ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕನ ಆಯ್ಕೆ ಖಚಿತ: ಮಂಜುನಾಥಕುಮಾರ್

Published 28 ಮೇ 2024, 7:33 IST
Last Updated 28 ಮೇ 2024, 7:33 IST
ಅಕ್ಷರ ಗಾತ್ರ

‘ಹಳೆಯ ಪಿಂಚಣಿ ಯೋಜನೆಯ ಜಾರಿ, ಪಿಂಚಣಿ ಯೋಜನೆ ವ್ಯಾಪ್ತಿಗೆ ಅನುದಾನಿತ ಶಾಲೆಗಳ ಶಿಕ್ಷಕರನ್ನು ಸೇರ್ಪಡೆ ಮಾಡುವುದು, ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ವಿಮೆ ನೀಡುವುದು ಸೇರಿದಂತೆ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ನನ್ನಲ್ಲಿ ಅನೇಕ ಮಾರ್ಗೋಪಾಯಗಳಿವೆ’ ಎಂದು ವಿಧಾನಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಕೆ.ಮಂಜುನಾಥಕುಮಾರ್ (ಮಾಸ್ಟ್ರು) ಹೇಳಿದರು.

‘ಕಾಂಗ್ರೆಸ್‌ ಪಕ್ಷದಿಂದ 1 ಬಾರಿ ಹಾಗೂ ಸ್ವತಂತ್ರವಾಗಿ 1 ಬಾರಿ ಸ್ಪರ್ಧಿಸಿ, ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಅವರು ಶಿಕ್ಷಕರ ಸಮಸ್ಯೆಗಳ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ. 

* ಶಿಕ್ಷಕರು ನಿಮಗೇ ಏಕೆ ಮತ ಹಾಕಬೇಕು?

ನಾನೊಬ್ಬ ಸರ್ಕಾರಿ ಪ್ರೌಢಶಾಲೆ ಶಿಕ್ಷಕನಾಗಿದ್ದೆ. ಶಿಕ್ಷಕರ ಎಲ್ಲ ಸಮಸ್ಯೆಗಳ ಅರಿವಿದೆ. ಪರಿಹಾರೋಪಾಯವೂ ಗೊತ್ತಿದೆ. ಶಿಕ್ಷಕನಾಗಿದ್ದರೂ ನಾನೊಬ್ಬ ದೊಡ್ಡಮಟ್ಟದ ಸಂಘಟಕ, ಹೋರಾಟಗಾರ. ಶಿಕ್ಷಕರ ಪರವಾದ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದೆ. ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ಮಾನ್ಯತೆ ಕೊಡಿಸಿದ್ದು, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ತೆರೆದಿದ್ದು ಸೇರಿದಂತೆ ಹಲವು ಕಾರ್ಯ ಮಾಡಿದ್ದೇನೆ.

2002–03ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪರಿಹಾರ ಬೋಧನೆ ರದ್ದುಪಡಿಸುವಂತೆ ಮಾಡಿ ಶಿಕ್ಷಕರ ಹೊರೆಯನ್ನು ಇಳಿಸಿದ್ದೆ. 2003–04ನೇ ಸಾಲಿನಲ್ಲಿ 250ಕ್ಕೂ ಹೆಚ್ಚು ಶಿಕ್ಷಕರು ಉತ್ತರ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ವರ್ಗಾವಣೆಯಾಗುವ ಸ್ಥಿತಿ ಬಂದಾಗ ಕೌನ್ಸೆಲಿಂಗ್ ದಿನ ಪ್ರತಿಭಟಿಸಿ ಇಲಾಖೆಯ ತಪ್ಪನ್ನು ತಾರ್ಕಿಕವಾಗಿ ಮಂಡಿಸಿ, ರದ್ದಾಗುವಂತೆ ಮಾಡಿ, ಶಿಕ್ಷಕರನ್ನು ಕೊಡಗಿನಲ್ಲೇ ಉಳಿಸಿಕೊಳ್ಳುವಲ್ಲಿ ಸಫಲನಾಗಿದ್ದೆ. ಈ ರೀತಿ ಮಾಡಿದ ಏಕೈಕ ಜಿಲ್ಲೆ ಕೊಡಗು.

ಒಬ್ಬ ಸಮರ್ಥ ಶಿಕ್ಷಕ ವಿಧಾನಪರಿಷತ್ತಿಗೆ ಆಯ್ಕೆಯಾದರೆ ಪೂರಕ ಚರ್ಚೆ ಮಾಡಲು, ಸರ್ಕಾರದ ಗಮನ ಸೆಳೆಯಲು ಸಾಧ್ಯವಾಗುತ್ತದೆ. ಪ್ರಮುಖ ಸಮಸ್ಯೆಗಳು ಇತ್ಯರ್ಥವಾಗಲು ಆಡಳಿತ ಪಕ್ಷದಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಇನ್ನೂ 4 ವರ್ಷ ಅಧಿಕಾರದಲ್ಲಿರುತ್ತದೆ. ಹೀಗಾಗಿ ನನಗೇ ಮತ ಹಾಕಬೇಕು ಎಂದು ಬಯಸುವೆ.

* ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳೇನು? ನಿಮ್ಮ ಬಳಿ ಇರುವ ಪರಿಹಾರಗಳೇನು?

ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಹಳೆಯ ಪಿಂಚಣಿ ಯೋಜನೆ ಜಾರಿಯಾಗಿತ್ತು. 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಅದರಿಂದ ವೇತನದಲ್ಲಿ ಮಾಸಿಕ ಶೇ 10ರಷ್ಟು ಹಣ ಕಡಿತ ಮಾಡಿ ಷೇರುಪೇಟೆಗೆ ಹಾಕಲಾಗುತ್ತಿದೆ. ಇದರಿಂದ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ. ಈಗ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಬೇಕಿದೆ.

ಬಡ್ತಿ ಆದವರಿಗೆ ಸಂಬಳ ಕಡಿಮೆಯಾಗಿದ್ದು, ಅವರಿಗೆ ನ್ಯಾಯ ಕೊಡಿಸಬೇಕಿದೆ. ಅನುದಾನರಹಿತ ಶಾಲೆಗಳ ಶಿಕ್ಷಕರು ಕೃಷಿ ಕಾರ್ಮಿಕರಿಗಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಅವರ ಕುಟುಂಬದ ಭದ್ರತೆಗೆ ₹ 25 ಲಕ್ಷ ವಿಮೆ ಕೊಡಿಸಬೇಕು. ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕರಿಗೆ ವೈದ್ಯಕೀಯ ಚಿಕಿತ್ಸೆ ಉಚಿತವಾಗಿ ನೀಡಲು ಪ್ರಯತ್ನಿಸುವೆ.

* ಶಿಕ್ಷಕರಿಗೆ ಮಾಡಿಕೊಡಬೇಕಿರುವ ಪ್ರಮುಖ ಕೆಲಸಗಳೇನು?

ಇಲಾಖೆಯ ಹಣವನ್ನು ಮಾರ್ಚ್ ತಿಂಗಳಿನಲ್ಲಿ ಖರ್ಚು ಮಾಡುತ್ತಾರೆ. ಆಗ ತರಬೇತಿಗಳನ್ನು ನೀಡುತ್ತಾರೆ. ತರಬೇತಿಗಳನ್ನು ಡಿಸೆಂಬರ್‌ಗೂ ಮುಂಚೆಯೇ ನೀಡಬೇಕು. ಚುನಾವಣಾ ಕರ್ತವ್ಯ, ಗಣತಿ ಕಾರ್ಯ, ತರಬೇತಿ, ಮೌಲ್ಯಮಾಪನ ಹೀಗೆ ಹಲವು ಕಾರ್ಯಗಳನ್ನು ಮಾಡುವವರಿಗೆ 2ನೇ ಶನಿವಾರ, 4ನೇ ಶನಿವಾರ ರಜೆ ಇಲ್ಲ. ಬೇರೆ ಇಲಾಖೆಯಲ್ಲಿದೆ. ಈ ತಾರತಮ್ಯ ಹೋಗಲಾಡಿಸಬೇಕಿದೆ. ಶಿಕ್ಷಕರನ್ನು ಶಿಕ್ಷಕ ಕೆಲಸಗಳಿಗೆ ಮಾತ್ರವೇ ಬಳಸಬೇಕು.

ಅನುದಾನಿತ ಶಾಲೆಗಳ ಶಿಕ್ಷಕರಿಗೆ ಹಳೆಯ ಪಿಂಚಣಿಯೂ ಇಲ್ಲ, ಹೊಸ ಪಿಂಚಣಿಯೂ ಇಲ್ಲ. ಇದೊಂದು ಸಾಮೂಹಿಕ ದುರಂತ. ನಿವೃತ್ತಿಯಾದವರೂ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ. ಅವರನ್ನೂ ಹಳೆಯ ಪಿಂಚಣಿ ವ್ಯಾಪ್ತಿಗೆ ತರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT