೆ ಮಾಡಬೇಕು. ಟ್ರಾಕ್ಟರ್‌ ಬಿಟ್ಟು ಬೇರೆ ಯಾವುದೇ ವಾಹನದಲ್ಲೂ ಕಲಾಕೃತಿಗಳನ್ನು ಬಳಕೆ ಮಾಡಬಾರದು. ಧ್ವನಿವರ್ಧಕಕ್ಕೆ ಒಂದು ವಾಹನ ಹಾಗೂ ಬೆಳಕಿನ ವ್ಯವಸ್ಥೆಗೆ ಒಂದು ಲಘುವಾಹನವನ್ನು ಮಾತ್ರವೇ ಬಳಕೆ ಮಾಡಬೇಕು. ಪ್ರತಿ ಮಂಟಪವೂ ದೇವಾಲಯದ ಆವರಣದಲ್ಲೇ ಮಂಟಪ ತಯಾರಿ ನಡೆಸಿ, ಶೋಭಾಯಾತ್ರೆಗೆ ಬರಬೇಕು. ತೀರ್ಪು ನಡೆಯುವ ಸ್ಥಳದಲ್ಲಿ ಮಂಟಪ ರೂಪಿಸಬಾರದು ಎಂಬ ನಿಯಮಗಳನ್ನು ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಿತಿಯ ಕಾರ್ಯಾಧ್ಯಕ್ಷೆ ಜಯಂತಿ ಆರ್ ಶೆಟ್ಟಿ ಮಾತನಾಡಿ, ‘ಸುಪ‍್ರೀಂಕೋರ್ಟ್‌ ನೀಡಿರುವ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು. ಪೊಲೀಸರೂ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಇವುಗಳನ್ನೆಲ್ಲ ಎಲ್ಲರೂ ಪಾಲಿಸಬೇಕು ಎಂದು ಎಲ್ಲ ಸಮಿತಿಯವರಿಗೆ ತಿಳಿಸಿದ್ದೇವೆ’ ಎಂದರು.

ಸಮಿತಿಯ ಪದಾಧಿಕಾರಿಗಳಾದ ಎಚ್.ಆರ್.ಜಗದೀಶ್, ಆನಂದ್, ರಘುಪತಿ, ಗೋಪಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT