ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು| ಮಕ್ಕಿಕಡು ಸೇತುವೆ ಕಾಮಗಾರಿ ಮುಕ್ತಾಯ: ಗ್ರಾಮಸ್ಥರಿಗೆ ವರ

ಕಡಿಮೆಯಾದ ಪಾರಾಣೆ- ಬಲಮುರಿ- ನಾಪೋಕ್ಲು ನಡುವಿನ ಅಂತರ
Last Updated 12 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ನಾಪೋಕ್ಲು: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು, ಬಲಮುರಿ, ಪಾರಾಣೆ ಗ್ರಾಮಗಳ ನಡುವಿನ ಸಂಪರ್ಕಕೊಂಡಿಯಾದ ಮಕ್ಕಿಕಡು ಸೇತುವೆ ಕಾಮಗಾರಿ ಮುಕ್ತಾಯಗೊಂಡಿರುವುದರಿಂದ ಗ್ರಾಮೀಣ ಮಂದಿ ಈಗ ನಿರಾಳರಾಗಿದ್ದಾರೆ.

ಇಲ್ಲಿನ ಬೇತು ಹಾಗೂ ಬಲಮುರಿ ಗ್ರಾಮಗಳ ನಡುವೆ ಕಕ್ಕಬ್ಬೆ ಹೊಳೆ ಹರಿಯುತ್ತಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿತ್ತು. ನಾಪೋಕ್ಲುವಿನಿಂದ ಬಲಮುರಿ ಗ್ರಾಮಕ್ಕೆ ತೆರಳಲು ಜನರು ಸುತ್ತು ಬಳಸಿ ಸಾಗುತ್ತಿದ್ದರು. ಹೊಳೆ ಸೇತುವೆ ನಿರ್ಮಿಸಿದರೆ ಸಂಪರ್ಕ ಸುಲಭ ಎಂದು ಜನರು ಬೇಡಿಕೆ ಇಟ್ಟಿದ್ದರು.

ಸೇತುವೆ ಕಾಮಗಾರಿ ಮುಗಿದು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕ ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ನಾಪೋಕ್ಲು-ಬಲಮುರಿ ನಡುವಿನ ಸಂಚಾರ ಅಧಿಕಗೊಂಡಿದೆ. ಪ್ರತಿದಿನ ಹೆಚ್ಚು ವಾಹನಗಳು ಈ ಸಂಪರ್ಕ ರಸ್ತೆಯಲ್ಲಿ ಸಾಗುತ್ತಿವೆ. ನಾಪೋಕ್ಲು ಪಟ್ಟಣದಿಂದ 3 ಕಿ.ಮೀ. ದೂರದಲ್ಲಿ ಮಕ್ಕಿಶಾಸ್ತಾವು ದೇವಾಲಯದ ಬಳಿಯಿಂದ ಹಾದುಹೋಗುವ ರಸ್ತೆ ಮಕ್ಕಿಕಡು ಎಂಬಲ್ಲಿ ಕೊನೆಗೊಳ್ಳುತ್ತದೆ. ಅತ್ತ ಪಾರಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ಸೇತುವೆ ನಿರ್ಮಾಣಗೊಂಡಿದ್ದರಿಂದ 3 ಕಿ.ಮೀ. ಕ್ರಮಿಸಿ ಪಾರಾಣೆ ಹಾಗೂ ಬಲಮುರಿ ಗ್ರಾಮಗಳನ್ನು ತಲುಪಬಹುದು.

ಮಡಿಕೇರಿ ತಾಲ್ಲೂಕಿನ 2ನೇ ದೊಡ್ಡ ಪಟ್ಟಣವಾದ ನಾಪೋಕ್ಲು ಶೀಘ್ರಗತಿಯ ಬೆಳವಣಿಗೆಯನ್ನು ಕಾಣುತ್ತಿದ್ದು ವ್ಯಾಪಾರ, ವಹಿವಾಟು ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಗ್ರಾಮೀಣ ಮಂದಿ ಬಲಮುರಿ ಅಥವಾ ಪಾರಾಣೆ ಮೂಲಕ ಸಾಗಿ ಬರಬೇಕಿತ್ತು. ಬಸ್ಸಿನ ಸೌಕರ್ಯವೂ ಕಡಿಮೆ ಹಾಗೂ ಕ್ರಮಿಸುವ ಅಂತರ ಜಾಸ್ತಿ ಇದ್ದು ಜನ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಸೇತುವೆ ನಿರ್ಮಾಣಗೊಂಡಿರುವುದರಿಂದ ಪಾರಾಣೆ- ಬಲಮುರಿ- ನಾಪೋಕ್ಲು ನಡುವಿನ ಅಂತರ ಕಡಿಮೆಯಾಗಿದೆ. ಶಾಲೆ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಿದೆ.

ಬಲಮುರಿ-ಪಾರಾಣೆ ಗ್ರಾಮಗಳ ನಡುವಿನ ಸಂಪರ್ಕ ರಸ್ತೆಯ ಕಾಮಗಾರಿಯೂ ಬಿರುಸಿನಿಂದ ಸಾಗುತ್ತಿದ್ದು, ರಸ್ತೆ ಅಭಿವೃದ್ಧಿಯಿಂದ ಇಲ್ಲಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಮೂರ್ನಾಡು- ಬಲಮುರಿ ರಸ್ತೆಯನ್ನು ಈ ಹಿಂದೆಯೇ ಅಭಿವೃದ್ಧಿಪಡಿಸಲಾಗಿದ್ದು, ಅದರ ಮುಂದಿನ ಭಾಗವಾಗಿ ಬಲಮುರಿ-ಪಾರಾಣೆ ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಗ್ರಾಮೀಣ ಜನರ ಸಂಚಾರಕ್ಕೆ ಅನುಕೂಲವಾಗಲಿದೆ.

‘ಬಲಮುರಿ ಮತ್ತು ಬೇತು ಗ್ರಾಮಗಳ ಸಂಪರ್ಕ ಕೊಂಡಿಯಾದ ಮಕ್ಕಿಕಡು ಸೇತುವೆ ಗ್ರಾಮೀಣ ಜನರ ಬಹುದಿನದ ಕನಸಾಗಿತ್ತು. ಇದೀಗ ಸೇತುವೆ ನಿರ್ಮಾಣಗೊಂಡಿದೆ. ಗ್ರಾಮದಿಂದ ಮಕ್ಕಿಕಡು ಸೇತುವೆಯವರೆಗೆ ಅನತಿ ದೂರ ಮಣ್ಣಿನ ರಸ್ತೆ ಇದೆ. ಈ ರಸ್ತೆಯನ್ನೂ ಡಾಂಬರೀಕರಣ ಮಾಡಿದರೆ ಸಂಚಾರ ಸುಗಮವಾಗಲಿದೆ’ ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕಾಳೆಯಂಡ ಸಾಬಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT