ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನೀಟ್’ ಪರೀಕ್ಷೆ ಅಕ್ರಮಗಳನ್ನು ಯದುವೀರ್ ಸಂಸತ್ತಿನಲ್ಲಿ ಚರ್ಚಿಸುವರೇ?:ಎಂ.ಲಕ್ಷ್ಮಣ

ಸವಾಲೆಸೆದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ
Published 25 ಜೂನ್ 2024, 15:24 IST
Last Updated 25 ಜೂನ್ 2024, 15:24 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಡಿಕೇರಿ: ದೇಶದಾದ್ಯಂತ ‘ನೀಟ್’ ಪರೀಕ್ಷೆಯಲ್ಲಿ ಅಕ್ರಮ ನಡೆದು 24 ಲಕ್ಷ ವಿದ್ಯಾರ್ಥಿಗಳ ಕನಸು ನುಚ್ಚುನೂರಾಯಿತು. ಇವರ ಪರವಾಗಿ ಮೈಸೂರು– ಕೊಡಗು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸತ್ತಿನಲ್ಲಿ ಧ್ವನಿ ಎತ್ತುವರೇ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಪ್ರಶ್ನಿಸಿದರು.

‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ‘ನೀಟ್‌ ಪೇ ಚರ್ಚಾ’ ಕಾರ್ಯಕ್ರಮ ನಡೆಸಿ, ವಿದ್ಯಾರ್ಥಿಗಳ ಅಳಲು ಕೇಳಬೇಕು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಯದುವೀರ್ ಅವರಿಗೆ ಕೊಡಗು ಜಿಲ್ಲೆಯವರೇ ಹೆಚ್ಚು ಮತ ಹಾಕಿದ್ದಾರೆ. ಆದರೆ, ಗೆದ್ದ ಬಳಿಕ ಅವರು ಒಮ್ಮೆಯೂ ಇಲ್ಲಿ ಬಂದು ಸುದ್ದಿಗೋಷ್ಠಿ ನಡೆಸಿ ಮತದಾರರಿಗೆ ಧನ್ಯವಾದ ಅರ್ಪಿಸಲಿಲ್ಲ. ಕನಿಷ್ಠ ಪಕ್ಷ ಕೊಡಗಿಗೆ ಅವರು ಏನು ಕೊಡುಗೆ ತರುತ್ತಾರೆ ಎನ್ನುವುದನ್ನಾದರೂ ಬಹಿರಂಗಪಡಿಸಲಿ’ ಎಂದು ಸವಾಲೆಸೆದರು.

‘ನಾನು ಸೋತಿದ್ದರೂ ಪ್ರತಿ ಶನಿವಾರ ಇಲ್ಲವೇ ಮಂಗಳವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಲಭ್ಯ ಇರುತ್ತೇನೆ. ನನಗೆ ಮತ ಹಾಕಿದವರು, ಮತ ಹಾಕದೇ ಇರುವವರು ಬಂದು ತಮ್ಮ ಅಹವಾಲು ಸಲ್ಲಿಸಬಹುದು’ ಎಂದರು.

ಇಂಧನ ದರವನ್ನು ಲೀಟರ್‌ಗೆ ₹ 100ರ ಗಡಿ ದಾಟಿಸಿದವರು, ಇಂಧನದ ಮೇಲೆ 22 ಬಾರಿ ಸುಂಕ ಏರಿಕೆ ಮಾಡಿದವರು ಬಿಜೆಪಿಯವರು. ಈಗ ರಾಜ್ಯ ಸರ್ಕಾರ ಇಂಧನ ದರವನ್ನು ಒಮ್ಮೆ ಹೆಚ್ಚಿಸಿದ್ದಕ್ಕೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

‘ಹಾಲಿನ ದರ ಏರಿಕೆ ಮಾಡಲಾಗಿದೆ. ಇದಕ್ಕೂ ಹಿಂದೆ ಹಾಲಿನ ದರ ಏರಿಕೆ ಮಾಡಿ ಎಷ್ಟು ದಿನಗಳಾಗಿತ್ತು ಎನ್ನುವುದನ್ನು ಪರಿಗಣಿಸಬೇಕು. ಹಾಲಿನ ದರ ಏರಿಕೆ ಮಾಡಿ ರೈತರಿಗೆ ನೀಡಲಾಗುವುದು. ನಾವು ನಮ್ಮ ರೈತರ ಹಿತ ಕಾಯುವುದು ಬೇಡವೇ’ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಆರಂಭವಾದ ಕಾರ್ಖಾನೆಗಳನ್ನು ಬಿಜೆಪಿ ಸರ್ಕಾರ ಒಂದೊಂದಾಗಿ ಮಾರಾಟ ಮಾಡುತ್ತಿದೆ. ಈಗ ಕೈಗಾರಿಕಾ ಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಈ ಕಾರ್ಖಾನೆಗಳನ್ನು ಸರ್ಕಾರದ ಸುಪರ್ದಿಯಲ್ಲೇ ಉಳಿಸಿಕೊಳ್ಳುತ್ತಾರಾ ಎಂದೂ ಪ್ರಶ್ನಿಸಿದರು.

ರಾಜ್ಯದಲ್ಲಿರುವ ಶಾಸಕರ ಪೈಕಿ ಅತಿ ಹೆಚ್ಚು ಕೆಲಸ ಮಾಡುತ್ತಿರುವ ಶಾಸಕ ಎ.ಎಸ್. ಪೊನ್ನಣ್ಣ. ಚುರುಕಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರ ಪ್ರತಿಕೃತಿ ಸುಡಲು ಬಿಜೆಪಿಯವರಿಗೆ ಮನಸ್ಸಾದರೂ ಹೇಗೆ ಬಂದಿತೋ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳನ್ನು ಉಳ್ಳವರಿಗೆ ನೀಡಬಾರದು ಎಂದು ಮನವಿ ಮಾಡಿದ್ದೆ. ಆದರೆ, ಮುಖ್ಯಮಂತ್ರಿ ಒಪ್ಪದೇ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ತಿಳಿಸಿದ್ದಾರೆ. ಯಾರು ಗ್ಯಾರಂಟಿ ಯೋಜನೆಗಳನ್ನು ಬೇಡ ಎನ್ನುತ್ತಿದ್ದಾರೋ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನರು ಮತ ಹಾಕಿ ಗೆಲ್ಲಿಸಿದ್ದಾರೆ. ಇದು ಮತದಾರರ ಒಲವು ಎಂದು ಅವರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಮುಖಂಡರಾದ ಬಿ.ಎಂ. ರಾಮು, ತೆನ್ನೀರಾ ಮೈನಾ, ಪುಷ್ಪಪೂಣಚ್ಚ, ಮಹೇಶ್, ಹಂಜ್ಹ ಭಾಗವಹಿಸಿದ್ದರು.

ಪ್ರತಿ ಮಂಗಳವಾರ ಇಲ್ಲವೇ ಶನಿವಾರ ಮಡಿಕೇರಿಯಲ್ಲಿರುವೆ ಮತ ಹಾಕಿದವರು, ಹಾಕದವರ ಅಹವಾಲು ಸಲ್ಲಿಸಲು ಕರೆ ಸೋತರು ಜನರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದ ಎಂ.ಲಕ್ಷ್ಮಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT