ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ | ಅಕಾಲಿಕ ಮಳೆಯಿಂದ ಕಾಫಿ ಬೆಳೆ ನಷ್ಟ

Published 6 ನವೆಂಬರ್ 2023, 7:52 IST
Last Updated 6 ನವೆಂಬರ್ 2023, 7:52 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಳೆಗಾಲ ಮುಗಿದರೂ, ಈಗ ಅಕಾಲಿಕ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಯುವ ರೈತರು ಗಿಡಗಳಲ್ಲಿ ಉಳಿದಿರುವ ಬೆಳೆಯನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗದ ಪರಿಣಾಮ, ಇರುವ ಕಾಫಿ ಮತ್ತು ಮೆಣಸಿನ ಫಸಲು ನಷ್ಟವಾಯಿತು. ಕೆಲವು ಗಿಡಗಳಲ್ಲಿ ಈಗಾಗಲೇ ಕಾಫಿ ಹಣ್ಣಾಗಿದ್ದು, ಕೆಲವರು ಹಣ್ಣು ಕಾಫಿಯನ್ನು ಕೊಯ್ಲು ಮಾಡಿಸುತ್ತಿದ್ದಾರೆ. ಆದರೆ, ನಾಲ್ಕಾರು ದಿನಗಳಿಂದ ಕೆಲವೆಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾಫಿ ಗಿಡದಲ್ಲಿಯೇ ಕೊಳೆಯುತ್ತಿದೆ. ತಕ್ಷಣ ಕೊಯ್ಲು ಮಾಡಬೇಕು. ತಪ್ಪಿದಲ್ಲಿ ಇದು, ಒಡೆದು ಮಣ್ಣು ಸೇರುವುದು ಮತ್ತು ಪಕ್ಷಿಗಳ ಪಾಲಾಗುವುದು.

ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಸಬ ಹೋಬಳಿ ಸೇರಿದಂತೆ ಕೆಲವು ಕಾಫಿ ಬೆಳೆಗಾರರು ಕೊಯ್ಲು ಮಾಡುತ್ತಿದ್ದು, ಫಸಲನ್ನು ಒಣಗಿಸಲು ಸಾಧ್ಯವಿಲ್ಲದಂತಾಗಿದೆ. ಬಿಸಿಲಿನಲ್ಲಿ ಕಾಫಿ ಬೀಜ ಒಣಗಿದರೆ ಮಾತ್ರ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. ಇಲ್ಲದಿದ್ದರೆ ಕಾಫಿಯನ್ನು ಕೊಳ್ಳುವವರೆ ಇಲ್ಲದಂತಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 28,590 ಹೆಕ್ಟೇರ್ ನಲ್ಲಿ ಕಾಫಿ ಬೆಳೆ ಇದೆ. 22,900 ಹೆ.ನಲ್ಲಿ ಅರೇಬಿಕಾ ಕಾಫಿ ಹಾಗೂ 5690 ಹೆಕ್ಟೇರ್‌ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗಿದೆ. ತಾಲ್ಲೂಕನ್ನು ಕಾಫಿ ಮಂಡಳಿ ಕಾಫಿ ಬೆಳೆಯುವ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದೆ. ಸೋಮವಾರಪೇಟೆಯಲ್ಲಿ 6,900 ಹೆಕ್ಟೇರ್‌ನಲ್ಲಿ ಅರೇಬಿಕಾ, 400 ಹೆಕ್ಟೇನಲ್ಲಿ ರೋಬಸ್ಟಾ ಸೇರಿದಂತೆ 7,300 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗಿದೆ. ಶನಿವಾರಸಂತೆಯಲ್ಲಿ 6,740ಹೆಕ್ಟೇರ್‌ ಅರೇಬಿಕಾ, 270ಹೆಕ್ಟೇರ್‌ ರೋಬಸ್ಟಾ ಸೇರಿದಂತೆ 7,010 ಹೆಕ್ಟೇರ್‌ ಕಾಫಿ ಬೆಳೆಯಲಾಗಿದೆ. ಸುಂಟಿಕೊಪ್ಪದಲ್ಲಿ 6,660ಹೆಕ್ಟೇರ್‌ ಅರೇಬಿಕಾ ಮತ್ತು 3,820ಹೆಕ್ಟೇರ್‌ ರೋಬಸ್ಟಾ, ಒಟ್ಟು 10,480ಹೆಕ್ಟೇರ್‌ ಮಾದಾಪುರದಲ್ಲಿ 2,600ಹೆಕ್ಟೇರ್‌ ಅರೇಬಿಕಾ ಮತ್ತು 1200ಹೆಕ್ಟೇರ್‌ ರೋಬಸ್ಟಾ, ಸೇರಿದಂತೆ 3,800 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗಿದೆ. ಇನ್ನೊಂದು ವಾರ ಮಳೆ ಮುಂದುವರಿದರೆ ಕಾಫಿ ಬೆಳೆಗಾರರು ದೊಡ್ಡಮಟ್ಟದ ನಷ್ಟ ಎದುರಿಸಬೇಕಾಗುತ್ತದೆ.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಗ್ರಾಮದ ರಮೇಶ್ ಮಾತನಾಡಿ ಈ ಭಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಕಾಫಿ ಬೆಳೆಯಾಗಲಿಲ್ಲ. ಕಾಳು ಮೆಣಸಿನ ತೆನೆ ಸರಿಯಾಗಿ ಬರಲಿಲ್ಲ. ಬಿಸಿಲಿಗೆ  ಕಾಳು ಕಟ್ಟದೆ ಉದುರಿಹೋಗಿದೆ. ಕಾಫಿ ಬೆಳೆಗಾರರಿಗೆ ನಿರಂತರ ನಷ್ಟದಿಂದಾಗಿ ಕಾಫಿ ತೋಟ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ ಕಳೆದ ಕೆಲವು ವರ್ಷಗಳಿಂದ ಹವಾಮಾನ ಸಮಸ್ಯೆಯಿಂದಾಗಿ ಕಾಫಿ ಮತ್ತು ಕಾಳು ಮೆಣಸಿನ ಫಸಲು ಸಿಗುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಭಾರಿ ಬರಗಾಲವಾಗಿರುವುದು ಅರೇಬಿಕಾ ಕಾಫಿ ತೋಟಗಳಿಗೆ ಹೆಚ್ಚಿನ ನಷ್ಟವಾಗಿದೆ. ಮುಂದೆ ಬೇಸಿಗೆಯಲ್ಲಿ ಬಿಳಿಕಾಂಡ ಕೊರಕದ ಹಾವಳಿ ಹೆಚ್ಚಾಗಲಿದ್ದು ಗಿಡಗಳನ್ನು ಕಾಪಾಡಿಕೊಳ್ಳುವುದು ಕಾಫಿ ಬೆಳೆಗಾರರಿಗೆ ಕಷ್ಟವಾಗಲಿದೆ ಎಂದರು.

ಸೋಮವಾರಪೇಟೆ ಸಮೀಪದ ಮಸಗೋಡು ಗ್ರಾಮದಲ್ಲಿ ಮಳೆಯ ನಡುವೆಯೂ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡುತ್ತಿರುವ ಕಾರ್ಮಿಕರು.
ಸೋಮವಾರಪೇಟೆ ಸಮೀಪದ ಮಸಗೋಡು ಗ್ರಾಮದಲ್ಲಿ ಮಳೆಯ ನಡುವೆಯೂ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡುತ್ತಿರುವ ಕಾರ್ಮಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT