ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ ನಿಧನ: ಶಾಖಾ ಮಠಗಳಲ್ಲಿ ನೀರವ ಮೌನ

Last Updated 21 ಜನವರಿ 2019, 12:54 IST
ಅಕ್ಷರ ಗಾತ್ರ

ಮಡಿಕೇರಿ: ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಕೊಡಗು ಜಿಲ್ಲೆಯ ಭಕ್ತರು ಕಂಬನಿ ಮಿಡಿದಿದ್ದಾರೆ.

ಜಿಲ್ಲೆಯ ಸೋಮವಾರಪೇಟೆ, ಕೊಡ್ಲಿಪೇಟೆ, ಶಾಂತಳ್ಳಿ, ಗುಡುಗಳಲೆ ಹಾಗೂ ಶನಿವಾರಸಂತೆ ಭಾಗದಲ್ಲಿ ಶ್ರೀಮಠದ ಅಪಾರ ಭಕ್ತರು ನೆಲೆಸಿದ್ದಾರೆ. ಸ್ವಾಮೀಜಿ ಅವರ ನಿಧನದ ನೋವಿನಲ್ಲಿ ಭಕ್ತಸಾಗರ ಮುಳುಗಿದೆ.

ಅನಾರೋಗ್ಯಕ್ಕೆ ತುತ್ತಾದ ಬಳಿಕ ಸಾಕಷ್ಟು ಭಕ್ತರು ಸ್ವಾಮೀಜಿ ಅವರ ದರ್ಶನ ಪಡೆದು ಬಂದಿದ್ದರು. ಅಲ್ಲದೇ, ಶೀಘ್ರ ಗುಣಮುಖರಾಗುವಂತೆಯೂ ಪ್ರಾರ್ಥಿಸಿದ್ದರು. ಭಕ್ತಕೋಟಿಯ ಆಸೆ ಮಾತ್ರ ಈಡೇರಲಿಲ್ಲ.

ನಡೆದಾಡುವ ದೇವರೆಂದೇ ಕರೆಸಿಕೊಳ್ಳುತ್ತಿದ್ದ ಸ್ವಾಮೀಜಿ ನಿಧನರಾದ ವಿಚಾರವನ್ನು ಸೋಮವಾರ ಮಧ್ಯಾಹ್ನ ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆಯೇ ಸಂಘ– ಸಂಸ್ಥೆಗಳು, ಶಾಖಾ ಮಠಗಳಲ್ಲಿ ಅವರ ಭಾವಚಿತ್ರವಿಟ್ಟು ನಮನ ಸಲ್ಲಿಸಲಾಯಿತು.

ಶಾಖಾ ಮಠಗಳಿವೆ: ಕೊಡಗಿನಲ್ಲೂ ಸಿದ್ಧಗಂಗಾ ಮಠದ ಶಾಖಾ ಮಠಗಳಾದ ಕಿರುಕೊಡ್ಲಿ, ಕಲ್ಲುಮಠ, ಊರು ಮಠಗಳಿದ್ದು ಅಪಾರ ಸಂಖ್ಯೆಯ ಭಕ್ತರನ್ನು ಒಳಗೊಂಡಿವೆ. ಕಿರುಕೊಡ್ಲಿ ಮಠವು ಜಿಲ್ಲೆಯಲ್ಲಿ ಹೆಸರು ಮಾಡಿದೆ.

ಮೂರು ಮಠಗಳಲ್ಲೂ ನೀರವ ಮೌನ ನೆಲೆಸಿದೆ. ಸ್ವಾಮೀಜಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈ ಮಠದ ಕಿರಿಯ ಸ್ವಾಮೀಜಿಗಳು ತುಮಕೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮಠದ ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿತ್ತು.

‘ಜಿಲ್ಲೆಗೂ ಸಾಕಷ್ಟು ಬಾರಿ ಸ್ವಾಮೀಜಿ ಭೇಟಿ ನೀಡಿದ್ದರು. ಗುಡುಗಳಲೇ ಜಾತ್ರಾಮೈದಾನದಲ್ಲಿ ನಡೆದಿದ್ದ ದೊಡ್ಡ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಬಳಿಕ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ ಎಂದು ಭಕ್ತರೊಬ್ಬರು ಹೇಳಿದರು.

ಇಂದು ಸ್ವಯಂ ಪ್ರೇರಿತ ಬಂದ್: ಮಂಗಳವಾರ ಮಧ್ಯಾಹ್ನ 3ರಿಂದ ಸಂಜೆ 5ರ ತನಕ ಸೋಮವಾರಪೇಟೆ ಪಟ್ಟಣದಲ್ಲಿ ಸ್ವಾಮೀಜಿ ನಿಧನಧ ಗೌರವಾರ್ಥ ಸ್ವಯಂ ಪ್ರೇರಿತ ಬಂದ್ ನಡೆಯಲಿದೆ.

3.30ಕ್ಕೆ ಜೆಸಿಐನಲ್ಲಿ ಸಂತಾಪ ಸಭೆ ನಡೆಯಲಿದೆ. ಗಣ್ಯರು ಹಾಗೂ ಮಠದ ಭಕ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT