ಮಡಿಕೇರಿ: ಮುಂದಿನ ಶೈಕ್ಷಣಿಕ ವರ್ಷದಿಂದ ಕೊಡಗು ವಿಶ್ವವಿದ್ಯಾಲಯವು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರು ತಿಳಿಸಿದರು.
ಕರ್ನಾಟಕ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಫೋರ್ಕ್ ಟೆಕ್ನೊಲಜಿ ಹಾಗೂ ಕೊಡಗು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ನಡೆದ ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣ ಹಾಗೂ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ತಲಾ ಒಂದೊಂದು ಲಾಂಗ್ವೇಜ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ಜೊತೆಯಲ್ಲಿ ಕರ್ನಾಟಕ ಸರ್ಕಾರದ ಕಲಿಕೆಯೊಂದಿಗೆ ಕೌಶಲ್ಯ ಎಂಬ ಯೋಜನೆಯನ್ನು ಕೊಡಗು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆಪರಿಚಯಿಸಲಾಗುವುದು ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ಕೇವಲ ಒಂದು ದಿನದ ಸಂಭ್ರಮವಾಗಬಾರದು. ಬದಲಾಗಿ ವಿದ್ಯಾರ್ಥಿಗಳು ನಮ್ಮನ್ನು ಸದಾ ನೆನಪಿಸಿಕೊಳ್ಳುವಂತಹ ನೆಲೆಯಲ್ಲಿ ನಮ್ಮ ಕಾರ್ಯಚಟುವಟಿಕೆಗಳು ಇರಬೇಕು. 21ನೇ ಶತಮಾನದ ಆಧುನಿಕತೆಗೆ ಅಧ್ಯಾಪಕರು ತೆರದುಕೊಳ್ಳಬೇಕು. ಆ ಮೂಲಕ ಹೊಸ ಹೊಸ ಕಲೆ, ತಂತ್ರಜ್ಞಾನಗಳನ್ನು ಅವರ ಅಧ್ಯಯನ, ಅಧ್ಯಾಪನ ಮತ್ತು ಕಲಿಕೆಯಲ್ಲಿ ಬಳಸುವ ಅವಕಾಶ ಸಾಕಷ್ಟು ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ ಮಾತನಾಡಿ, ‘ಎರಡು ವಾರಗಳ ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕೌಶಲ್ಯ ಅಧಾರಿತ ಚಟುವಟಿಕೆಗಳನ್ನು, ಕೃತಕ ಬುದ್ಧಿಮತ್ತೆಯ ತಿಳಿವನ್ನು 50 ಅಧ್ಯಾಪಕರಿಗೆ ನೀಡಲಾಯಿತು’ ಎಂದರು.
ಕೊಡಗು ವಿಶ್ವವಿದ್ಯಾಲಯದ ಪರಿಕ್ಷಾಂಗ ಕುಲಸಚಿವರಾದ ಡಾ.ಸೀನಪ್ಪ, ತಂತ್ರಜ್ಞಾನ ಪರಿಣಿತ ತರಬೇತುದಾರ ಅಭಿಷೇಕ್ ರಾಜೇಂದ್ರ, ಹಿಂದಿ ವಿಭಾಗದ ಡಾ.ಶ್ರೀಧರ ಹೆಗಡೆ, ಕನ್ನಡ ವಿಭಾಗದ ಡಾ.ಎನ್.ವಿ.ಕರುಣಾಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.