ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ ಹಣಾಹಣಿ: ಕೊಡಗಿನಿಂದ ಯಾರಿಗೆ ಟಿಕೆಟ್‌?

ಬಿಜೆಪಿಯಿಂದ ಹೊಸಮುಖದ ಲೆಕ್ಕಾಚಾರ, ಕಾಂಗ್ರೆಸ್‌ನಿಂದ ಮಂಥರ್‌ಗೌಡ, ಕೆ.ಎಂ.ಲೋಕೇಶ್‌ ಆಕಾಂಕ್ಷಿತರು
Last Updated 15 ನವೆಂಬರ್ 2021, 21:15 IST
ಅಕ್ಷರ ಗಾತ್ರ

ಮಡಿಕೇರಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಕೊಡಗು ಕ್ಷೇತ್ರದಿಂದ ಯಾರಿಗೆ ಟಿಕೆಟ್‌ ಎಂಬ ಕುತೂಹಲ ಮೂಡಿದೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ತಮ್ಮ ಪಕ್ಷದ ಅಭ್ಯರ್ಥಿ ಯಾರೆಂಬ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಮೂರು ಪಕ್ಷದ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಸದಸ್ಯರಿಗೆ ನಮ್ಮ ಪಕ್ಷದ ಅಭ್ಯರ್ಥಿ ಯಾರು ಎನ್ನುವ ಕುತೂಹಲವಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಬೆಂಬಲಿತರನ್ನು ಹೊಂದಿರುವ ಬಿಜೆಪಿಯು ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸುತ್ತಿದೆ. ಇಲ್ಲಿ 20ಕ್ಕೂ ಹೆಚ್ಚು ಮಂದಿ ಆಕಾಂಕ್ಷಿತರಿದ್ದಾರೆ. ಆ ನಡುವೆಯೂ ಹಾಲಿ ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ ಅವರಿಗೇ ಟಿಕೆಟ್‌ ಸಿಗುವುದೇ ಎಂಬ ಚರ್ಚೆಯೂ ನಡೆಯುತ್ತಿದೆ.

ಸುನಿಲ್‌ ಅವರ ಸಹೋದರ ಸುಜಾ ಕುಶಾಲಪ್ಪ ಹಾಗೂ ಪಶ್ಚಿಮಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರೂ ಪ್ರಬಲ ಆಕಾಂಕ್ಷಿಯಾಗಿರುವ ಕಾರಣಕ್ಕೆ ಬಿಜೆಪಿಯಲ್ಲಿ ಟಿಕೆಟ್‌ಗೆ ಒತ್ತಡ ಹೆಚ್ಚಾಗಿದೆ. ಹೀಗಾಗಿ, ಬಿಜೆಪಿ ವರಿಷ್ಠರು ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಒಂದು ವೇಳೆ ಸುನಿಲ್‌ ಅಥವಾ ಸುಜಾ ಕುಶಾಲಪ್ಪಗೆ ಟಿಕೆಟ್ ಸಿಕ್ಕರೆ ಕುಟುಂಬ ರಾಜಕಾರಣದ ಹಣೆಪಟ್ಟಿಗೆ ಬಿಜೆಪಿ ಒಳಗಾಗುವ ಆತಂಕ ಎದುರಾಗಿದೆ. ಇಬ್ಬರೂ ಮಡಿಕೇರಿ ಕ್ಷೇತ್ರದ ಹಾಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರ ಸಹೋದರರು. ಜೊತೆಗೆ, ಸುನಿಲ್‌ ಅವರು ಹಾಲಿ ಮೇಲ್ಮನೆ ಸದಸ್ಯರು.

ಈ ಹಣೆಪಟ್ಟಿಯಿಂದ ಹೊರಬರಲು ಬಿಜೆಪಿ ವರಿಷ್ಠರು ಹೊಸ ಲೆಕ್ಕಾಚಾರದಲ್ಲೂ ಇದ್ದಾರೆ ಎನ್ನಲಾಗಿದೆ. ಕೊಡಗು ಬಿಜೆಪಿಯ ಭದ್ರಕೋಟೆ ಆಗಿರುವ ಕಾರಣಕ್ಕೆ ಅಭ್ಯರ್ಥಿ ಆಯ್ಕೆಯಲ್ಲಿ ಹೊಸ ಪ್ರಯೋಗವೂ ನಡೆಯುವ ಸಾಧ್ಯತೆಯಿದೆ.

ಇಂದು ಕಾಂಗ್ರೆಸ್‌ ಸಭೆ

ಪರಿಷತ್‌ ಚುನಾವಣೆಯ ಮಂಗಳವಾರ ಅಧಿಸೂಚನೆ ಪ್ರಕಟವಾಗಲಿದ್ದು, ಕಾಂಗ್ರೆಸ್‌ನಲ್ಲೂ ರಾಜಕೀಯ ಚಟುವಟಿಕೆಗಳು ಗೆರಿಗೆದರಿವೆ. ಸೋಮವಾರಪೇಟೆಯ ಕೆ.ಎಂ.ಲೋಕೇಶ್ ಅವರು ಆಕಾಂಕ್ಷಿ ಎನ್ನಲಾಗಿದೆ. ಉಳಿದ ಮುಖಂಡರು ಸ್ಪರ್ಧೆಗೆ ಒಲವು ತೋರುತ್ತಿಲ್ಲ. ಹೀಗಾಗಿ, ಜಿಲ್ಲೆಯ ಹೊರಗಿನ, ಸೋಮವಾರಪೇಟೆ ಭಾಗದಲ್ಲಿ ಸಕ್ರಿಯವಾಗಿರುವ ಮಂಥರ್‌ಗೌಡ ಅವರೂ ಕಾಂಗ್ರೆಸ್‌ನಿಂದ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಭದ್ರ ನೆಲೆಯಿಲ್ಲದ ಕಾರಣಕ್ಕೆ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಅಷ್ಟಾಗಿ ಕಾಣಿಸುತ್ತಿಲ್ಲ. ನಮ್ಮ ಪಕ್ಷದಿಂದ ಸ್ಪರ್ಧೆ ಖಚಿತ ಎಂದು ಜೆಡಿಎಸ್‌ ಮುಖಂಡರು ಹೇಳುತ್ತಾರೆ.

ಯಾರಿಗೆ ಮತದಾನ ಅವಕಾಶ?

ಮಡಿಕೇರಿ ನಗರಸಭೆಯಲ್ಲಿ 23, ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ 18, ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ 11, ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ 16, ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ 295, ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ 482 ಹಾಗೂ ಸೋಮವಾರಪೇಟೆ ತಾಲ್ಲೂಕು ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 483 ಸದಸ್ಯರಿದ್ದಾರೆ. ಅವರಿಗೆ ಹಕ್ಕು ಚಲಾವಣೆಯ ಅವಕಾಶವಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆಯದ ಕಾರಣಕ್ಕೆ ಈ ಎರಡೂ ಸ್ಥಳೀಯ ಸಂಸ್ಥೆಗಳಿಂದ ಯಾರೂ ಮತದಾರರು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT