ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹಿಂದ’ ಹೋರಾಟದ ವಿರುದ್ಧ ಪಿತೂರಿ

ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಸ್ಥಾಪಕ ಅಧ್ಯಕ್ಷ ಟಿ.‍ಪಿ.ರಮೇಶ್‌ ಆಕ್ರೋಶ
Last Updated 13 ಫೆಬ್ರುವರಿ 2021, 12:50 IST
ಅಕ್ಷರ ಗಾತ್ರ

ಮಡಿಕೇರಿ: ‘ಜಿಲ್ಲೆಯಲ್ಲಿ ನೆಲೆಸಿರುವ ಸಣ್ಣಪುಟ್ಟ ಸಮುದಾಯಗಳಿಗೆ ಹೋರಾಟದ ಮೂಲಕ ಸೌಲಭ್ಯ ತಲುಪಿಸಲು ಮುಂದಾದರೆ, ಕೆಲವರು ಪಿತೂರು ನಡೆಸುತ್ತಾರೆ. ಹೋರಾಟವನ್ನು ಹತ್ತಿಕ್ಕಿ ನಮ್ಮಲ್ಲಿಯೇ ಗೊಂದಲ ಸೃಷ್ಟಿಸುತ್ತಾರೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ಜಿಲ್ಲಾ ‘ಅಹಿಂದ ಒಕ್ಕೂಟ’ದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್‌ ಎಚ್ಚರಿಸಿದರು.

ನಗರದ ಕೊಹಿನೂರು ರಸ್ತೆಯ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಕೊಡಗು ಜಿಲ್ಲಾ ‘ಅಹಿಂದ ಒಕ್ಕೂಟ’ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಲಸಕ್ಕೆ ಇಳಿದ ನಂತರ ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು. ಸಮಾಜದ ಬೆಳವಣಿಗೆಗೆ ಆಯಾ ಸಮಾಜದ ಮುಖಂಡರೇ ಶ್ರಮಿಸಬೇಕು. ಆ ಮನೋಭೂಮಿಕೆ ಸಮಾಜದ ಮುಖಂಡರಲ್ಲಿ ಬರಬೇಕು’ ಎಂದು ಕರೆ ನೀಡಿದರು.

‘ಒಂದೇ ಸೂರಿನಡಿ ಹೋರಾಟ ನಡೆಸಿದರೆ ಯಾರಿಗಾದರೂ ಸೌಲಭ್ಯಗಳು ಸಿಗಲಿವೆ. ಪರಸ್ಪರ ಕಾಲೆಳೆಯುವ ತಂತ್ರದಿಂದ ಯಾರಿಗೂ ಲಾಭವಿಲ್ಲ’ ಎಂದು ರಮೇಶ್‌ ಎಚ್ಚರಿಸಿದರು.

‘ಅಹಿಂದ ಒಕ್ಕೂಟ’ವು ಮತ್ತೆ ಪುನಃಶ್ಚೇತನಗೊಳ್ಳಬೇಕಾದರೆ, ಮತ್ತೆ ಅಷ್ಟೇ ದೊಡ್ಡ ಪ್ರಯತ್ನ ನಡೆಸಬೇಕಿದೆ. ಒಕ್ಕೂಟದ ಬೇಕುಬೇಡ ಎಂಬ ಪ್ರಶ್ನೆ ನಮ್ಮ ಎದುರಿಗಿಲ್ಲ. ಕರ್ನಾಟಕದಲ್ಲಿ ಅಹಿಂದ ಒಕ್ಕೂಟ ಸ್ಥಾಪನೆಗೂ ಮೊದಲೇ ಕೊಡಗಿನಲ್ಲಿ ಇದು ಕಾರ್ಯಾರಂಭ ಮಾಡಿತ್ತು. ಸೊಸೈಟಿ ಕಾಯ್ದೆಯ ಅಡಿಯು ನೋಂದಣಿಯಾಗಿದೆ. ಸಮಾಜವನ್ನು ಪ್ರತಿನಿಧಿಸಿಕೊಂಡು, ಈ ಒಕ್ಕೂಟದಲ್ಲಿ ಯಾರು ಬೇಕಾದರೂ ಇರಬಹುದು. ಆದರೆ, ರಾಜಕೀಯ ವಿಷಯ ಪ್ರಸ್ತಾಪಿಸುವಂತೆ ಇಲ್ಲ’ ಎಂದು ಕೋರಿದರು.

‘ಅಹಿಂದ’ ಒಕ್ಕೂಟವು ಬಹಳ ಪ್ರಬಲವಾಗಿ ಹೋರಾಟ ನಡೆಸಿದೆ. ಅದೇ ಕಾರಣಕ್ಕೆ ಹಲವು ಸಮಾಜಕ್ಕೆ ಸೌಲಭ್ಯಗಳೂ ಸಿಕ್ಕಿವೆ. ಸ್ಕೂಟರ್‌ ಮೂಲಕ ಕೊಡಗಿನಾದ್ಯಂತ ಓಡಾಟ ನಡೆಸಿ ಸಂಘಟನೆ ಮಾಡಿದ್ದೇನೆ’ ಎಂದು ಹೇಳಿದರು.

‘ಕೊಡಗಿನ 18 ಮೂಲ ನಿವಾಸಿಗಳಿಗೆ ಮೀಸಲಾತಿ ಸೌಲಭ್ಯವೇ ಇರಲಿಲ್ಲ. ನಮ್ಮ ಹೋರಾಟದ ಫಲವಾಗಿ ಎರಡು ಸಮುದಾಯಕ್ಕೆ ಮೀಸಲಾತಿ ಅಡಿ ಬಂದವು. ರವಿವರ್ಮ ಆಯೋಗದ ಎದುರು ‘ಬಣ್ಣ’ ಹಾಗೂ ‘ಹೆಗ್ಗಡೆ’ ಸಮುದಾಯದ ಸ್ಥಿತಿಗತಿ ವಿವರಿಸಿದ್ದರ ಪರಿಣಾಮವಾಗಿ ಪ್ರವರ್ಗ 2ರ ಅಡಿ ಸೇರಿದವು. ಶಿಕ್ಷಣ ಹಾಗೂ ಉದ್ಯೋಗದ ಮೀಸಲಾತಿ ಸಿಕ್ಕಿತ್ತು. ಆದರೆ, ರಾಜಕೀಯ ಮೀಸಲಾತಿ ಸಿಗಲಿಲ್ಲ. ಅದೇ ರೀತಿ ಅರಮನೆ ಕಾಯುವ ‘ಕಾಪಾಳ ಜನಾಂಗ’ಕ್ಕೆ ಪ್ರವರ್ಗ 1ರ ಅಡಿ ಮೀಸಲಾತಿ ಸೌಲಭ್ಯ ಸಿಕ್ಕಿದೆ. ಅನೇಕ ಒಳ್ಳೆಯ ಕಾರ್ಯಕ್ರಮ ಮಾಡಿದ್ದೇವೆ. ‘ಕೆಂಬಟ್ಟಿ’ ಜನಾಂಗದವರು ಪರಿಶಿಷ್ಟ ಜಾತಿ ಅಡಿ ಸಿಗುವ ಸೌಲಭ್ಯಕ್ಕಾಗಿ ಹೋರಾಟ ನಡೆಸಿದ್ದರೂ ಅವರಿಗೆ ಸ್ಥಾನಮಾನ ಸಿಕ್ಕಿಲ್ಲ. ಅದೇ ರೀತಿ ಕೇರಳದಿಂದ ಬಂದಿರುವ ‘ಮಲಯ ಸಮಾಜ’ದ ಬೇಡಿಕೆಯೂ ಈಡೇರಿಲ್ಲ ಎಂದು ಹೇಳಿದರು.

ವರದಿ ಬಿಡುಗಡೆಗೆ ಮಾಡಿ: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಗಣತಿಯನ್ನು ಶಾಶ್ವತ ಆಯೋಗವು ನಡೆಸಿದೆ. ಅದನ್ನು ಬಿಡುಗಡೆ ಮಾಡದಿದ್ದರೆ ಯಾವ ಜನಾಂಗದ ಸ್ಥಿತಿ ಹೇಗಿದೆ ಎಂಬುದು ತಿಳಿಯುವುದಿಲ್ಲ. ಅದನ್ನೂ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ, ಇದೇ 18ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಟಿ.ಪಿ.ರಮೇಶ್‌ ಮಾಹಿತಿ ನೀಡಿದರು.

‘ಶಾಶ್ವತ ಆಯೋಗದ ವರದಿ ತಯಾರಿಸಲು ₹ 158 ಕೋಟಿ ಖರ್ಚಾಗಿದೆ. 1 ಲಕ್ಷ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗಿದ’ ಎಂದು ರಮೇಶ್‌ ಮಾಹಿತಿ ನೀಡಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುನೀರ್‌ ಅಹಮದ್‌ ಮಾತನಾಡಿ, ‘1991ರಲ್ಲಿ ಅಹಿಂದ ಒಕ್ಕೂಟವು ಸ್ಥಾಪನೆಯಾದ ಮೇಲೆ ಬೃಹತ್‌ ಪ್ರತಿಭಟನೆ ನಡೆದಿತ್ತು. ಅದಾದ ಮೇಲೆ ಅಂತಹ ಹೋರಾಟ ನಡೆದಿಲ್ಲ. ಅಂಥದ್ದೇ ಭೂಮಿಕೆ ಸೃಷ್ಟಿಯಾಗಬೇಕಿದೆ’ ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ ಮಾತನಾಡಿ, ‘ಒಕ್ಕೂಟದ ಹೋರಾಟವು ಅನಿವಾರ್ಯ ಕಾರಣದಿಂದ ಸ್ಥಗಿತಗೊಂಡಿತ್ತು. ಮತ್ತೆ ಹೋರಾಟ ಆರಂಭವಾಗಿದೆ. ನಿವೇಶನ ರಹಿತರ, ಆಶ್ರಯ ರಹಿತರಿಗೆ ನ್ಯಾಯ ಕಲ್ಪಿಸುವ ಸಲುವಾಗಿ ಹೋರಾಟ ನಡೆಯುತ್ತಿದೆ’ ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ಬೇಬಿ ಮ್ಯಾಥ್ಯು ಸ್ವಾಗತಿಸಿದರು.

ಸಭೆಯಲ್ಲಿ ಸುರಯ್ಯ ಅಬ್ರಾರ್‌, ಕೆ.ಎಂ.ಬಿ.ಗಣೇಶ್‌, ಇಸ್ಮಾಯಿಲ್‌, ಲೀಲಾ ಶೇಷಮ್ಮ, ಡಿ.‍ಪಿ.ರಾಜೇಶ್‌, ಲಿಯಾಕತ್‌ ಅಲಿ, ಇಬ್ರಾಹಿಂ, ಸವಿತಾ ಸಮಾಜದ ರಂಗಯ್ಯ, ಪೀಟರ್‌, ಸುನಿಲ್‌, ಕೊಡಗು ನಾಯರ್‌ ಸಮಾಜದ ಕೆ.ಎಂ.ಬಿ.ಗಣೇಶ್‌, ಅಬ್ದುಲ್ಲಾ. ಮಿನಾಜ್‌ ‍ಪ್ರವೀಣ್‌, ಪ್ರೇಮಾ, ಯಶೋದಾ ಹಾಜರಿದ್ದರು.

‘ಸೇಂದಿ ಇಳಿಸಲು ಅವಕಾಶಕ್ಕೆ ಕೋರಿಕೆ

‘ಕುಡಿಯ ಸಮಾಜದ ಕುಲಕಸುಬು ಬೈನೆ ಸೇಂದಿ ಇಳಿಸುವುದು. ಆದರೆ, ಕೊಡಗಿನಲ್ಲಿ ಬೈನೆ ಸೇಂದಿ ಇಳಿಸಲು ಅವಕಾಶವೇ ಇಲ್ಲವಾಗಿದೆ. ಅದೇ, ಕೊಡಗಿನ ಸಮೀಪದ ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಸೇಂದಿ ಇಳಿಸಿ, ಮಾರಾಟಕ್ಕೆ ಅವಕಾಶವಿದೆ. ಇದು ತಾರತಮ್ಯ ಅಲ್ಲವೇ? ನಮಗೂ ಸೇಂದಿ ಇಳಿಸಲು ಅವಕಾಶ ಬೇಕಿದೆ. ಜೊತೆಗೆ, ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಅರಣ್ಯ ವಾಸಿಗಳಿಗೆ ನನ್ನ ಅಂದಾಜಿನಂತೆ 20 ಸಾವಿರ ಎಕರೆ ಭೂಮಿ ಹಂಚಿಕೆ ಆಗಬೇಕಿತ್ತು. ಆದರೆ, ಆಗಿರುವುದು ಬರೀ 13 ಸಾವಿರ ಎಕರೆ ಮಾತ್ರ’ ಎಂದು ಕುಡಿಯ ಸಮಾಜದ ಮುಖಂಡ ಕುಡಿಯರ ಮುತ್ತಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT