ಇನ್ಫೊಸಿಸ್‌ನಿಂದ 200 ಮನೆ ನಿರ್ಮಾಣ

7
ಪುನರ್ವಸತಿ ಸ್ಥಳ ಪರಿಶೀಲಿಸಿದ ಸುಧಾಮೂರ್ತಿ

ಇನ್ಫೊಸಿಸ್‌ನಿಂದ 200 ಮನೆ ನಿರ್ಮಾಣ

Published:
Updated:
Prajavani

ಮಡಿಕೇರಿ: ಕೊಡಗು ನೆರೆ ಸಂತ್ರಸ್ತರಿಗೆ ಇನ್ಫೊಸಿಸ್‌ ಫೌಂಡೇಷನ್‌ 200 ಮನೆ ನಿರ್ಮಿಸಲು ತೀರ್ಮಾನಿಸಿದ್ದು, ಶುಕ್ರವಾರ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ಅವರು ಪುನರ್ವಸತಿ ಜಾಗ ಪರಿಶೀಲಿಸಿದರು.

‘ಮೈಸೂರು ದಸರಾ ಉದ್ಘಾಟನೆ ವೇಳೆ ನೆರೆ ಸಂತ್ರಸ್ತರಿಗೆ ₹ 25 ಕೋಟಿ ನೆರವು ನೀಡುವುದಾಗಿ ಘೋಷಿಸಲಾಗಿತ್ತು. ಆ ಮೊತ್ತದಲ್ಲಿ ಸಂತ್ರಸ್ತರಿಗೆ ಸುಸಜ್ಜಿತ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 100, ಎರಡನೇ ಹಂತದಲ್ಲಿ 100 ಮನೆ ನಿರ್ಮಾಣ ಮಾಡಲಾಗುವುದು’ ಎಂದು ಸುಧಾಮೂರ್ತಿ ಹೇಳಿದರು.

‘ಸರ್ಕಾರವು ಪ್ರತಿ ಮನೆಗೆ ₹ 9.85 ಲಕ್ಷ ವೆಚ್ಚ ಮಾಡಲು ನಿರ್ಧರಿಸಿದೆ. ನಾವೂ ಸಹ ಪ್ರತಿ ಮನೆಗೆ ಅಷ್ಟೇ ವೆಚ್ಚ ಮಾಡುತ್ತೇವೆ. ಸರ್ಕಾರ ನಿರ್ಮಾಣ ಮಾಡುತ್ತಿರುವ ಮಾದರಿಯಲ್ಲೇ ನಮ್ಮ ಗುತ್ತಿಗೆದಾರರು ಮನೆ ನಿರ್ಮಿಸಲಿದ್ದಾರೆ’ ಎಂದು ತಿಳಿಸಿದರು.

‘ಮನೆ ನಿರ್ಮಾಣದೊಂದಿಗೆ 100 ದನದ ಕೊಟ್ಟಿಗೆ, 100 ಕೋಳಿ ಸಾಕಣೆ ಕೇಂದ್ರ ನಿರ್ಮಿಸುತ್ತೇವೆ. ₹ 25 ಲಕ್ಷ ವೆಚ್ಚದಲ್ಲಿ ರೈತರಿಗೆ ಪಾಲಿಹೌಸ್‌ ನಿರ್ಮಿಸಿ ಕೊಡಲಾಗುವುದು. ಭಾರೀ ಮಳೆಯಿಂದ ಹಾಳಾದ ಮನೆಗಳ ದುರಸ್ತಿಗೂ ಆರ್ಥಿಕ ನೆರವು ಒದಗಿಸಲಾಗುವುದು’ ಎಂದು ವಿವರಿಸಿದರು.

10ಕ್ಕೆ ಪ್ರಾಧಿಕಾರದ ಸಭೆ: ‘ಸಂತ್ರಸ್ತರಿಗೆ ಮನೆ ನಿರ್ಮಿಸಲು ಯಾರೇ ಮುಂದೆ ಬಂದರೂ ಅವಕಾಶ ನೀಡಲಾಗುವುದು’ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದರು.

ಬೆಂಗಳೂರಿನಲ್ಲಿ ಫೆ. 10ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ‘ಕೊಡಗು ಮರು ನಿರ್ಮಾಣ ಪ್ರಾಧಿಕಾರ’ದ ಸಭೆ ನಡೆಯಲಿದೆ. ನದಿಗಳಲ್ಲಿ ತುಂಬಿರುವ ಹೂಳು ತೆಗೆಯಲು ಸರ್ಕಾರ ತೀರ್ಮಾನಿಸಿದೆ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !