ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಕುಟ್ಟದ ಶಿಲಾಮಯ ಸುಂದರ ಕೃಷ್ಣ ದೇಗುಲ, ₹2.50 ಕೋಟಿ ವೆಚ್ಚ

ದಾನಿಗಳ ಭಕ್ತರ ದೇಣಿಗೆ * ಪ್ರಾಂಗಣದಲ್ಲಿ ಕಲ್ಲಿನ 25 ಕಂಬ
Published 5 ಮೇ 2024, 6:44 IST
Last Updated 5 ಮೇ 2024, 6:44 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಡಗಿನ ಗಡಿಭಾಗ ಕುಟ್ಟದಲ್ಲಿ ಸುಂದರ ಕೃಷ್ಣ ದೇವಾಲಯ ನಿರ್ಮಾಣಗೊಂಡಿದೆ. ಸ್ಥಳೀಯರು, ಹೊರಪ್ರದೇಶಗಳ ಭಕ್ತರ ಸಹಕಾರದೊಂದಿಗೆ ₹2.50 ಕೋಟಿ ವೆಚ್ಚದಲ್ಲಿ ನೂತನ ದೇವಾಲಯವನ್ನು ನಿರ್ಮಿಸಲಾಗಿದೆ.

ಅರ್ಧ ಎಕರೆ ವಿಸ್ತಿರ್ಣದಲ್ಲಿ  ಕಲ್ಲಿನಿಂದಲೇ ದೇವಾಲಯ ನಿರ್ಮಾಣಗೊಂಡಿದೆ. ಸುತ್ತಲೂ ಗ್ರಾನೈಟ್  ಗೋಡೆ ಹಾಗೂ ವಿಶಾಲವಾದ ಪ್ರಾಂಗಣವಿದೆ. ಅದರ ಒಳಗೆ  ಸುಂದರವಾಗಿ ಕೆತ್ತಿರುವ ಕೃಷ್ಣನ ಶಿಲಾ ದೇವಾಲಯ, ಇದರ ಮುಂಭಾಗದಲ್ಲಿ ಕಲಾತ್ಮಕವಾಗಿ ಕೆತ್ತಿರುವ ತೀರ್ಥಗೋಪುರಗಳು ಇವೆ. ಪ್ರಾಂಗಣದಲ್ಲಿ ಕಲ್ಲಿನ 25 ಕಂಬಗಳಿವೆ. ಅದರ ಮೇಲೆ ಕಬ್ಬಿಣದ ಕವಕೋಲುಗಳನ್ನು ಹಾಕಿ ಚಾವಣಿ ಮೇಲೆ ಹೆಂಚು ಹೊದಿಸಲಾಗಿದೆ. ಮಂಗಗಳು ದೇವಸ್ಥಾನದ ಒಳಗೆ ಬಾರದಂತೆ ತಡೆಯಲು ಹೆಂಚಿನ ಚಾವಣಿ ಮೇಲೆ ಸುತ್ತಲೂ ಸೋಲಾರ್ ತಂತಿ ಹಾಕಲಾಗಿದೆ. ಐಬಾಕ್ಸ್ ಕಂಪೆನಿಯವರು ವಿದ್ಯುತ್ ಮತ್ತು ಸೋಲಾರ್ ಅಳವಡಿಸಿಕೊಟ್ಟಿದ್ದಾರೆ.

 ಗಣಪತಿ ದೇವಸ್ಥಾನ ಹಾಗೂ ಹೊರಗೆ ನವಗ್ರಹಗಳ ಗುಡಿ ತಲೆ ಎತ್ತುತ್ತಿವೆ. ಕೃಷ್ಣ ಗೋಪುರವನ್ನು ಸೋಮೆಯಂಡ ಮಣಿ ಮಾಚಯ್ಯ ಅವರ ಮಕ್ಕಳು ಹಾಗೂ ತೀರ್ಥಮಂಟಪವನ್ನು ತೀತಿರ ನರೇನ್ ಕುಟುಂಬಸ್ಥರು ನಿರ್ಮಿಸಿಕೊಟ್ಟಿದ್ದಾರೆ. ದೇವಸ್ಥಾನದ ಎಲ್ಲ ಗ್ರಾನೈಟ್ ಮತ್ತು ಕಲ್ಲುಗಳನ್ನು ಕಾರ್ಕಳದಿಂದ ತರಿಸಲಾಗಿದೆ. ಅಲ್ಲಿನ ಶಿಲ್ಪಿ ಅಶೋಕ್ ಇವುಗಳನ್ನು ಕಲಾತ್ಮಕವಾಗಿ ಕೆತ್ತಿ ಸುಂದರ ರೂಪಕೊಟ್ಟಿದ್ದಾರೆ.

ದೇವಸ್ಥಾನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಚೆಕ್ಕೇರ ಗಣಪತಿ, ಉಪಾಧ್ಯಕ್ಷರಾಗಿ ತೀತಿರ ನರೇನ್, ಕಾರ್ಯದರ್ಶಿ ಚೋಡುಮಾಡ ಶರೀನ್ ಸುಬ್ಬಯ್ಯ, ಖಜಾಂಚಿಯಾಗಿ ದುಗ್ಗಂಡ ರವಿ, ನಿರ್ದೇಶಕರಾಗಿ ಮಚ್ಚಮಾಡ ಸುಬ್ರಮಣಿ, ಮಚ್ಚಮಾಡ ಕಾಶಿ ಕಾರ್ಯಪ್ಪ, ತೀತಿರ ಕುಶಾಲಪ್ಪ, ತೀತಿರ ಕಾರ್ಯಪ್ಪ, ಅಜ್ಜಿಕುಟ್ಟೀರ ಬೋಪಣ್ಣ, ತೀತಿರ ತೀರ್ಥ ಮಂಜುನಾಥ್, ಮುಕ್ಕಾಟೀರ ನವೀನ್, ಧ್ಯಾನ್ ದರ್ಶನ್, ಪ್ರಶಾಂತ್, ಚಂದ್ರಕುಟ್ಟನ್, ಕಟ್ಟೇರ ರಮೇಶ್, ತೀತಿರ ಅಣ್ಣಯ್ಯ, ಜಾನ್ಸನ್, ಕಾರ್ಯನಿರ್ವಹಿಸುತ್ತಿದ್ದಾರೆ.
ಹೊರಗಿನ ಭಕ್ತರ ಜತೆಗೆ ಕುಟ್ಟ, ಬಾಡಗ, ಮಂಚಳ್ಳಿ, ತೈಲ ಗ್ರಾಮದ ಪ್ರತಿ  ಕುಟುಂಬದವರು ದೇವಸ್ಥಾನ ನಿರ್ಮಾಣಕ್ಕೆ ತಮ್ಮ ಕಾಣಿಕೆ ನೀಡಿದ್ದಾರೆ. ದೇವ ಮೊದಲಾದ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಈ ದೇವಾಲಯದ ಉದ್ಘಾಟನೆ ತಿಂಗಳ ಹಿಂದೆ ಶ್ರದ್ಧಾ ಭಕ್ತಿಯಿಂದ ಜರುಗಿತ್ತು.

‘ಕನಸು ನನಸು’

‘ಕೊಡಗಿನ ಗಡಿಭಾಗ  ಕುಟ್ಟದಲ್ಲಿ ಹಿಂದೆ ಸಣ್ಣ ರೂಪದಲ್ಲಿದ್ದ ಕೃಷ್ಣ ದೇವಸ್ಥಾನವನ್ನು ನೂತನವಾಗಿ ನಿರ್ಮಾಣಮಾಡಬೇಕು ಎಂಬುದು ಸ್ಥಳೀಯರ ಕನಸಾಗಿತ್ತು. ಇದೀಗ ನೆರವೇರಿದೆ. ಇದಕ್ಕಾಗಿ ಭಕ್ತರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ’ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ನಿರ್ದೇಶಕ  ಮಚ್ಚಮಾಡ ಸುಬ್ರಮಣಿ ತಿಳಿಸಿದರು.

ದಾನಿಗಳ ಉದಾರ ಕೊಡುಗೆ

ದೇವಸ್ಥಾನಕ್ಕೆ ಕುಟ್ಟ ಮುಖ್ಯ ರಸ್ತೆಯಿಂದ ಅಂದಾಜು 50 ಅಡಿಯಷ್ಟು ಎತ್ತರ ಏರಬೇಕು.  ಇಲ್ಲಿ 2 ಅಡಿ ಅಗಲ ಹಾಗೂ 7 ಅಡಿ ಉದ್ದದ 85 ಮೆಟ್ಟಿಲುಗಳು 1985ರಲ್ಲಿ ಮುಕ್ಕಾಟೀರ ರಾಜಾ ಮಂದಣ್ಣ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿದ್ದಾಗ ನಿರ್ಮಾಣಗೊಂಡಿದ್ದವು. ಗಣಪತಿ ಗುಡಿಯನ್ನು ತೀತಿರ ರೋಷನ್ ಅಪ್ಪಚ್ಚು ನಿರ್ಮಿಸಿಕೊಡುತ್ತಿದ್ದಾರೆ. ದೇವಸ್ಥಾನದ ಪಶ್ಚಿಮ ದಿಕ್ಕಿನಿಂದ ವಾಹನಗಳು ಬರುವ ರಸ್ತೆಗಾಗಿ ಚೆಪ್ಪುಡೀರ ಅಪ್ಪಯ್ಯ ಅವರ ಮಗ ಕಿಶಾನ್ ತಮ್ಮ ಕಾಫಿ ತೋಟದ ಒಂದು ಬದಿಯಲ್ಲಿ ಅರ್ಧ ಎಕರೆಯಷ್ಟು ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ದೇವಸ್ಥಾನಕ್ಕೆ ಬೇಕಾದ ನೀರನ್ನು ಚೆಕ್ಕೆರ ಗಣಪತಿ ಅವರು ತಮ್ಮ ತಂದೆ ಧರ್ಮಜ ದೇವಯ್ಯ ಅವರ ಸ್ಮರಣೆಗೆ ತೆರೆದ ಬಾವಿಯಿಂದ ನೀಡುತ್ತಿದ್ದಾರೆ.

ದೇವಸ್ಥಾನಕ್ಕೆ ತೆರಳುವ ಹೆಬ್ಬಾಗಿಲು ಹಾಗೂ ಮೆಟ್ಟಿಲುಗಳ ಸಾಲು
ದೇವಸ್ಥಾನಕ್ಕೆ ತೆರಳುವ ಹೆಬ್ಬಾಗಿಲು ಹಾಗೂ ಮೆಟ್ಟಿಲುಗಳ ಸಾಲು
ಗೋಣಿಕೊಪ್ಪಲು ಬಳಿಯ ಕುಟ್ಟದ ನೂತನ ಶಿಲಾಮಯ ಶ್ರೀಕೃಷ್ಣ ದೇವಾಲಯ
ಗೋಣಿಕೊಪ್ಪಲು ಬಳಿಯ ಕುಟ್ಟದ ನೂತನ ಶಿಲಾಮಯ ಶ್ರೀಕೃಷ್ಣ ದೇವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT