ಮಂಗಳವಾರ, ಸೆಪ್ಟೆಂಬರ್ 22, 2020
23 °C
ವಿರಾಜಪೇಟೆ ತಾಲ್ಲೂಕಿನಲ್ಲಿ ವ್ಯಾಪಕ ಮಳೆ, ವಿವಿಧ ರಸ್ತೆಗಳಲ್ಲಿ ಸಂಚಾರ ಬಂದ್‌

ಮಗ್ಗುಲ ಬೆಟ್ಟದಲ್ಲಿ ಭೂಕುಸಿತ, ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ತಾಲ್ಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಪಟ್ಟಣದ ವಿಜಯನಗರ, ಸಿಲ್ವನಗರ, ಸುಭಾಷ್ ನಗರ, ವಿದ್ಯಾನಗರ, ಅರಸುನಗರ ಸೇರಿದಂತೆ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಅನುಭವಿಸಿದರು. ಮಗ್ಗುಲ ಗ್ರಾಮದ ಬೆಟ್ಟದಲ್ಲಿ ಭೂಕುಸಿತವಾಗಿದ್ದು, ಜನರು ಆತಂಕಗೊಂಡಿದ್ದಾರೆ. ಎಫ್ಎಂಸಿ ರಸ್ತೆಯ ಅಂಗಡಿ ಮಳಿಗೆಯ ಕಟ್ಟಡವೊಂದು ಕುಸಿದಿದೆ.

ವಿರಾಜಪೇಟೆ– ಮಡಿಕೇರಿ ಹೆದ್ದಾರಿಯ ಕದನೂರು ಹೊಳೆಯ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುತ್ತಿದೆ. ಗ್ರಾಮದ ಭತ್ತದ ಗದ್ದೆಗಳು ಹಾಗೂ ಬಾಣೆ ಜಾಗಗಳು ಜಲಾವೃತಗೊಂಡಿವೆ. ವಿರಾಜಪೇಟೆ– ನಾಪೋಕ್ಲು ನಡುವಿನ ಸಂಪರ್ಕ 2ನೇ ದಿನವೂ ಕಡಿತಗೊಂಡಿದೆ.

ಬೇತ್ರಿ ಗ್ರಾಮದಲ್ಲಿ ಕಾವೇರಿ ನದಿಯು ಉಕ್ಕಿ ಹರಿದ ಪರಿಣಾಮ ಬೇತ್ರಿ ಹಾಗೂ ಹೆಮ್ಮಾಡು ಗ್ರಾಮಗಳ ಬಹುತೇಕ ಮನೆಗಳು ಮುಳುಗಡೆಯಾಗಿವೆ. ವಿರಾಜಪೇಟೆ-ಮಡಿಕೇರಿ ಹೆದ್ದಾರಿಯು ಬಂದ್ ಆಗಿದೆ.

ಬಿಟ್ಟಂಗಾಲ ವ್ಯಾಪ್ತಿಯಲ್ಲಿನ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಕೊಳತ್ತೋಡು ಗ್ರಾಮದಲ್ಲಿ ಮರ ಉರುಳಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಆರ್ಜಿ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ಹೆದ್ದಾರಿಯಲ್ಲಿ 2 ಅಡಿಗಳಷ್ಟು ನೀರು ಹರಿದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ಆರ್ಜಿ, ಅರಮೇರಿ, ಕೊಂಡಗೇರಿ ಹಾಗೂ ಬೇಟೋಳಿ ವ್ಯಾಪ್ತಿಯಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ. ಕಳಂಚೇರಿ ಮಠದ ವಿದ್ಯಾಸಂಸ್ಥೆಯ ವಸತಿಗೃಹ ಹಾಗೂ ಲಿಂಗರಾಜೇಂದ್ರ ಸಭಾಂಗಣ ನೀರಿನಿಂದ ಆವೃತಗೊಂಡಿವೆ. ಕೊಟ್ಟೋಳಿ ಗ್ರಾಮದ ಹೊಳೆ ಉಕ್ಕಿ ಹರಿದ ಪರಿಣಾಮ ಸೇತುವೆ ಮುಳುಗಡೆಗೊಂಡು ವಾಹನ ಸಂಚಾರ ಬಂದ್ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.