ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಅಗತ್ಯಕ್ಕೆ ಕಾಂಗ್ರೆಸ್‌ಗೆ ಬೆಂಬಲ: ಕಮ್ಯುನಿಸ್‌ ಪಕ್ಷ ಪ್ರತಿಪಾದನೆ

ಜನಾಂದೋಲನ ಮಹಾ ಮೈತ್ರಿ ಮತ್ತು ಭಾರತೀಯ ಕಮ್ಯುನಿಸ್‌ ಪಕ್ಷ (ಮಾರ್ಕ್ಸ್‌ವಾದಿ) ಪ್ರತಿಪಾದನೆ
Published 22 ಏಪ್ರಿಲ್ 2024, 7:46 IST
Last Updated 22 ಏಪ್ರಿಲ್ 2024, 7:46 IST
ಅಕ್ಷರ ಗಾತ್ರ

ಮಡಿಕೇರಿ: ಬಿಜೆಪಿ ಸೋಲಿಸಲು ಅನಿವಾರ್ಯದ ಅಗತ್ಯವಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಜನಾಂದೋಲನ ಮಹಾ ಮೈತ್ರಿ ಹಾಗೂ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಮುಖಂಡರು ಭಾನುವಾರ ಪ್ರತ್ಯೇಕ ಸುದ್ದಿಗೋಷ್ಠಿಗಳಲ್ಲಿ ಮನವಿ ಮಾಡಿದರು.

ಜನಾಂದೋಲನ ಮಹಾಮೈತ್ರಿಯ ಮುಖಂಡರು ಇಲ್ಲಿನ ಪತ್ರಿಕಾಭವನದಲ್ಲಿ ‘ಮೋದಿ ಆಳ್ವಿಕೆಯ ವಿರುದ್ಧ ಜನತಾ ಆರೋಪ ಪಟ್ಟಿ’ಯನ್ನು ಬಿಡುಗಡೆ ಮಾಡಿ, ಬಿಜೆಪಿ ಸೋಲಿಸಬೇಕು ಎಂದು ಕರೆ ಕೊಟ್ಟರು.

ಸಂಘಟನೆಯ ಸಂಚಾಲಕ ಜಿ.ಪಿ.ಬಸವರಾಜು ಮಾತನಾಡಿ, ‘ಜನಾಂದೋಲನ ಮಹಾಮೈತ್ರಿ ಮಾತ್ರವಲ್ಲ, ಧಾರವಾಡದ ಜನತಂತ್ರ ಪ್ರಯೋಗ ಶಾಲೆ, ಸಿಟಿಜನ್‌ ಫಾರ್ ಡೆಮೊಕ್ರಸಿ, ಕರ್ನಾಟಕ ರಾಜ್ಯ ರೈತ ಸಂಘ, ಎದ್ದೇಳು ಕರ್ನಾಟಕ, ಗ್ರಾಮೀಣ ಕೂಲಿಕಾರರ ಸಂಘ, ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಗಳು ಒಟ್ಟಾಗಿ ಸೇರಿ, ಬಿಜೆಪಿ ಆಳ್ವಿಕೆಯ ಲೋಪಗಳ ಪ‍ಟ್ಟಿಯನ್ನು ಆರ್ಥಿಕ ತಜ್ಞರ ಅಭಿಪ್ರಾಯ ಆಧರಿಸಿಯೇ ತಯಾರಿಸಿವೆ. ಇದನ್ನು ಜನತೆಯ ಮುಂದಿಡಲಾಗುತ್ತಿದೆ’ ಎಂದರು.

ಒಂದು ಭಾಷೆ, ಒಂದು ಆಡಳಿತ, ಒಂದು ಪಕ್ಷ, ಒಂದು ದೇಶ, ಒಂದು ಚಿಂತನೆ, ಒಂದು ಧರ್ಮ ಇದೆಲ್ಲವನ್ನೂ ಹಿಟ್ಲರ್‌ ಅನುಸರಿಸಿದ್ದ. ದುರಂತ ಎಂದರೆ, ಇಂದಿನ ಬಿಜೆಪಿ ಸರ್ಕಾರವೂ ಇದನ್ನೇ ಪ್ರತಿಪಾದಿಸುತ್ತಿದೆ. ಇದು ಆತಂಕಕಾರಿ ವಿಷಯ ಎಂದು ಹೇಳಿದರು.

ಬಹುಭಾಷೆ, ಸಂಸ್ಕೃತಿಗಳ ಭಾರತದಲ್ಲಿ ಏಕ ಭಾಷೆ, ಏಕ ಸಂಸ್ಕೃತಿ ಎಂದರೆ ಹೇಗೆ? ಎಂದು ಪ್ರಶ್ನಿಸಿದ ಅವರು ‘ಇಲ್ಲಿನ ಕೊಡವ ಭಾಷೆ, ಕೊಡವ ಸಂಸ್ಕೃತಿಯೂ ಅತಿ ಮುಖ್ಯ’ ಎಂದು ಪ್ರತಿಪಾದಿಸಿದರು.

ಬಹುಭಾಷೆಗಳ ಸಹಬಾಳ್ವೆ ಉಳಿಸಿಕೊಳ್ಳಲು ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಜನರು ಬೆಂಬಲ ಕೊಡಬೇಕು ಎಂದರು.

ಜನಾಂದೋಲನ ಮಹಾಮೈತ್ರಿಯ ಸಂಘಟನಾ ಕಾರ್ಯದರ್ಶಿ ಉಗ್ರನರಸಿಂಹೇಗೌಡ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕರಾಳ ಕೃಷಿ ಕಾನೂನುಗಳಿಂದ ಕಾರ್ಪೊರೇಟ್ ಕಂಪನಿಗಳು ಕೊಡಗು ಸೇರಿದಂತೆ ಹಳ್ಳಿಯ ಭೂಮಿಯನ್ನು ಸುಲಭವಾಗಿ ಖರೀದಿಸಬಹುದು. ರೈತರು ನಗರಗಳಿಗೆ ಗುಳೇ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊಡಗೂ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ವಿಷಯಗಳನ್ನು ಉಳಿಸಬೇಕಿದೆ‌. ಕೊಡಗಿನ ಭೂಮಿಯನ್ನೂ ಉಳಿಸಲೇಬೇಕಿದೆ. ಹಾಗಾಗಿ, ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಬೆಂಬಲ ಕೊಡಬೇಕಿದೆ ಎಂದು ಪ್ರತಿಪಾದಿಸಿದರು.

ದಲಿತ ಸಂಘರ್ಷ ಸಮಿತಿಯ ದಿವಾಕರ್ ಮಾತನಾಡಿ, ‘ಗ್ಯಾರಂಟಿಗಳಿಂದ ಕೊಡಗಿನ ಕೃಷಿ ಕಾರ್ಮಿಕರಿಗೆ ಅನುಕೂಲವಾಗಿದೆ’ ಎಂದರು.

ಜನಾಂದೋಲನ ಮಹಾಮೈತ್ರಿಯ ಸಹ ಸಂಚಾಲಕ ಅಭಿರುಚಿ ಗಣೇಶ್ ಭಾಗವಹಿಸಿದ್ದರು.

‘ಜಾತ್ಯಾತೀತ ಸರ್ಕಾರ ರಚನೆಗಾಗಿ ಕಾಂಗ್ರೆಸ್‌ ಬೆಂಬಲಿಸಿ’

‘ದೇಶದಲ್ಲಿ ಜಾತ್ಯಾತೀತ ಸರ್ಕಾರ ರಚನೆಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲಾಗುತ್ತಿದೆ’ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಕೊಡಗು ಜಿಲ್ಲಾ ಸಂಘಟನಾ ಸಮಿತಿಯ ಕಾರ್ಯದರ್ಶಿ ರಮೇಶ್ ಹೇಳಿದರು.

‘ನಾವು ಕಾಂಗ್ರೆಸ್‌ನೊಂದಿಗೆ ಜಂಟಿ ಪ್ರಚಾರ ಮಾಡುತ್ತಿಲ್ಲ. ಆದರೆ ಸಂವಿಧಾನ ಪ್ರಜಾತಂತ್ರ ವ್ಯವಸ್ಥೆ ರಕ್ಷಿಸಲು ಬಿಜೆಪಿಯನ್ನು ಸೋಲಿಸಬೇಕಿದೆ. ಹಾಗಾಗಿ ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಲಾಗುತ್ತಿದೆ. ಈ ಮಧ್ಯೆ ಪಕ್ಷದ ವತಿಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಲಾಗುತ್ತಿದೆ’ ಎಂದು ತಿಳಿಸಿದರು.

ಹೋರಾಟಗಾರ ಎಸ್.ವೈ.ಗುರುಶಾಂತಪ್ಪ ಮಾತನಾಡಿ ‘ಬಿಜೆ‍ಪಿ ಈ ಹಿಂದೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿತು. ಆದರೆ ಈಗ ನಿರುದ್ಯೋಗ ಹೆಚ್ಚಾಗಿದೆ ಭ್ರಷ್ಟಾಚಾರ ಮಿತಿಮೀರಿದೆ. ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿತೋ ಅದರಕ್ಕೆ ವಿರುದ್ಧವಾದ ಸಂಗತಿಗಳೇ ಆಗುತ್ತಿವೆ. ಮೋದಿ ಆಡಳಿತದಲ್ಲಿ ಬಂಡವಾಳಷಾಹಿಗಳು ಬಲವಾಗಿ ಬೆಳೆದರು. ಬೆಲೆ ಏರಿಕೆಯಿಂದ ಸಾಮಾನ್ಯ ಜನ ತತ್ತರಿಸಿದರು’ ಎಂದು ಹೇಳಿದರು.

ಸಂಘಟನೆಯ ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ ‘ಮೈಸೂರಿನಲ್ಲಿ ಕಳೆದ 10 ವರ್ಷದಲ್ಲಿ 3 ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಂಡರು. ನೂರಾರು ಕೈಗಾರಿಕೆಗಳು ಮುಚ್ಚಿದವು. ಅವುಗಳ ಪುನಶ್ಚೇತನಕ್ಕೆ ಸಂಸದರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬೆಂಗಳೂರಿನಲ್ಲಿ ನಿಲ್ಲಿಸಲು ಜಾಗ ಇಲ್ಲದೇ ಮೈಸೂರಿಗೆ ಬಂದ ರೈಲುಗಳನ್ನೇ ನಾವು ತಂದದ್ದು ಎಂದು ಹೇಳಿಕೊಂಡರು’ ಎಂದು ಕಿಡಿಕಾರಿದರು.

ಪಕ್ಷದ ಹಿರಿಯ ನಾಯಕ ದುರ್ಗಾಪ್ರಸಾದ್ ಮಾತನಾಡಿ ‘ಬಿಜೆಪಿಯಲ್ಲಿ ಅಪ್ಪಚ್ಚುರಂಜನ್‌ಗೆ ಇಲ್ಲವೇ ಕನಿಷ್ಠ ಒಬ್ಬ ಕಾರ್ಯಕರ್ತನಿಗಾದರೂ ಟಿಕೆಟ್ ಕೊಡಬಹುದಿತ್ತು. ಆದರೆ ರಾಜಕೀಯದಲ್ಲೇ ಇಲ್ಲದ ರಾಜವಂಶಸ್ಥರೊಬ್ಬರನ್ನು ಕರೆದುಕೊಂಡು ಬಂದು ಟಿಕೆಟ್ ನೀಡಲಾಯಿತು. ಇದು ಎಷ್ಟು ಸರಿ ಎಂಬುದನ್ನು ಎಲ್ಲರೂ ಚಿಂತನೆ ಮಾಡಬೇಕು’ ಎಂದರು.

ಇಲ್ಲಿನ ಬಿಜೆಪಿ ಮುಖಂಡರು ಕಟುವಾಗಿ ವಿರೋಧಿಸಿದ್ದ ಕಸ್ತೂರಿರಂಗನ್ ವರದಿಯನ್ನೇ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ವರದಿ ಅನುಷ್ಠಾನವಾಗುವುದು ಖಚಿತ. ಆಗ ಇಲ್ಲಿನ ಜನರ ಸ್ಥಿತಿ ಚಿಂತಾಜನಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪಕ್ಷದ ಮುಖಂಡರಾದ ವಿಜಯಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT