ಗುರುವಾರ , ಮೇ 13, 2021
22 °C
ಮಡಿಕೇರಿಯಲ್ಲಿ ‘ಪ್ರಭಾ ಚಂಗಪ್ಪ’ ನುಡಿನಮನ ಕಾರ್ಯಕ್ರಮ

‘ಸಾಹಿತಿಗಳು ಸಾಮಾಜಿಕ ಜವಾಬ್ದಾರಿ ನಿಭಾಯಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಹಿರಿಯ ತಲೆಮಾರು ಮತ್ತು ಕಿರಿಯ ತಲೆಮಾರಿಗೆ ಪ್ರಸಕ್ತ ಸಾಹಿತಿಗಳು ಸೇತುವೆಯಾಗಿದ್ದು, ಸಾಮಾಜಿಕ ಜವಾಬ್ದಾರಿಯನ್ನು ಸಾಹಿತಿಗಳು ನಿಭಾಯಿಸಬೇಕು ಎಂದು ಅಲ್ಲಾರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಕಿವಿಮಾತು ಹೇಳಿದರು.

ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಅಲ್ಲಾರಂಡ ರಂಗಚಾವಡಿ ವತಿಯಿಂದ ನಡೆದ ‘ಪ್ರಭಾ ಚಂಗಪ್ಪ’ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿಗಳಿಗೆ ತಮ್ಮದೇ ಆದ ಜವಾಬ್ದಾರಿಗಳಿದ್ದು, ‘ಪ್ರಭಾ ಚಂಗಪ್ಪ’ ಅವರು ಯುವ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ ಅವರು ಮಾತನಾಡಿ, ಶ್ರದ್ಧಾಂಜಲಿ ಸಭೆಗಳು ಸಾಧಕರ ಸಾಧನೆಗಳನ್ನು ನೆನಪಿಸಿಕೊಳ್ಳಲು ಸಹಕಾರಿಯಾಗುತ್ತದೆ, ಅಲ್ಲದೇ ಮುಂದಿನ ಪೀಳಿಗೆಯ ಬೆಳವಣಿಗೆಗೆ ಅದು ಮಾರ್ಗದರ್ಶನವಾಗುತ್ತದೆ ಎಂದರು.

ಇಂತಹ ಕಾರ್ಯಕ್ರಮಗಳನ್ನು ಅಕಾಡೆಮಿಗಳು ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಮ್ಮಾಟ್ಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಅಗಲಿ ಹೋದ ಪ್ರಭಾ ಚಂಗಪ್ಪ ಅವರ ಸಾಹಿತ್ಯವನ್ನು ಮತ್ತಷ್ಟು ಪ್ರಚಾರಪಡಿಸುವ ಹಾಗೂ ಅವರ ಬದುಕಿನ ಬಗ್ಗೆ ಸಾಕ್ಷ್ಯಾಚಿತ್ರ ತಯಾರಿಸಿ ಬಿಡುಗಡೆ ಮಾಡುವ ಬಗ್ಗೆ ಅಕಾಡೆಮಿ ಚಿಂತನೆ ನಡೆಸಲಿದೆ ಎಂದು ಭರವಸೆ ನೀಡಿದರು.

ಅಕಾಡೆಮಿ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ ಮಾತನಾಡಿ, ತೋನಾಚಂ ಸಾಹಿತ್ಯ ಮತ್ತು ಪ್ರಭಾ ಚಂಗಪ್ಪ ಅವರ ಹಾಡಿನ ಧ್ವನಿ ಮುದ್ರಣಗಳು ಅಕಾಡೆಮಿ ವತಿಯಿಂದ ಮರು ಪ್ರಸರಣವಾಗಬೇಕೆಂದು ಮನವಿ ಮಾಡಿದರು.

ಹಿರಿಯ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಸಾಹಿತ್ಯ ಪರಂಪರೆಗೆ ಅಡಿಗಲ್ಲು ಆದವರನ್ನು ನೆನಪಿಸಿಕೊಳ್ಳುವಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಪ್ರೋತ್ಸಾಹದಾಯಕವಾಗಿರುತ್ತದೆ ಎಂದರು.

ತೋನಾಚಂ ಸಾಹಿತ್ಯವನ್ನು ಉಳ್ಳಿಯಡ ಗಂಗಮ್ಮ ನಂದ ಹಾಡಿದರು. ಚೆಟ್ರಂಡ ವಸಂತಿ ಪೂಣಚ್ಚ ಪ್ರಭಾ ಚಂಗಪ್ಪ ಅವರ ಜನಪ್ರೀಯ ಗೀತೆಗಳನ್ನು ಹಾಡಿ ಅವರನ್ನು ನೆನಸಿಕೊಂಡರು.

ಸಾಹಿತಿ ಕೂಪದಿರ ಸುಂದರಿ ಮಾಚಯ್ಯ, ರಂಗಕರ್ಮಿ ಮಾದೇಟಿರ ಬೆಳ್ಯಪ್ಪ, ಸಾಹಿತಿ ತೆನ್ನಿರಾ ರಾಧಾಪೊನ್ನಪ್ಪ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಕರ್ತ ಶಶಿ ಸೋಮಯ್ಯ, ಕೊಡವ ಸಮಾಜದ ಸದಸ್ಯ ಪುಟ್ಟಿಚಂಡ ಡಾನ್ ದೇವಯ್ಯ, ವಕೀಲ ಎಂ.ಡಿ.ಕಾವೇರಪ್ಪ ಮತ್ತಿತರರು ಹಾಜರಿದ್ದು ನುಡಿ ನಮನ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು