ಭಾನುವಾರ, ಜೂನ್ 7, 2020
22 °C
ಇಂದು ಜಿಲ್ಲೆಯಲ್ಲಿ ಈದ್‌ ಉಲ್‌ ಫಿತ್ರ್‌ ಆಚರಣೆ, ಮನೆಯಲ್ಲೇ ಆಚರಣೆ ಮಾಡಲು ನಿರ್ಧಾರ

ಮಡಿಕೇರಿ | ಹಬ್ಬದ‌ ಸಂಭ್ರಮ ಕಸಿದ ಲಾಕ್‌ಡೌನ್

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊರೊನಾ ಹಾವಳಿ, ಲಾಕ್‌ಡೌನ್‌ ನಡುವೆ ರಂಜಾನ್‌ ಮಾಸ ಮುಕ್ತಾಯವಾಗುತ್ತಿದ್ದು ಜಿಲ್ಲೆಯಲ್ಲಿ ಭಾನುವಾರ ಮುಸ್ಲಿಮರು, ಈದ್‌–ಉಲ್‌–ಫಿತ್ರ್‌ ಆಚರಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ನಿಯಮವನ್ನೇ ಜಿಲ್ಲೆಯ ಮುಸ್ಲಿಮರೂ ಪಾಲಿಸುತ್ತಿದ್ದು ಭಾನುವಾರವೇ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ‌

ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ರಂಜಾನ್‌ಗೆ ಅಗ್ರಸ್ಥಾನ. ಇಡೀ ತಿಂಗಳು ಉಪವಾಸ ಮಾಡಿ, ಕೊನೆಯ ದಿನ ಉಪವಾಸ ಬಿಟ್ಟು ಹೊಸಬಟ್ಟೆ ಧರಿಸಿ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದರು. ಆದರೆ, ಲಾಕ್‌ಡೌನ್‌ನಿಂದ ಹಬ್ಬದ ಸಂಭ್ರಮ ಮಾಯವಾಗಿದೆ. ಯಾವುದೇ ವಿಶೇಷ ಪ್ರಾರ್ಥನೆ ನಡೆಯುತ್ತಿಲ್ಲ. ಮನೆಯಲ್ಲೇ ಕುಟುಂಬಸ್ಥರು ಹಬ್ಬವನ್ನು ಆಚರಣೆ ಮಾಡುವ ಸ್ಥಿತಿಬಂದಿದೆ.

ಮಹದೇವಪೇಟೆಯಲ್ಲೂ ಖರೀದಿ ಇಲ್ಲ: ಇನ್ನು ಮಡಿಕೇರಿಯ ಮಹದೇವಪೇಟೆ ಹಾಗೂ ಕಾಲೇಜು ರಸ್ತೆಯಲ್ಲಿ ಪ್ರತಿವರ್ಷ ಈದ್‌ ಉಲ್‌ ಫಿತ್ರ್‌ ಹಿಂದಿನ ದಿವಸ ಖರೀದಿ ಜೋರಾಗಿ ನಡೆಯುತ್ತಿತ್ತು. ಆದರೆ, ಶನಿವಾರ ಬಹುತೇಕ ಬಟ್ಟೆ ಅಂಗಡಿಗಳಲ್ಲೂ ನಿರೀಕ್ಷಿತ ವ್ಯಾಪಾರ ಇರಲಿಲ್ಲ. ಕೆಲವರು ಮಾತ್ರ ಹೊಸಬಟ್ಟೆ ಖರೀದಿಸಿದರು. ಇನ್ನು ಕೆಲವರು ಖರೀದಿಗೆ ಆಸಕ್ತಿ ತೋರಲಿಲ್ಲ. ಇರುವುದರಲ್ಲಿಯೇ ಹಬ್ಬ ಆಚರಣೆ ಮಾಡಲು ನಿರ್ಧರಿಸಿದ್ದಾರೆ.

ಲಾಕ್‌ಡೌನ್‌ನಿಂದ ಹಣವೂ ಇಲ್ಲ: ಲಾಕ್‌ಡೌನ್‌ನಿಂದ ಕಳೆದೆರಡು ತಿಂಗಳಿಂದ ಅಂಗಡಿಗಳಲ್ಲಿ ವ್ಯಾಪಾರ ಇರಲಿಲ್ಲ. ಕಾರ್ಮಿಕರಿಗೆ ಕೆಲಸವೂ ಇರಲಿಲ್ಲ. ಇನ್ನು ಹಬ್ಬ ಹೇಗೆ ಮಾಡುವುದು ಎಂದು ಹಲವರು ಪ್ರಶ್ನಿಸಿದರು.

‘ಕುಟುಂಬವೇ ಸೇರಿ ಮನೆಯಲ್ಲೇ ಹಬ್ಬ ಆಚರಣೆ ಮಾಡುತ್ತಿದ್ದೆವು. ಭಾನುವಾರಕ್ಕೆ ಬೇಕಾದ ಎಲ್ಲ ವಸ್ತುಗಳನ್ನೂ ಇಂದೇ ಖರೀದಿ ಮಾಡಿದ್ದೇವೆ. ಈ ವರ್ಷದ ಹಬ್ಬದ ಸಂಭ್ರಮವೇ ಇಲ್ಲವಾಗಿದೆ. ರಂಜಾನ್‌ ಮಾಸದಲ್ಲಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ಇರುತ್ತಿದ್ದವು. ಅದ್ಯಾವೂದು ಈ ಬಾರಿ ಇಲ್ಲ’ ಎಂದು ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್‌ ಬೇಸರ ವ್ಯಕ್ತಪಡಿಸಿದರು.

ಈದ್-ಉಲ್-ಫಿತ್ರ್‌ (ರಂಜಾನ್) ಅನ್ನು ಕನಿಷ್ಠ ಅಂತರ ಕಾಯ್ದುಕೊಂಡು ಮನೆಯಲ್ಲೇ ಸರಳ ರೀತಿಯಲ್ಲಿ ಆಚರಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಕೋರಿದೆ.

ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಭಾನುವಾರ ಸಂಪೂರ್ಣ ಬಂದ್ ಇರಲಿದೆ. ಮುಸಲ್ಮಾನ ಬಾಂಧವರು ಮಸೀದಿ, ದರ್ಗಾ ಮತ್ತು ಈದ್ಗಾದಲ್ಲಿ ಪ್ರಾರ್ಥನೆಗೆ ಒತ್ತು ನೀಡದೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದೇ ತಾವಿರುವ ಪ್ರದೇಶದಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಮನವಿ ಮಾಡಿದೆ. 

*
ಈದ್‌ ಉಲ್‌ ಫಿತ್ರ್‌ನಲ್ಲಿ ದಾನ ಮಾಡುತ್ತಿದ್ದೆವು. ಅದಕ್ಕೆ ಈ ಬಾರಿ ಅವಕಾಶ ಇಲ್ಲವಾಗಿದೆ.
-ಅಬ್ದುಲ್‌, ಮಡಿಕೇರಿ

*
ರಂಜಾನ್ ಮುಸ್ಲಿಮರ ಪವಿತ್ರ ಹಬ್ಬ. ಭಾನುವಾರ ಕರ್ಫ್ಯೂ ಇರುವುದರಿಂದ ಕುಟುಂಬಸ್ಥರು ಸೇರಿ ಹಬ್ಬ ಆಚರಿಸಲು ಕಷ್ಟವಾಗಿದೆ. ಆದ್ದರಿಂದ, ನಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು.
-ಕೆ.ಎ.ಯಾಕುಬ್, ಅಧ್ಯಕ್ಷ, ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು