ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ- ಭಾವಗಳಿಗೆ ಶಕ್ತಿ ತುಂಬುವ ತಾಣ

Last Updated 9 ಫೆಬ್ರುವರಿ 2019, 14:52 IST
ಅಕ್ಷರ ಗಾತ್ರ

ಸೋಮವಾರಪೇಟೆ: ಜಿಲ್ಲೆಯ ಐತಿಹಾಸಿಕ ದೇವಾಲಯಗಳಲ್ಲಿ ಇಲ್ಲಿನ ಮುತ್ತಪ್ಪ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯಗಳೂ ಸೇರಿವೆ.

ನಂಬಿದವರಿಗೆ ಇಂಬು ಕೊಡುವ ಹಾಗೂ ಸಮಸ್ತ ಭಕ್ತರಿಗೆ ಧಾರ್ಮಿಕ, ಭಕ್ತಿ-ಭಾವಗಳಿಗೆ ಶಕ್ತಿ ತುಂಬುವ ತಾಣವಾಗಿದೆ. ಇಲ್ಲಿನ ದೇವಾನುದೇವತೆಗಳೊಂದಿಗೆ ದೈವಗಳೂ ನೆಲೆಸಿ ಭಕ್ತರ ಬೇಡಿಕೆ ಈಡೇರಿಸುತ್ತವೆ ಎಂಬುದು ಜನರ ನಂಬಿಕೆ. ನಿತ್ಯ ಪೂಜೆ ನಡೆಯುವುದರೊಂದಿಗೆ, ಮಾರ್ಚ್‌ನಲ್ಲಿ ಜಾತ್ರೋತ್ಸವ ನಡೆಯಲಿದ್ದು ಇದರಲ್ಲಿ ಎಲ್ಲ ಜಾತಿ ಜನಾಂಗ ಮಾತ್ರವಲ್ಲದೇ ಎಲ್ಲ ಧರ್ಮಿಯರೂ ಪಾಲ್ಗೊಳ್ಳುವುದು ವಿಶೇಷ.

ಪಟ್ಟಣದ ಕಕ್ಕೆಹೊಳೆ ಸಮೀಪದಲ್ಲಿರುವ ದೇವಾಲಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ಈ ದೇವಾಲಯ ಇರುವ ಜಾಗ ಯಜ್ಞ - ಯಾಗಾದಿಗಳು ನಡೆದ ಸ್ಥಳ ಎನ್ನಲಾಗಿದೆ. ಪೂರ್ವದಲ್ಲಿ ಈ ಪ್ರದೇಶ ಕಾಡುಗಳಿಂದ ಆವೃತವಾಗಿದ್ದು ಋಷಿ- ಮುನಿಗಳು ತಪಸ್ಸಿಗೆ ಕುಳಿತು ಇಡೀ ಭುವನವನ್ನೇ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದ ಶಕ್ತಿದೇವತೆ ಭುವನೇಶ್ವರಿಯ ವರಸಿದ್ಧಿಗಾಗಿ ತಪಸ್ಸು ಮಾಡಿ ಯಶಸ್ಸು ಕಂಡ ಪವಿತ್ರ ಸ್ಥಳ ಎಂಬ ಪ್ರತೀತಿಯಿದೆ.

ಸುಮಾರು 100 ವರ್ಷಗಳ ಹಿಂದೆ ಬಡ ಕುಟುಂಬದಲ್ಲಿ ಜನಿಸಿದ ಪಕೀರ ಪೂಜಾರಿ ಎಂಬುವವರು ಮುತ್ತಪ್ಪ ದೈವವನ್ನು ಪೂಜಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ವಾರ್ಷಿಕವಾಗಿ ಮುತ್ತಪ್ಪನಿಗೆ ಕೋಲ ಅರ್ಪಿಸಬೇಕೆಂಬ ಅಭಿಲಾಷೆಯೊಂದಿಗೆ ಪ್ರಾರಂಭವಾದ ಮುತ್ತಪ್ಪ ದೈವದ ಕೋಲ ಪ್ರತಿವರ್ಷ ಒಂದೊಂದು ಸಹದೈವಗಳು ನೆಲೆ ನಿಂತು ಇಂದು ಒಂಬತ್ತು ದೈವಗಳಿಗೆ ಕೋಲವನ್ನು ನಡೆಸುತ್ತ ದೈವಗಳ ಉತ್ಸವವಾಗಿಯೇ ಪ್ರಸಿದ್ಧಿ ಪಡೆದಿದೆ.

ಒಂದೇ ದೇವಾಲಯದ ಆವರಣದಲ್ಲಿ ಒಟ್ಟು 13 ದೈವಾದಿ ದೇವತೆಗಳು ಪ್ರತ್ಯೇಕ ಗುಡಿಗಳೊಂದಿಗೆ ನೆಲೆಸಿರುವುದು ಇಲ್ಲಿನ ವಿಶೇಷ.

ನಿತ್ಯಂ ಪ್ರಾಥಃಕಾಲ ಹಾಗೂ ಸಂಧ್ಯಾಕಾಲ ವಿವಿಧ ಅರ್ಚನೆಗಳೊಂದಿಗೆ ಪೂಜಿಸಲ್ಪಡುತ್ತಿರುವ ಭುವನೇಶ್ವರಿ ದೇವಿ, ಅಯ್ಯಪ್ಪ ಸ್ವಾಮಿ, ನಾಗದೇವತೆಗಳು, ಗಣಪತಿ ಮೂರ್ತಿಗಳು ಸ್ಥಾನ ಪಡೆದಿವೆ.

ನವರಾತ್ರಿ ಸಂದರ್ಭ ಒಂಬತ್ತು ದಿನ ವಿಶೇಷ ಪೂಜೆಗಳು, ತಿಂಗಳ ಪ್ರತಿ ಆಶ್ಲೇಷ ನಕ್ಷತ್ರದಂದು ಬೆಳಿಗ್ಗೆ ನಾಗ ದೇವತೆಗಳಿಗೆ ಆಶ್ಲೇಷ ಪೂಜೆ, ಪ್ರತಿ ಸಂಕಷ್ಟಿಯ ದಿನದಂದು ಬೆಳಿಗ್ಗೆ ಗಣಪತಿ ಹೋಮ, ವರ್ಷದ ಮಂಡಲ ಪೂಜೆಯಂದು ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಮುತ್ತಪ್ಪ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಪೂಜೆಗಳು ಶ್ರದ್ಧೆ ಭಕ್ತಿಯಿಂದ ನಡೆಯುತ್ತವೆ.

ಅಯ್ಯಪ್ಪಸ್ವಾಮಿ ದೇವಾಲಯದ ಕೆಳಭಾಗದಲ್ಲಿ ಮುತ್ತಪ್ಪ ಹಾಗೂ ಸಹ ದೈವಗಳಿವೆ. ಇಲ್ಲಿ ಪ್ರತಿನಿತ್ಯ ಪ್ರಾತಃಕಾಲ ಹಾಗೂ ಸಂಧ್ಯಾಕಾಲ ಪೂಜಿಸಲಾಗುತ್ತಿರುವ ದೈವಗಳಾದ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ರಕ್ತಚಾಮುಂಡಿ, ಕಂಡಕರ್ಣ, ಕರಿಂಗುಟ್ಟಿ ಶಾಸ್ತಾವು, ಪೊಟ್ಟನ್ ಹಾಗೂ ಗುಳಿಗನ್ ದೈವಗಳು ನಿತ್ಯ ಪೂಜಿಸಲ್ಪಪಡುತ್ತಿವೆ. ಮುತ್ತಪ್ಪ ಸ್ವಾಮಿ ದೇವಾಲಯ ಆವರಣದಲ್ಲಿ ಸ್ಥಾಪಿತವಾಗಿರುವ 9 ದೈವಗಳಿದ್ದು, ಈ ದೈವಗಳನ್ನು ದಕ್ಷಿಣ ಕನ್ನಡ ಭಾಗದ ಜನತೆ ಭೂತಗಳೆಂದು, ಕೇರಳ ಭಾಗದ ಜನರು ತೈಯ್ಯಂ ಎಂದು ಕರೆಯುತ್ತಾರೆ.

ಈ ಒಂಬತ್ತು ದೈವಗಳಿಗೂ ವರ್ಷದ ಮಾರ್ಚ್‌ನಲ್ಲಿ ವಿಶೇಷ ವೇಷಭೂಷಣ ಹಾಗೂ ಚಂಡೆ ಸದ್ದಿನೊಂದಿಗೆ ವೆಳ್ಳಾಟಂ ಹಾಗೂ ಕೋಲಗಳು ಪ್ರತ್ಯೇಕವಾಗಿ ಹಗಲಿರುಳೆನ್ನದೇ ಎರಡು ದಿನಗಳ ಕಾಲ ಶ್ರದ್ಧಾ-ಭಕ್ತಿಯಿಂದ ಭಕ್ತ ಸಾಗರದ ಸಮ್ಮುಖದಲ್ಲಿ ಜರುಗುತ್ತವೆ.

ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯಿದೆ. ಇಲ್ಲಿನ ದೈವಗಳ ವೇಷ-ಭೂಷಣ ಹಾಗೂ ನರ್ತನಗಳು ಮಲಬಾರ್ ಹಾಗೂ ತುಳುನಾಡ ಜಾನಪದ ಸಂಪತ್ತು ಎಂದೇ ಬಿಂಬಿತವಾಗಿವೆ.

ಶೈವರು ಪೂಜಿಸುವ ಶಿವ ಇಲ್ಲಿ ಮುತ್ತಪ್ಪ (ಮುತ್ತಪ್ಪೇಶ್ವರ)ನಾಗಿ ಹಾಗೂ ವೈಷ್ಣವರು ಪೂಜಿಸುವ ವಿಷ್ಣು ಇಲ್ಲಿ ವಿಷ್ಣುಮೂರ್ತಿ ಹಾಗೂ ಸಹದೈವಗಳಾಗಿ ಪೂಜಿಸಲ್ಪಡುತ್ತಿರುವುದರಿಂದ ಈ ದೇವಾಲಯ ಶೈವ ಹಾಗೂ ವೈಷ್ಣವರ ಸಂಗಮ ತಾಣವಾಗಿಯೂ ಬಿಂಬಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT