ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ| ಧ್ವನಿವರ್ಧಕ ಬಳಕೆ: ನಿಯಮ ಕಡ್ಡಾಯ ಪಾಲಿಸಲು ಸೂಚನೆ

ದಶ ಮಂಟಪ ಹಾಗೂ ಕರಗ ಉತ್ಸವ ಸಮಿತಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ
Published : 26 ಸೆಪ್ಟೆಂಬರ್ 2024, 4:42 IST
Last Updated : 26 ಸೆಪ್ಟೆಂಬರ್ 2024, 4:42 IST
ಫಾಲೋ ಮಾಡಿ
Comments

ಮಡಿಕೇರಿ: ದಸರೆ ಮತ್ತು ದಶಮಂಟಪಗಳ ಶೋಭಾಯಾತ್ರೆ ವೇಳೆ ಧ್ವನಿವರ್ಧಕಗಳ ಬಳಕೆ ಕುರಿತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ದಶಮಂಟಪ ಹಾಗೂ ಕರಗ ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸೂಚಿಸಿದರು.

ಮಡಿಕೇರಿ ದಸರಾ ಆಚರಣೆ ಸಂಬಂಧ ದಶಮಂಟಪ ಹಾಗೂ ಕರಗ ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಅವರು ಬುಧವಾರ ಸಭೆ ನಡೆಸಿ ಮಾತನಾಡಿದರು.

ಧ್ವನಿವರ್ಧಕಗಳನ್ನು ಬಳಕೆ ಮಾಡುವಾಗ ಸಾರ್ವಜನಿಕ ಹಿತಾಸಕ್ತಿ ಅತೀ ಮುಖ್ಯ ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ಹೇಳಿದ ಅವರು ಈ ಸಂಬಂಧ ಇರುವ ನಿಯಮಗಳನ್ನು ಪಾಲಿಸಬೇಕು ಎಂದರು.

ಈಗಾಗಲೇ ಮಡಿಕೇರಿ ದಸರಾ ಧ್ವನಿವರ್ಧಕ (ಡಿಜೆ) ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರಲ್ಲೂ ಮಾಹಿತಿ ಇರಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಶ ಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ಧ್ವನಿವರ್ಧಕ ಬಳಕೆ ಸಂಬಂಧ ಈಗಾಗಲೇ ಎಲ್ಲಾ ಮಂಟಪಗಳ ಅಧ್ಯಕ್ಷರ ಜೊತೆ ಚರ್ಚಿಸಲಾಗಿದ್ದು, ಎಲ್ಲಾ ಮಂಟಪಗಳು ಸ್ವಯಂ ಪ್ರೇರಣೆಯಿಂದ ಯಾವ ರೀತಿ ಧ್ವನಿವರ್ಧಕ (ಡಿಜೆ) ಬಳಕೆ ಮಾಡಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಿಕೊಳ್ಳಲಾಗಿದೆ ಎಂದರು.

ಜೊತೆಗೆ ದಶಮಂಟಪಗಳ ಪುರಾಣ ಸಂಬಂಧ ಲಿಖಿತವಾಗಿ ಮಾಹಿತಿ ಒದಗಿಸಿದಲ್ಲಿ ಮುಂದಿನ ದಿನಗಳಲ್ಲಿ ಪಠ್ಯ ಪುಸ್ತಕಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಮಡಿಕೇರಿ ದಸರಾ ಸಂಸ್ಕೃತಿ, ಸಂಪ್ರದಾಯ, ಆಚರಣೆ ಸಂಬಂಧ ರಾಜ್ಯದ ಹೊರಗಡೆಯು ಸಹ ತಿಳಿಯುವಂತಾಗಬೇಕು. ಆ ನಿಟ್ಟಿನಲ್ಲಿ ಈ ಬಾರಿ ಪ್ರತೀ ಮಂಟಪದ ಬಗ್ಗೆ ಕಿರು ಪರಿಚಯದ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ‘ಮಡಿಕೇರಿ ನಗರದಲ್ಲಿ ಮಂಟಪಗಳು ಸಾಗುವ ಮಾರ್ಗ ಹಾಗೂ ವೇಳಾಪಟ್ಟಿ ಬಗ್ಗೆ ಲಿಖಿತವಾಗಿ ಮಾಹಿತಿ ಒದಗಿಸಬೇಕು. ದಸರಾದಂದು ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಯಾವ ಮಂಟಪ ಯಾವ ವೇಳೆಯಲ್ಲಿ ಎಲ್ಲಿಂದ, ಯಾವ ಮಾರ್ಗ ತೆರಳಲಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ನಿಗದಿತ ವೇಳೆ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ನಿಗದಿತ ವೇಳೆ ಹಾಗೂ ಮಂಟಪಗಳ ಮೆರವಣಿಗೆಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಇದ್ದಲ್ಲಿ ಸಾರ್ವಜನಿಕರಿಗೆ ಒಳಿತಾಗಲಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

ಮಡಿಕೇರಿ ಜನೋತ್ಸವ ದಸರಾವು ಪ್ರಮುಖವಾಗಿ ಕರಗ ಉತ್ಸವ ಹಾಗೂ ಮಂಟಪಗಳ ಮೆರವಣಿಗೆ ಅತೀ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಮಡಿಕೇರಿ ದಸರಾದ ವಿಶೇಷತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಮಡಿಕೇರಿ ದಸರಾದ ವಿಶೇಷತೆಯನ್ನು ಉಳಿಸಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿದೆ. ಆ ನಿಟ್ಟಿನಲ್ಲಿ ದಸರಾ ಯಶಸ್ಸಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಅವರು ಕೋರಿದರು.

ಮಡಿಕೇರಿ ದಸರಾ ಸಂಸ್ಕೃತಿ, ಸಂಪ್ರದಾಯ, ಆಚರಣೆ ಸಂಬಂಧ ರಾಜ್ಯದ ಹೊರಗಡೆಯು ಸಹ ತಿಳಿಯುವಂತಾಗಬೇಕು. ಆ ನಿಟ್ಟಿನಲ್ಲಿ ಈ ಬಾರಿ ಪ್ರತೀ ಮಂಟಪದ ಬಗ್ಗೆ ಕಿರು ಪರಿಚಯದ ಮಾಹಿತಿ ಒದಗಿಸಬೇಕು ಎಂದು ಅವರು ತಿಳಿಸಿದರು.

ಮಂಟಪ ಸಮಿತಿಯ ರಾಜೇಶ್ ಮಾತನಾಡಿ, ‘ಮಂಟಪ ತೆರಳುವ ಒಂದು ಬದಿಯಲ್ಲಿ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಬೇಕು. ಎರಡು ಬದಿ ತೆರೆದರೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಲಿದೆ’ ಎಂದು ಅವರು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಮಾತನಾಡಿ, ‘ಸುಗಮ ಸಾರಿಗೆ ಸಂಚಾರ ಹಾಗೂ ಜನರ ಓಡಾಟಕ್ಕೆ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮಂಟಪಗಳನ್ನು ಜಾಗೃತೆಯಿಂದ ಸುರಕ್ಷಿತ ಸ್ಥಳಕ್ಕೆ ತಲುಪಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಮಂಟಪಗಳು ಸಾರ್ವಜನಿಕರ ಹಿತಾಸಕ್ತಿಯಂತೆ ಸ್ವಯಂಪ್ರೇರಣೆಯಿಂದ ಕಾರ್ಯನಿರ್ವಹಿಸಬೇಕು,  ತಮ್ಮಲ್ಲಿಯೇ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಶಮಂಟಪ ಸಮಿತಿಯವರ ಮನವಿ, ಬೇಡಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿಯನ್ನು ಲಿಖಿತವಾಗಿ ಒದಗಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ದಶಮಂಟಪ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೇಶ್, ರಂಜಿತ್ ಅವರು ಹಲವು ವಿಚಾರಗಳ ಕುರಿತು ಮಾತನಾಡಿದರು. 

ಮಂಟಪಗಳು ಸಾಗುವ ವೇಳಾಪಟ್ಟಿ ಬಗ್ಗೆ ಲಿಖಿತ ಮಾಹಿತಿ ನೀಡಲು ಸೂಚನೆ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ

ಅರ್ಜುನ್ ಜನ್ಯ ರಾಜೇಶ್ ಕೃಷ್ಣನ್‌ ಕರೆಸಲು ಚಿಂತನೆ

ಇದೇ ವೇಳೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ದಸರಾ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಸ್ವಚ್ಛತೆ ಹಾಗೂ ಪರಿಸರ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಕೋರಿದರು. ಪ್ರಾಯೋಜಕತ್ವ ಬಗ್ಗೆ ಗಮನಹರಿಸಬೇಕು. ಈಗಾಗಲೇ ಯುವ ದಸರಾಗೆ ಪ್ರಸಿದ್ಧ ನಟರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಮಹಿಳಾ ದಸರಾ ಮಕ್ಕಳ ದಸರಾ ಜಾನಪದ ದಸರಾ ಕಾಫಿ ದಸರಾ ಹೀಗೆ ವಿವಿಧ ದಸರಾಗಳನ್ನು ಅಚ್ಚುಕಟ್ಟಾಗಿ ನಡೆಸಲು ಶ್ರಮಿಸುವಂತೆ ಅವರು ಮನವಿ ಮಾಡಿದರು. ಹಿನ್ನೆಲೆ ಗಾಯಕರಾದ ಅರ್ಜುನ್ ಜನ್ಯ ರಾಜೇಶ್ ಕೃಷ್ಣನ್ ಶಮಿತಾ ಮಲ್ನಾಡ್ ಸೇರಿದಂತೆ ಅನೇಕ ಖ್ಯಾತ ನಾಮರನ್ನು ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು ಪ್ರಯತ್ನಗಳು ಸಾಗಿವೆ ಎಂದು ನಗರ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. ಜನೋತ್ಸವಕ್ಕೆ ಧಕ್ಕೆ ಬಾರದಂತೆ ಜನರ ಸಮಿತಿಯಿಂದಲೇ ಉತ್ಸವ ಸಾಂಪ್ರದಾಯಿಕವಾಗಿ ನಡೆಯುವಂತಾಗಲು ಜಿಲ್ಲಾಡಳಿತ ಸರ್ವ ರೀತಿಯಲ್ಲಿಯೂ ಮಾರ್ಗದರ್ಶನ ನೀಡುತ್ತದೆ. ಪ್ರತೀ ಉಪ ಸಮಿತಿಗೂ ಸೂಕ್ತ ನಿರ್ವಹಣೆಗಾಗಿ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ ಎಂದರು.

‘ದಸರಾ ನಗರಿ ಸಾಲದು ತಯಾರಿ’

ಸರಣಿ ಆರಂಭಿಸಿದ್ದ ‘ಪ್ರಜಾವಾಣಿ’ ‘ದಸರಾ ನಗರಿ ಸಾಲದು ತಯಾರಿ’ ಎಂಬ ಸರಣಿಯನ್ನು ‘ಪ್ರಜಾವಾಣಿ’ ಸೋಮವಾರವಷ್ಟೇ ಆರಂಭಿಸಿತ್ತು. ದಸರಾ ಕುರಿತು ಸಿದ್ಧತೆಗಳು ಆಮೆಗತಿಯಲ್ಲಿ ನಡೆಯುತ್ತಿರುವುದರ ಕುರಿತು ವರದಿಗಳನ್ನು ಪ್ರಕಟಿಸಿತ್ತು. ಬುಧವಾರ ದಶಮಂಟಪ ಹಾಗೂ ಕರಗ ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT