ಭಾನುವಾರ, ಮಾರ್ಚ್ 7, 2021
29 °C
ಬಂದ್‌ ಕರೆ

ಕಾವೇರಿ ತಾಲ್ಲೂಕು ರಚನೆ: ವಾಣಿಜ್ಯನಗರಿಯಲ್ಲಿ ವ್ಯಾಪಾರ–ವಾಹಿವಾಟು ಪೂರ್ಣ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಎಲ್ಲ ಅರ್ಹತೆಗಳನ್ನೂ ಹೊಂದಿರುವ ಕುಶಾಲನಗರ ಕಾವೇರಿ ತಾಲ್ಲೂಕನ್ನು ನೂತನ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ನೂತನ ತಾಲ್ಲೂಕುಗಳ ಪಟ್ಟಿಗೆ ಕಾವೇರಿ ತಾಲ್ಲೂಕು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿಯು ಸೋಮವಾರ ಕರೆ ನೀಡಿದ್ದ ಕುಶಾಲನಗರ ಪಟ್ಟಣ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವರ್ತಕರು ಸ್ವಯಂಪ್ರೇರಣೆಯಿಂದ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಇದರಿಂದ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದಲ್ಲಿ ಸಂಪೂರ್ಣ ವ್ಯಾಪಾರ ವಾಹೀವಾಟು ಸ್ತಬ್ಧಗೊಂಡಿತು. ಖಾಸಗಿ ಬಸ್ಸುಗಳು, ಮ್ಯಾಕ್ಸಿಕ್ಯಾನ್‌ಗಳ, ಟ್ಯಾಕ್ಸಿಗಳ ಸಂಚಾರ ವಿರಳವಾಗಿತ್ತು. ಆಟೊರಿಕ್ಷಾಗಳ ಸಂಚಾರ ಬಹುತೇಕ ಸ್ಥಗಿತಗೊಂಡಿತು. ಸಿನಿಮಾ ಮಂದಿರ, ಹೋಟೆಲ್‌ಗಳು ಬಂದ್ ಆಗಿದ್ದವು. ಇದರಿಂದ ದೂರದ ಊರುಗಳಿಂದ ಬಂದಿದ್ದ ಪ್ರವಾಸಿಗರು ಊಟ–ತಿಂಡಿಗಾಗಿ ಪರದಾಡಬೇಕಾಯಿತು. ಔಷಧ ಅಂಗಡಿ, ಹಾಲಿನ ಅಂಗಡಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಬಂದ್ ನಿಮಿತ್ತ ಜನಸಂಚಾರ ಕೂಡ ವಿರಳವಾಗಿತ್ತು.

ಕೆಎಸ್ಆರ್‌ಟಿಸಿ ಬಸ್ಸುಗಳ ಸಂಚಾರ ಎಂದಿನಂತೆ ಇದ್ದರೂ ಕೆಲವು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿತು. ಬಂದ್ ನಿಮಿತ್ತ ಮಕ್ಕಳ ಹಿತದೃಷ್ಟಿಯಿಂದ ಕೆಲವು ಖಾಸಗಿ ಶಾಲೆ– ಕಾಲೇಜುಗಳು ರಜೆ ನೀಡಿದ್ದವು.

ಬಹುತೇಕ ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿತ್ತು. ಬ್ಯಾಂಕ್ ಗಳು ಬಾಗಿಲು ಮುಚ್ಚಿಕೊಂಡು ಕಾರ್ಯ ನಿರ್ವಹಿಸಿದವು. ಪಟ್ಟಣದಲ್ಲಿ ಹೋಟೆಲ್ ಗಳು ಸಂಪೂರ್ಣ ಮುಚ್ಚಿದ್ದ ಕಾರಣ ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ಹಾಗೂ ಪ್ರವಾಸಿಗರು ಊಟ–ತಿಂಡಿಗಾಗಿ ಪರದಾಡಿದರು.

ಪ್ರವಾಸಿ ಕೇಂದ್ರಗಳಾದ ಕಾವೇರಿ ನಿಸರ್ಗಧಾಮ, ದುಬಾರೆ, ಹಾರಂಗಿ ಮತ್ತಿತರ ಕಡೆಗಳಲ್ಲಿ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕ್ಷೀಣಿಸಿತ್ತು. ನಿಸರ್ಗಧಾಮದಲ್ಲಿನ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು.

ಕಾವೇರಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಭದ್ರತೆ : ಬಂದ್ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕುಶಾಲನಗರ ಪಟ್ಟಣದಲ್ಲಿ ಡಿವೈಎಸ್‌ಪಿ ಮುರಳೀಧರ್ ನೇತೃತ್ವದಲ್ಲಿ ಸಿಪಿಐ ಕುಮಾರ್ ಆರಾಧ್ಯ, ಕ್ಯಾತೇಗೌಡ, ಎಸ್ಐ ಜಗದೀಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಎಸ್‌ಪಿ ಭೇಟಿ : ಬಂದ್ ನಿಮಿತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮಾನ್ ಪೆನ್ನೇಕರ್‌ ಕುಶಾಲನಗರಕ್ಕೆ ಭೇಟಿ ನೀಡಿದ್ದರು. ಕಾವೇರಿ ತಾಲ್ಲೂಕಿಗೆ ಒತ್ತಾಯಿಸಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸದಂತೆ ಸೂಚಿಸಿದರು. ಕೆಎಸ್ಆರ್‌ಟಿಸಿ ಬಸ್ಸು ಮತ್ತು ಪ್ರವಾಸಿ ವಾಹನಗಳ ಸಂಚಾರ ಎಂದಿನಂತೆ ನಡೆಯಿತು.

ಮಾತಿನ ಚಕಮಕಿ: ಕೊಪ್ಪ ಗೇಟ್ ಬಳಿ ಪ್ರತಿಭಟನಾಕಾರರು ಆಟೊರಿಕ್ಷಾಗಳನ್ನು ಬಲವಂತವಾಗಿ ನಿಲ್ಲಿಸಲು ಒತ್ತಡ ಹಾಕುತ್ತಿದ್ದಾಗ ಡಿವೈಎಸ್‌ಪಿ ಮುರಳೀಧರ್ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಹೋರಾಟಗಾರರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು ನೇತೃತ್ವದಲ್ಲಿ ವಕೀಲರು ಕಾವೇರಿ ತಾಲ್ಲೂಕು ಹೋರಾಟವನ್ನು ಬೆಂಬಲಿಸಿ ಕೋರ್ಟ್‌ ಕಲಾಪದಿಂದ ದೂರ ಉಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.