ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ತೋಟದಲ್ಲಿ ಮಹಾವಿಷ್ಣು ದೇವಾಲಯ

ಸಿ.ಎಸ್.ಸುರೇಶ್
Published 28 ಜನವರಿ 2024, 7:26 IST
Last Updated 28 ಜನವರಿ 2024, 7:26 IST
ಅಕ್ಷರ ಗಾತ್ರ

ನಾಪೋಕ್ಲು: ಕಾಫಿ ತೋಟದೊಳಗಡೆ ಆಕರ್ಷಕ ದೇವಾಲಯವೊಂದು ನಿರ್ಮಾಣಗೊಳ್ಳಲು ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಗ್ರಾಮದ ಜನರು ಸಜ್ಜಾಗುತ್ತಿದ್ದಾರೆ. ದೇವಾಲಯ ನಿರ್ಮಾಣದ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ನಿರಂತರವಾಗಿ ನಡೆಯುತ್ತಿವೆ.

ಇದುವೇ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಹಾ ವಿಷ್ಣು ದೇವಾಲಯ.

ಮಡಿಕೇರಿ-ವಿರಾಜಪೇಟೆ ಮುಖ್ಯ ರಸ್ತೆಯ ಕಗ್ಗೋಡ್ಲು ಗ್ರಾಮದಲ್ಲಿರುವ ಶ್ರೀ ವೃಷಭಾರೂಢ ಭಗವತಿ ದೇವಸ್ಥಾನದ ಎದುರಿನ ಕಾಫಿ ತೋಟವೊಂದರಲ್ಲಿ ಪುರಾತನ ದೇವಾಲಯದ ಕುರುಹುಗಳು ಪತ್ತೆಯಾಗಿದ್ದು, ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ವೈದಿಕರು ಸೂಚಿಸಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಶಿಥಿಲಗೊಂಡ ದೇವಾಲಯದಲ್ಲಿ ಸಿಕ್ಕ ವಿಗ್ರಹವನ್ನು ತೆಗೆದು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇಲ್ಲಿನ ಮಹಾವಿಷ್ಣು ದೇವಾಲಯಕ್ಕೆ 800-900 ವರ್ಷಗಳ ಇತಿಹಾಸವಿದೆ. ದೇವಾಲಯ ಕುಸಿದು ಸಂಪೂರ್ಣ ಹಾಳಾಗಿದೆ. ಸುಮಾರು 400- 450 ವರ್ಷಗಳ ಹಿಂದೆ ಅಗ್ನಿ ಅನಾಹುತದಿಂದ ದೇವಾಲಯ ನಶಿಸಿಹೋಗಿದೆ ಎಂದು ಹೇಳಲಾಗಿದ್ದು, ದೇವಾಲಯದ ಪುನರ್ ನಿರ್ಮಾಣದ ಬಗ್ಗೆ ಗ್ರಾಮಸ್ಥರು ಸಿದ್ದತೆ ನಡೆಸಿದ್ದಾರೆ.

ಐತಿಹ್ಯಗಳ ಪ್ರಕಾರ ಈ ಮಹಾವಿಷ್ಣುವಿನ ದೇವಾಲಯ ಕೊಡಗು ಸೀಮೆಗೆ ಸಂಬಂಧಿಸಿದ ದೇವಾಲಯವಾಗಿದ್ದು ಹಿಂದೆ ಅಸಂಖ್ಯ ಭಕ್ತರ ಆರಾಧನಾ ಕೇಂದ್ರವಾಗಿತ್ತು. ಪ್ರತಿದಿನ ಇಲ್ಲಿ ಅನ್ನದಾನ ನಡೆಯುತ್ತಿತ್ತು. ಅಧಿಕ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ, ಶಿಥಿಲಗೊಂಡ ದೇವಾಲಯ ಇತಿಹಾಸದ ಕಾಲಚಕ್ರದೊಳಗೆ ಸಿಲುಕಿ ಮೂಲೆಗುಂಪಾಗಿದ್ದು, ಇದೀಗ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮದ ಜನರು ಮನಸ್ಸು ಮಾಡಿದ್ದಾರೆ.

ದೇವಾಲಯದ ಜೀರ್ಣೋದ್ಧಾರಕ್ಕಾಗಿ ತಂತ್ರಿಗಳನ್ನು ಕರೆಸಲಾಗಿದೆ. ಬಾಲಾಲಯ ನಿರ್ಮಿಸಿ ಹಳೆ ಬಿಂಬವನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇವಾಲಯವನ್ನು ನಿರ್ಮಿಸಲಾಗುವುದು. ಗರ್ಭಗುಡಿ, ತೀರ್ಥಮಂಟಪವನ್ನು ಕಾಫಿ ತೋಟದೊಳಗೆ ನಿರ್ಮಿಸಿ ಪ್ರಮುಖ ಆರಾಧನಾ ಸ್ಥಳವನ್ನಾಗಿ ಮಾರ್ಪಡಿಸಲು ಉದ್ದೇಶಿಸಲಾಗಿದೆ. ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಸ್ಥಳ ಶುದ್ದಿ, ಹೋಮ, ಹವನಗಳು, ಮೃತುಂಜಯ ಹೋಮ, ದುರ್ಗಾಪೂಜೆ, ಸತ್ಯನಾರಾಯಣ ಪೂಜೆಗಳನ್ನು ನೆರವೇರಿಸಲಾಗಿದೆ.

ಗ್ರಾಮದಲ್ಲಿ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಮಹಾವಿಷ್ಣುವಿನ ದೇವಾಲಯ ನಿರ್ಮಾಣವಾಗಬೇಕಿದೆ. ಅಂತೆಯೇ, ಗ್ರಾಮಸ್ಥರು ಏಕ ಮನಸ್ಸಿನಿಂದ ದೇವಾಲಯದ ನಿರ್ಮಾಣಕ್ಕೆ ಕಟಿಬದ್ಧರಾಗಿದ್ದಾರೆ. ಈಗಾಗಲೇ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಮುಂದೆಯೂ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

‘ಪ್ರತಿ ತಿಂಗಳು ಸತ್ಯನಾರಾಯಣ ಪೂಜೆ ನೆರವೇರಿಸಲಾಗುವುದು. ಪ್ರತಿ ಗುರುವಾರ ಬಾಲಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ಸಂಜೆ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ತೋಟದ ಮಾಲೀಕರಾದ ಮಡಿಕೇರಿಯ ಮಧುಸೂದನ್ ಕಾಫಿ ತೋಟದಲ್ಲಿ ದೇವಾಲಯದ ನಿರ್ಮಾಣಕ್ಕೆ ಸ್ಥಳ ಬಿಟ್ಟು ಕೊಟ್ಟಿದ್ದಾರೆ. ಗ್ರಾಮಸ್ಥರ ಸತತ ಪರಿಶ್ರಮದಿಂದ ಸುಂದರ ದೇಗುಲವೊಂದು ನಿರ್ಮಾಣವಾಗುವ ಹಂತದಲ್ಲಿದೆ. ಮುಂದಿನ ಹಂತದ ಅಷ್ಟಮಂಗಲ ಪ್ರಶ್ನೆಯ  ಬಳಿಕ ದೇವಾಲಯ ನಿರ್ಮಾಣದ ರೂಪುರೇಷೆಗಳ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಣವಟ್ಟೀರ ಸೂರಜ್ ತಿಳಿಸಿದರು.
ಪಾಲ್ಗೊಂಡಿದ್ದರು.

ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಳಶ ಹಿಡಿದ ಮಹಿಳೆಯರು.
ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಳಶ ಹಿಡಿದ ಮಹಿಳೆಯರು.
ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸೇರಿದ್ದ ಅಧಿಕ ಸಂಖ್ಯೆಯ ಭಕ್ತರು
ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಈಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸೇರಿದ್ದ ಅಧಿಕ ಸಂಖ್ಯೆಯ ಭಕ್ತರು
ಸತ್ಯನಾರಾಯಣ ಪೂಜೆಯನ್ನು ಈಚೆಗೆ ನೆರವೇರಿಸಲಾಯಿತು.
ಸತ್ಯನಾರಾಯಣ ಪೂಜೆಯನ್ನು ಈಚೆಗೆ ನೆರವೇರಿಸಲಾಯಿತು.

ಮಹಾವಿಷ್ಣು ದೇವಾಲಯಕ್ಕಿದೆ 800-900 ವರ್ಷಗಳ ಇತಿಹಾಸ 400- 450 ವರ್ಷಗಳ ಹಿಂದೆ ಅಗ್ನಿ ಅನಾಹುತದಿಂದ ನಶಿಸಿಹೋಗಿದ್ದ ದೇವಾಲಯ  ಇದೀಗ ಪುನರುಜ್ಜೀವನಗೊಳ್ಳುತ್ತಿರುವ ದೇಗುಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT