ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರದ ಬಳಿ ಮಿನಿ ವಿಮಾನ ನಿಲ್ದಾಣ; ಜಿಲ್ಲೆಯ ಜನರಲ್ಲಿ ಸಂತಸ

ಪ್ರವಾಸೋದ್ಯಮಕ್ಕೆ ಪೂರಕ, 2012ರ ಯೋಜನೆಗೆ ಮತ್ತೆ ಮರುಜೀವ
Last Updated 23 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಕುಶಾಲನಗರ: ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಮಿನಿ ವಿಮಾನ ನಿಲ್ದಾಣಕ್ಕೆ ಸರ್ಕಾರ ಮರುಜೀವ ನೀಡಿದ್ದು, ಜಿಲ್ಲೆಯ ಜನರಿಗೆ ಸಂತಸ ಮೂಡಿಸಿದೆ.

ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ ಸೈನಿಕಶಾಲೆ ಹಿಂಭಾಗದಲ್ಲಿರುವ ಕೃಷಿ ಇಲಾಖೆ ಸುಮಾರು 50 ಎಕರೆ ಪ್ರದೇಶದಲ್ಲಿ 25ರಿಂದ 40 ಪ್ರಯಾಣಿಕರು ಏಕಕಾಲದಲ್ಲಿ ಸಂಚರಿಸಬಹುದಾದ ಮಿನಿ ವಿಮಾನಗಳನ್ನು ಇಳಿಸಲು ಸಾಧ್ಯವಾಗುವಂತೆ ಮಿನಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಏಳೆಂಟು ವರ್ಷಗಳ ಹಿಂದೆಯೇ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಚಿಕ್ಕ ಅಳುವಾರ, ಬ್ಯಾಡಗೊಟ್ಟ, ಬೈದಗುಟ್ಟ, ಮಾದಾಪುರದಲ್ಲಿ ಜಾಗ ಗುರುತಿಸಿ ಮಿನಿ ವಿಮಾನ ನಿಲ್ದಾಣ ಸ್ಥಾಪನೆ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಾಸ್ತಾವ ಸಲ್ಲಿಸಲಾಗಿತ್ತು. ಈ ಸಂಬಂಧ ಕೇಂದ್ರ ವಿಮಾನಯಾನ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರು ಜಿಲ್ಲೆಗೆ ಭೇಟಿ ನೀಡಿ ಎರಡು ಮೂರು ಬಾರಿ ಪರಿಶೀಲನೆ ನಡೆಸಿದ್ದರು. ಕೊಡಗು ಗುಡ್ಡಗಾಡು ಪ್ರದೇಶವಾದ ಹಿನ್ನೆಲೆಯಲ್ಲಿ ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಗಬಹುದು ಎಂದು ತಜ್ಞರು ತಾಂತ್ರಿಕ ಸಮಸ್ಯೆ ನೀಡಿ ಈ ಯೋಜನೆಯನ್ನು ಕೈಬಿಟ್ಟಿದ್ದರು. 2012ರಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ವೇಳೆ ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ವಿಶಾಲವಾದ ಜಾಗವನ್ನು ಗುರುತಿಸಿ ಮತ್ತೆ ಪ್ರಸ್ತಾವ ಸಲ್ಲಿಸಿದ್ದರು.

ಇದೀಗ ಅಂತಿಮವಾಗಿ ಸೈನಿಕ ಶಾಲೆಯ ಹಿಂಭಾಗ ಕೃಷಿ ಇಲಾಖೆ ಜಾಗ ಆಯ್ಕೆಯಾಗಿದೆ. ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ದೇಶದಾದ್ಯಂತ 100 ವಿಮಾನ ನಿಲ್ದಾಣಗಳನ್ನು ತೆರೆಯಲು ಉದ್ದೇಶಿಸಿದೆ. ಇದಕ್ಕಾಗಿ ಸುಮಾರು ತಲಾ 7 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ತೀರ್ಮಾನಿಸಿದೆ. ರಾಜ್ಯಕ್ಕೆ ಮಂಜೂರಾಗಿರುವ ನಾಲ್ಕು ಮಿನಿ ವಿಮಾನ ನಿಲ್ದಾಣಗಳಲ್ಲಿ ಕೊಡಗಿನ ಕುಶಾಲನಗರ ಬಳಿಯ ಕೂಡಿಗೆ ಆಯ್ಕೆಯಾಗಿದೆ.

ಈ ಪ್ರದೇಶದಲ್ಲಿ ಸುಮಾರು 50 ಎಕರೆ ಜಾಗವಿದ್ದು, ಒಂದು ಕಿ.ಮೀ ಉದ್ದದ ರನ್ ವೇ ಮಿನಿ ವಿಮಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ನವೆಂಬರ್‌ನಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ರಾಜ್ಯದಲ್ಲಿ ಉದ್ದೇಶಿಸಿತ ನಿಲ್ದಾಣಗಳ ಪೈಕಿ ಕುಶಾಲನಗರ ಬಳಿಯ ಕೂಡಿಗೆಗೆ ಸ್ಥಾನ ಸಿಕ್ಕಿದೆ.

ಉಡಾನ್ ಯೋಜನೆಯ ಅಡಿ ಕೂಡಿಗೆ ಕೃಷಿ ಇಲಾಖೆ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪಿಸಿ ವಿಮಾನಯಾನ ಸೇವೆ ಆರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ ಅವರಿಂದ ಸರ್ವೇ ಕಾರ್ಯ ನಡೆಸಿ ಮುಂದಿನ ಆರು ತಿಂಗಳಲ್ಲಿ ಮಿನಿ ವಿಮಾನ ಕಾಮಗಾರಿ ಆರಂಭಿಸಲು ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿಧಾನಸಭೆ ಅಧಿವೇಶನದಲ್ಲೂ ಈ ಬಗ್ಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ತರಬೇತಿ ಕೇಂದ್ರ ಆರಂಭ: ಮಿನಿ ವಿಮಾನ ನಿಲ್ದಾಣದ ಜೊತೆಗೆ ಕುಶಾಲನಗರದ ಪಕ್ಕದಲ್ಲಿಯೇ ಟ್ರೈನಿಂಗ್ ಅಕಾಡೆಮಿ ಸ್ಥಾಪನೆಯಾಗಲಿದ್ದು, ಈ ಅಕಾಡೆಮಿಯು ಕೊಡಗು ಹಾಗೂ ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವಿಮಾನ ಚಾಲನೆಯ ಆಕಾಂಕ್ಷಿಗಳಿಗೆ ತರಬೇತಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT