ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಸ್ಯೆ ಎದುರಾದರೆ ಧೈರ್ಯವಾಗಿ ಎದುರಿಸಿ’

ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್‌ಪಿ ಸುಮನ್‌ ಡಿ. ಪೆನ್ನೇಕರ್‌ ಸಲಹೆ
Last Updated 3 ಆಗಸ್ಟ್ 2019, 14:03 IST
ಅಕ್ಷರ ಗಾತ್ರ

ಮಡಿಕೇರಿ: ‘ವಿದ್ಯಾರ್ಥಿಗಳು, ಆತ್ಮವಿಶ್ವಾಸದಿಂದ ಬದುಕು ರೂಪಿಸಿಕೊಳ್ಳಬೇಕು’ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಸಲಹೆ ನೀಡಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ 2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸೋಲು, ಗೆಲುವು ಸಹಜ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸುವುದರ ಜತೆಗೆ ಸಮಸ್ಯೆಗಳು ಬಂದಾಗ ಧೃತಿಗೆಡದೇ ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಜೀವನದಲ್ಲಿ ಏಳುಬೀಳು ಇರುತ್ತವೆ. ಅದನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದು ಎಚ್ಚರಿಸಿದರು.

ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪೋಷಕರು, ಶಿಕ್ಷಕರ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳು ಶಿಸ್ತು, ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಎಸ್‌ಪಿ ಕಿವಿಮಾತು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ ಮಾತನಾಡಿ, ‘ಇಂದಿನ ಆಧುನಿಕ ಬದುಕಿನಲ್ಲಿ ಉದ್ಯೋಗ ಅವಕಾಶಗಳು ಸಾಕಷ್ಟಿವೆ. ಅವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಆದ್ದರಿಂದ, ಸಮಯವನ್ನು ವ್ಯರ್ಥ ಮಾಡದೇ ಅಧ್ಯಯನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

ಶಿಕ್ಷಣವೇ ಶಕ್ತಿ, ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಗುರುಗಳ ಪಾತ್ರ ಪ್ರಮುಖ. ಉತ್ತಮ ಚಿಂತನೆಯತ್ತ ನಡೆಯಲು ಗುರುಗಳ ಮಾರ್ಗದರ್ಶನ ಪಾಲಿಸಬೇಕು. ಉನ್ನತ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗಬೇಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಕೆ.ಎಂ. ಭವಾನಿ ಹೇಳಿದರು.

2019 ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪಲು ವಿದ್ಯಾನೀಕೇತನ ಪಿಯು ಕಾಲೇಜಿನ ಚರಿತಾ ಪೂಣಚ್ಚ ಎನ್. ಅವರು ಪ್ರಥಮ ಸ್ಥಾನ (584 ) ಹಾಗೂ ಮಡಿಕೇರಿಯ ಸಂತ ಜೋಸೆಫ್‌ ಕಾಲೇಜಿನ ವಿದ್ಯಾಶ್ರೀ ಬಿ.ಡಿ. ದ್ವಿತೀಯ ಸ್ಥಾನ (582), ವಾಣಿಜ್ಯ ವಿಭಾಗದಲ್ಲಿ ಸಂತ ಜೋಸೆಫರ ಪಿಯು ಕಾಲೇಜಿನ ಸಪ್ಪನಾ ಕೆ.ಎ. ಪ್ರಥಮ ಸ್ಥಾನ (588) ಹಾಗೂ ಗೊಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಜನಿತ್ ಬಿ.ಸಿ. ದ್ವಿತೀಯ ಸ್ಥಾನ (584), ಕಲಾ ವಿಭಾಗದಲಿ ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಜೀವ ಕೆ.ಪಿ. ಪ್ರಥಮ ಸ್ಥಾನ (565) ಹಾಗೂ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದಿವ್ಯಾ ಎಸ್.ಕೆ. ದ್ವಿತೀಯ ಸ್ಥಾನ (542) ಪಡೆದಿದ್ದು ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸಿ.ಎಂ.ಮಹಾಲಿಂಗಯ್ಯ ಸ್ವಾಗತಿಸಿದರು, ಕಾಲೇಜಿನಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕರಾದ ನಂದೀಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT