ಶನಿವಾರ, ಜನವರಿ 25, 2020
28 °C
ಬೇಸಿಗೆ ಸಮೀಪಿಸಿದರೂ ಕುಂದದ ನೀರು; ಅರಣ್ಯದ ವಿಸ್ತೀರ್ಣ 840 ಚದರ ಕಿಮೀ.

ತುಂಬಿ ತುಳುಕುತ್ತಿವೆ ನಾಗರಹೊಳೆ ಉದ್ಯಾನದ ಕೆರೆಗಳು

ಡಾ.ಜೆ.ಸೋಮಣ್ಣ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ಎರಡು ವರ್ಷಗಳ ಹಿಂದೆ ಸತತ ಬರಗಾಲದಿಂದ ಬತ್ತಿ ಹೋಗಿದ್ದ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಕೆರೆಗಳು ಈ ವರ್ಷ ತುಂಬಿ ತುಳುಕುತ್ತಿವೆ. ಬೇಸಿಗೆ ಸಮೀಪಿಸುತ್ತಿರುವ ಅವಧಿಯಲ್ಲಿಯೂ ಕೆರೆಗಳು ನಳನಳಿಸುತ್ತಿವೆ. ಅರಣ್ಯದೊಳಗೆ ಕಣ್ಣು ಹಾಯಿಸಿದ ಕಡೆಯಲೆಲ್ಲ ಶುದ್ಧ ನೀರಿನ ಕೆರೆಗಳು ಕಣ್ಮನ ತಣಿಸುತ್ತಿವೆ. ವನ್ಯಜೀವಿಗಳ ದಾಹವನ್ನು ನೀಗಿಸುತ್ತಿವೆ.

ಒಟ್ಟು 848 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಉದ್ಯಾನದಲ್ಲಿ 220ಕ್ಕೂ ಹೆಚ್ಚಿನ ಕೆರೆಗಳಿವೆ. ಜತೆಗೆ ನೂರಾರು ಹಳ್ಳಕೊಳ್ಳಗಳಿವೆ. ಈ ಬಾರಿ ಅರಣ್ಯ ಭಾಗಕ್ಕೆ 200 ಸೆಂಟಿ ಮೀಟರ್‌ಗೂ ಅಧಿಕ ಮಳೆ ಬಿದ್ದಿದೆ. ಕಳೆದ ವರ್ಷವೂ ಇಲ್ಲಿಗೆ ಉತ್ತಮ ಮಳೆಯಾಗಿತ್ತು. ಕಳೆದ ಬೇಸಿಗೆಯಲ್ಲಿಯೂ ಕೆರೆಗಳ ನೀರು ಕಡಿಮೆಯಾಗಿರಲಿಲ್ಲ. ಹಳೆಯ ನೀರಿಗೆ ಈ ವರ್ಷದ ಹೊಸ ನೀರು ಸೇರಿ ಕೆರೆಗಳು ಮೈದುಂಬುವಂತಾಗಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು

ಎರಡು ವರ್ಷಗಳ ಹಿಂದೆ ಸತತವಾಗಿ 4 ವರ್ಷ ಬರಗಾಲ ಕಾಣಿಸಿಕೊಂಡಿದ್ದಾಗ ಅರಣ್ಯ ಇಲಾಖೆ ಉದ್ಯಾನದ ಕೆರೆಗಳ ಹೂಳು ತೆಗೆಸಿತ್ತು. ಮತ್ತೆ ಕೆಲವು ಕೆರೆಗಳನ್ನು ಹೊಸದಾಗಿ ನಿರ್ಮಿಸಿತ್ತು. ವನ್ಯಜೀವಿಗಳು ದಾಹ ತೀರಿಸಿಕೊಳ್ಳಲು ಎಡತಾಕಿದ ಕಡೆಯಲೆಲ್ಲ ತಿಳಿ ನೀಲಿಯ ನೀರು ಕಾಣಿಸಿಕೊಳ್ಳುತ್ತಿದೆ.

ಆನೆಚೌಕೂರು ಚೆಕ್ ಪೋಸ್ಟ್ ಬಳಿಯಿರುವ ಕೆರೆ ತುಂಬಿ ಸಾಗರ ಸೃಷ್ಟಿಸಿದೆ.ಇದು ಹುಣಸೂರು ತಿತಿಮತಿ ಹೆದ್ದಾರಿವರೆಗೆ ತನ್ನ ಬಾಹು ಬೀಸಿದೆ. ಅಂತೆಯೇ ಪಿರಿಯಾಪಟ್ಟಣ ಬೂದಿತಿಟ್ಟು ರಸ್ತೆಯ ಉದ್ದಕ್ಕೂ ಇರುವ ಅರಣ್ಯದ ಹಳ್ಳಕೊಳ್ಳಗಳು ಮೈದುಂಬಿವೆ. 10 ವರ್ಷಗಳಿಂದ ಈ ಕೆರೆಗಳು ಒಣಗಿ ಬಣಗುಡುತ್ತಿದ್ದವು. ಕೆಲವು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದವು. ಕಳೆದ ಆಗಸ್ಟ್ ನಲ್ಲಿ ಬಿದ್ದ ಧಾರಾಕಾರ ಮಳೆಗೆ ಮತ್ತೆ ಜೀವ ಕಳೆ ಪಡೆದವು.

ಇದೀಗ ಈ ಕೆರೆಗಳಲ್ಲಿ ಆನೆಗಳು ಜಲಕ್ರೀಡೆ ನಡೆಸಿದರೆ, ಜಿಂಕೆ, ಕಾಡುಕೋಣ, ಹಂದಿ, ನವಿಲು ಮೊದಲಾದ ಪ್ರಾಣಿ ಪಕ್ಷಿಗಳು ಸಂಜೆ ಮತ್ತು ಬೆಳಿಗ್ಗೆ ನಲಿದಾಡುವುದು ಕಂಡು ಬರುತ್ತದೆ. ನಾಗರಹೊಳೆ ಹೃದಯ ಭಾಗದಲ್ಲಿ ಹರಿಯುತ್ತಿರುವ ತೊರೆಯಲ್ಲಿಯೂ ಉತ್ತಮ ನೀರಿದೆ.

ನಾಗರಹೊಳೆ ಅರಣ್ಯವನ್ನು 8 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಗೆ ನಾಗರಹೊಳೆ, ಮತ್ತಿಗೋಡು, ಕಲ್ಲಳ್ಳ ವಲಯಗಳು ಸೇರಿದ್ದರೆ, ಮೈಸೂರು ಜಿಲ್ಲಾ ವ್ಯಾಪ್ತಿಗೆ ಹುಣಸೂರು, ಬಿಟಿಕುಪ್ಪೆ, ಡಿಬಿ ಕುಪ್ಪೆ, ಅಂತರ್ ಸಂತೆ, ವೀರನಹೊಸಳ್ಳಿ ವಲಯಗಳು ಸೇರಿವೆ. ಇದೀಗ ಹೊಸದಾಗಿ ಮಾವಕಲ್ಲು ಮೀಸಲು ಅರಣ್ಯವನ್ನೂ ವನ್ಯಜೀವಿ ವಿಭಾಗಕ್ಕೆ ಸೇರ್ಪಡೆಮಾಡಿ ಆನೆಚೌಕೂರು ವಲಯವನ್ನು ಸ್ಥಾಪಿಸಲಾಗಿದೆ. ಇದು ಕೊಡಗು ಮತ್ತು ಮೈಸೂರು ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿದೆ ಎಂದರು ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್.

ಬೇಸಿಗೆಯಲ್ಲಿ ಅರಣ್ಯವನ್ನು ರಕ್ಷಿಸುವ ಉದ್ದೇಶದಿಂದ ಈಗಾಗಲೆ ಅರಣ್ಯ ಇಲಾಖೆ ಬೆಂಕಿ ರೇಖೆ ನಿರ್ಮಾಣ ಮಾಡುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು