ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗ್ಲಿಂಗ್, ಕಿಟ್ಟೆಲ್‌ ಸಾಧನೆಯ ತಾಣ ಕಾಂತಿಚರ್ಚ್!

165 ವರ್ಷಗಳಷ್ಟು ಸುದೀರ್ಘ ಇತಿಹಾಸ; ಕನ್ನಡಕ್ಕೆ ಮಹೋನ್ನತ ಕೊಡುಗೆ ನೀಡಿದ ಸ್ಥಳ
Last Updated 22 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಸಂತ ಅನ್ನಮ್ಮ ಚರ್ಚ್‌ ನಂತರ ಕಾಣಸಿಗುವ ಹಳೆಯ ಚರ್ಚ್‌ ಆನಂದಪುರದ ಕಾಂತಿ ಚರ್ಚ್. 165 ವರ್ಷಗಳ ಇತಿಹಾಸ ಹೊಂದಿರುವ ಈ ಚರ್ಚ್ ಧಾರ್ಮಿಕವಾಗಿ ಮಾತ್ರವಲ್ಲದೆ ಕನ್ನಡ ಸಾಹಿತ್ಯದಲ್ಲೂ ಮಹತ್ವದ ಸ್ಥಾನ ಪಡೆ ದಿದೆ. ಜತೆಗೆ, ಎಲ್ಲರಿಗೂ ಶಿಕ್ಷಣ ನೀಡುವ ಪರಿಕಲ್ಪನೆಗೆ ಮುನ್ನುಡಿ ಬರೆದಿದೆ.

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ವನ್ನು ಹೊರತಂದ ಹರ್ಮನ್‌ ಮೊಗ್ಲಿಂಗ್ 1857ರಲ್ಲಿ ಬಾಸೆಲ್ ಮಿಷನ್ ಅಡಿಯಲ್ಲಿ ಈ ಚರ್ಚ್‌ ಅನ್ನು ಸ್ಥಾಪಿಸಿದರು. ಮೊದ ಲಿಗೆ ಅಲಮಂಡ ಚರ್ಚ್ ಎಂಬ ಹೆಸರಿತ್ತು. ಇತ್ತೀಚೆಗೆ ಚರ್ಚ್ ಮರು ನಿರ್ಮಾಣವಾದ ಸಂದರ್ಭದಲ್ಲಿ ಕಾಂತಿ ಚರ್ಚ್ ಎಂದು ಮರು ನಾಮಕರಣ ಮಾಡಲಾಗಿದೆ.

ಮೊದಲಿಗೆ ಜರ್ಮನಿ ಮೂಲದ ಬಾಸೆಲ್ ಮಿಷನ್ ಮಂಗಳೂರನ್ನು ಕೇಂದ್ರಿಕೃತವಾಗಿಸಿ ರಾಜ್ಯದಲ್ಲಿ ಧರ್ಮ ಪ್ರಚಾರ ನಡೆಸುತ್ತಿತ್ತು. ಸಿದ್ದಾಪುರ ಸಮೀಪದ ಆನಂದರಾವ್ ಕೌಂಡಿನ್ಯ ಎಂಬುವವರು ಮೊಗ್ಲಿಂಗ್ ಅವರ ವಾಗ್ಝರಿಗೆ ಮಾರುಹೋಗಿ ಕೊಡಗಿಗೆ ಅವರನ್ನು ಕರೆ ತರುತ್ತಾರೆ. ಜತೆಗೆ, ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಾರೆ. ಇಲ್ಲಿದ್ದ ಅವರ 600 ಎಕರೆ ಜಾಗದಲ್ಲಿ ಚರ್ಚ್‌ ನಿರ್ಮಿಸಲು ಅವಕಾಶವನ್ನೂ ನೀಡುತ್ತಾರೆ. ಅವರ ನೆನಪಿಗೆ ಇನ್ನೂ ಈ ಭಾಗಕ್ಕೆ ಆನಂದಪುರ ಎಂದೇ ಕರೆಯಲಾಗುತ್ತಿದೆ.

ಇಲ್ಲಿನ ದಲಿತರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿ, ಎಲ್ಲರಿಗೂ ಉಚಿತ ಶಿಕ್ಷಣ ಹಾಗೂ ವಾಸಕ್ಕೆ ಜಾಗವನ್ನು ಕೌಂಡಿನ್ಯ ಅವರೇ ನೀಡುತ್ತಾರೆ. ಆನಂದ ರಾವ್ ಕೌಂಡಿನ್ಯ ರೆವರೆಂಡ್ ಫಾದರ್ ಆಗಿ ಜರ್ಮನಿಗೆ ತೆರಳುತ್ತಾರೆ.

ಹರ್ಮನ್ ಮೊಗ್ಲಿಂಗ್, ಕಿಟ್ಟೆಲ್ ಇಬ್ಬರೂ ಆನಂದಪುರದ ಚರ್ಚ್‌ನಲ್ಲೇ ತಂಗಿದ್ದರು. ಮೊಗ್ಲಿಂಗ್ ಮಡಿಕೇರಿ ಹಾಗೂ ಆನಂದಪುರ ಚರ್ಚ್‍ನಲ್ಲಿ ಧರ್ಮಪ್ರಚಾರವನ್ನು ಮಾಡುತ್ತಿದ್ದರೆ, ಕಿಟ್ಟೆಲ್ ಸುಮಾರು 3 ವರ್ಷ ಆನಂದಪುರದ ಹಸಿರ ಪರಿಸರದ ವಾತಾವರಣದಲ್ಲಿ ಇದ್ದರು. ಈ ಸಂದರ್ಭ ಕಿಟ್ಟೆಲ್ ಧರ್ಮ ಪ್ರಚಾರಕ್ಕಿಂತಲೂ ನಿಘಂಟು ರಚನೆಗೆ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದರು. ಭಾನುವಾರದ ಪ್ರಾರ್ಥನೆಯ ಸಮಯದಲ್ಲಿ ಕಿಟ್ಟೆಲ್ ಧಾರ್ಮಿಕ ಭಾಷಣ ಮಾಡುತ್ತಿದ್ದರು.

ಹರ್ಮನ್ ಮೊಗ್ಲಿಂಗ್ ಕೊಡ ವರ ಜೀವನ ಕುರಿತು ‘ಕೂರ್ಗ್ ಮೆಮೋ ರೀಸ್’ ಎಂಬ ಗ್ರಂಥವನ್ನು ರಚಿಸಿದರು. ಇಲ್ಲಿಯ ರಾಜ ವೀರರಾಜೇಂದ್ರ ಅವರ ಶೌರ್ಯವನ್ನು ಇದರಲ್ಲಿ ವರ್ಣಿಸಲಾಗಿದೆ. ಜತೆಗೆ, ಬ್ರಿಟಿಷರು ಕೊಡಗನ್ನು ವಶ ಪಡಿಸಿದ ಬಳಿಕ ಅಭಿವೃದ್ಧಿ ಆಗಿಲ್ಲ ಎಂಬ ಅಂಶವನ್ನು ಯಾವುದೇ ಮುಚ್ಚುಮರೆ ಇಲ್ಲದೇ ಬರೆದಿರುವುದು ವಿಶೇಷ.

ಹಳ್ಳಿಗಾಡಾಗಿದ್ದ ಆನಂದಪುರದಲ್ಲಿ 150 ವರ್ಷಗಳ ಹಿಂದೆಯೇ ಅನಾಥಾ ಶ್ರಮವನ್ನು ಸ್ಥಾಪಿಸಿ, ಸ್ಥಳೀಯರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಗೆ ಉಳಿದುಕೊಳ್ಳುವ, ಆಹಾರ ವ್ಯವಸ್ಥೆಯನ್ನು ಚರ್ಚ್ ಕಡೆ ಯಿಂದ ಮಾಡಲಾಗುತ್ತಿತ್ತು. ಇದಕ್ಕೆ ಆನಂದರಾವ್ ಕೌಂಡಿನ್ಯ, ಅವರ ಪತ್ನಿ ಮರಿ ಕೌಂಡಿನ್ಯ ಆರ್ಥಿಕ ನೆರವು ನೀಡುತ್ತಿದ್ದರು. ಆರಂಭದಲ್ಲಿ 120 ವಿದ್ಯಾರ್ಥಿಗಳು ಇದ್ದ ಅನಾಥಾಶ್ರಮಕ್ಕೆ ಜರ್ಮನಿಯಿಂದ ಬರುತ್ತಿದ್ದ ಸಹಾಯ ಧನ ನಿಂತ ಮೇಲೆ 2015ರಲ್ಲಿ ಸ್ಥಗಿತಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT