ಜಿಲ್ಲೆ ಜನರ ಮನ ಗೆಲ್ಲುವ ಪ್ರಯತ್ನ

7
ಕೊಡಗಿಗೆ ಈ ಬಾರಿ ಬಂಪರ್‌, 450 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಗೆ ₹ 100 ಕೋಟಿ

ಜಿಲ್ಲೆ ಜನರ ಮನ ಗೆಲ್ಲುವ ಪ್ರಯತ್ನ

Published:
Updated:
Prajavani

ಮಡಿಕೇರಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೂ ‘ಬಂಪರ್ ಕೊಡುಗೆ’ಯನ್ನೇ ಘೋಷಿಸಿದ್ದಾರೆ.

2018–19ನೇ ಸಾಲಿನಲ್ಲಿ ಯಾವುದೇ ಯೋಜನೆ ಪ್ರಕಟಿಸಿದೇ ಜಿಲ್ಲೆಯ ಜನರ ಆಕ್ರೋಶಕ್ಕೆ ತುತ್ತಾಗಿದ್ದರು. ಈಗ ಹಲವು ಯೋಜನೆ ಪ್ರಕಟಿಸುವ ಮೂಲಕ ಕಾಫಿ ನಾಡಿನ ಜನರ ಮನ ಗೆಲ್ಲುವ ಯತ್ನ ಮಾಡಿದ್ದಾರೆ.

ಈ ಬಾರಿಯಾದರೂ ಕುಶಾಲನಗರ– ಪೊನ್ನಂಪೇಟೆ ತಾಲ್ಲೂಕು ಕೇಂದ್ರ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯಿತ್ತು. ಅದನ್ನು ಕೈಬಿಟ್ಟಿರುವುದು ಈ ಭಾಗದವರ ಆಕ್ರೋಶಕ್ಕೆ ತುತ್ತಾಗಿದೆ. ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲ್ಲೂಕು ಕೇಂದ್ರ ಮಾಡಬೇಕೆಂಬ ಒತ್ತಾಯಗಳಿದ್ದವು. 2018ರಲ್ಲಿ ನಿರಂತರ ಹೋರಾಟ, ಬಂದ್‌ ಸಹ ನಡೆದಿದ್ದವು. 

₹ 100 ಕೋಟಿ: ಜಿಲ್ಲೆಯಲ್ಲಿ ‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ಗಳಿಲ್ಲದೇ ಅನಾರೋಗ್ಯಕ್ಕೆ ತುತ್ತಾದವರು ಸಂಕಷ್ಟ ಪಡುವ ಸ್ಥಿತಿಯಿತ್ತು. ಅನಾರೋಗ್ಯಕ್ಕೆ ತುತ್ತಾದವರು ಮೈಸೂರು ಅಥವಾ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಿತ್ತು. ಈ ಸಂಕಷ್ಟ ನಿವಾರಿಸುವುದಕ್ಕಾಗಿ ಕುಮಾರಸ್ವಾಮಿ ಅವರು ದಿಟ್ಟ ಹೆಜ್ಜೆಯಿಟ್ಟಿದ್ದು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ₹ 100 ಕೋಟಿ ಅನುದಾನ ಘೋಷಿಸಿದ್ದಾರೆ.

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೂ ₹ 10 ಕೋಟಿ ಅನುದಾನವನ್ನು ಉದಾರವಾಗಿ ನೀಡಿದ್ದಾರೆ. ಅದರ ನಡುವೆ ಇತರ ಸಮುದಾಯಗಳು ನಮಗೂ ಅನುದಾನ ನೀಡಬೇಕಿತ್ತು ಎಂದು ಆಗ್ರಹಿಸುತ್ತಿದ್ದಾರೆ.

ಕೊಡವ ಭಾಷೆಯ ಚಲನಚಿತ್ರಗಳನ್ನು ಪ್ರೋತ್ಸಾಹಿಸಲು ವಿಶೇಷ ಯೋಜನೆ ಪ್ರಕಟಿಸಿದ್ದು, ಕೊಡವ, ತುಳು ಹಾಗೂ ಕೊಂಕಣಿ ಭಾಷೆಗೆ ಸೇರಿ ₹ 1 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಅಲ್ಲದೇ ಮಡಿಕೇರಿಯಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ.  

ಜಿಲ್ಲೆಯ ಭೂಮಿ ಸಮಸ್ಯೆ ತೀವ್ರವಾಗಿದ್ದು, ಡ್ರೋನ್‌ ಮೂಲಕ ‘ರೀ ಸರ್ವೆ’ ಕಾರ್ಯಕ್ಕೆ ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಅಸ್ತು ಎಂದಿದ್ದಾರೆ.

2018ರಲ್ಲಿ ಕೊಡಗು ಜಿಲ್ಲೆಯು ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು. ಬಳಿಕ ಸಂತ್ರಸ್ತರ ಒತ್ತಾಯಕ್ಕೆ ಮಣಿದು ‘ಕೊಡಗು ಪುನರ್‌ ನಿರ್ಮಾಣ ಪ್ರಾಧಿಕಾರ’ ರಚಿಸಲಾಗಿತ್ತು. ಈಗ ಬಜೆಟ್‌ನಲ್ಲಿ ಕೊಡಗು ಪುನರ್ ನಿರ್ಮಾಣ, ಪುನರ್ವಸತಿ ಹಾಗೂ ಅಭಿವೃದ್ಧಿ ಪ್ರಾಧಿಕಾರದ ದೈನಂದಿನ ಕಾರ್ಯ ಚಟುವಟಿಕೆಗೆ ₹ 2 ಕೋಟಿ ಮೀಸಲಿಟ್ಟಿರುವುದು ಸಂತ್ರಸ್ತರಲ್ಲಿ ಹೊಸ ಆಶಾಭಾವ ಮೂಡಿಸಿದೆ.

ರೈಲು ಹಳಿಯ ಅನುಕೂಲ: ಜಿಲ್ಲೆಯಲ್ಲಿ ಆನೆ–ಮಾನವ ಸಂಘರ್ಷ ತೀವ್ರವಾಗಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕೆಂಬುದು ರೈತರ ಬೇಡಿಕೆ. ರೈಲು ಹಳಿ ನಿರ್ಮಾಣಕ್ಕೆ ಬಜೆಟ್‌ನಲ್ಲಿ ₹ 100 ಕೋಟಿ ಮೀಸಲಿಡುವ ಘೋಷಣೆ ಮಾಡಲಾಗಿದೆ. ಇದೂ ಸಹ ಜಿಲ್ಲೆಗೆ ನೆರವಾಗಲಿದೆ. ಅಲ್ಲದೇ, ಅರಣ್ಯ ಪ್ರದೇಶದಲ್ಲಿ ಲಾಂಟಾನಾ ಹಾಗೂ ಯುಪಟೋರಿಯಂ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸುವ ಯೋಜನೆ ರೂಪಿಸಲಾಗಿದೆ. ಅರಣ್ಯದಲ್ಲಿ ಹುಲ್ಲು ಬೆಳೆಸಲು ಸರ್ಕಾರ ಮುಂದಾಗಿದೆ. ಇದೂ ಸಹ ಕೊಡಗಿನ ಮಟ್ಟಿಗೆ ವರದಾನ ಎನ್ನುತ್ತಾರೆ ಜಿಲ್ಲೆಯ ಜನರು.  

ಜಿಲ್ಲೆಗೆ ಮತ್ತೇನು ಅನುಕೂಲ: ಕೊಡಗಿನಲ್ಲಿ ಒಂದು ಕಾಲದಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ, ಈಚೆಗೆ ಭತ್ತದ ಗದ್ದೆಗಳನ್ನು ಪಾಳು ಬಿಟ್ಟು ಹೋಂಸ್ಟೇ ಹಾಗೂ ರೆಸಾರ್ಟ್‌ ನಿರ್ಮಾಣ ಮಾಡುಲಾಗುತ್ತಿದೆ ಎಂಬ ಕೊರಗಿತ್ತು. ಈಗ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯು ಕೊಡಗಿನ ರೈತರಿಗೆ ಅನುಕೂಲ ಆಗಲಿದೆ. ಭತ್ತ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ ₹ 7,500 ಪ್ರೋತ್ಸಾಹಧನ ಸಿಗಲಿದೆ. ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ವಿತರಿಸಿ ಎಂಬುದು ರೈತರ ಬೇಡಿಕೆ ಆಗಿತ್ತು. 

ಜೇನು ಕೃಷಿಗೆ ಉತ್ತೇಜನ: ಕೊಡಗಿನ ಭಾಗಮಂಡಲ, ಶಾಂತಳ್ಳಿ, ಸೋಮವಾರಪೇಟೆಯಲ್ಲಿ ರೈತರು ಹೆಚ್ಚಾಗಿ ಜೇನು ಕೃಷಿ ಅವಲಂಬಿಸಿದ್ದಾರೆ. ಜೇನುಕೃಷಿಗೆ ರೋಗಬಾಧೆ ತೀವ್ರವಾಗಿ ರೈತರು ಇದರಿಂದ ವಿಮುಖರಾಗುತ್ತಿದ್ದಾರೆ. ಬಜೆಟ್‌ನಲ್ಲಿ ಜೇನುಕೃಷಿ ಉತ್ತೇಜನಕ್ಕೆ ₹ 5 ಕೋಟಿ ಮೀಸಲಿಟ್ಟಿರುವುದು ಜಿಲ್ಲೆಯ ರೈತರ ನೆರವಿಗೆ ಬರಲಿದೆ. 

ಹಾಕಿ ಕ್ರೀಡಾಂಗಣಕ್ಕೆ ₹ 5 ಕೋಟಿ
‘ಕೊಡಗು ಕ್ರೀಡಾ ಜಿಲ್ಲೆ’ ಎನಿಸಿದರೂ ಸುಸಜ್ಜಿತ ಕ್ರೀಡಾಂಗಣ ಇಲ್ಲವೆಂಬ ಕೊರಗಿತ್ತು. ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಕೊಡವ ಸಮಾಜದ ಹಾಕಿ ಕ್ರೀಡಾಂಗಣ ಅಭಿವೃದ್ಧಿಗೆ ₹ 5 ಕೋಟಿ ಅನುದಾನ ನೀಡುವ ಮೂಲಕ ಈ ಕೊರಗು ನೀಗಿಸುವ ಯತ್ನ ಮಾಡಲಾಗಿದೆ. ಆದರೂ, ಮಡಿಕೇರಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲ ಎಂಬ ನೋವು ಹಾಗೆಯೇ ಉಳಿಯಿತು. 

ಹಾರಂಗಿ ನದಿಗಳ ಪುನಶ್ಚೇತನಕ್ಕೆ ಕ್ರಮ
ಪ್ರಕೃತಿ ವಿಕೋಪದ ವೇಳೆ ಹಾರಂಗಿ ಜಲಾಶಯದ ಜಲಮೂಲಗಳಲ್ಲಿ ಅಪಾರ ಪ್ರಮಾಣದ ಹೂಳು ತುಂಬಿಕೊಂಡಿತ್ತು. ಅದನ್ನು ತೆರವು ಮಾಡಿ ನದಿಗಳನ್ನು ಪುನಶ್ಚೇತಗೊಳಿಸಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆ ಆಗಿತ್ತು. ಹಾರಂಗಿ ನದಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ನಜೆಟ್‌ನಲ್ಲಿ ಘೋಷಿಸಿದ್ದಾರೆ.  

ಪ್ರವಾಸಿಗರಲ್ಲಿ ಇಳಿಯಲಿದೆ ‘ಕಿಕ್‌’
ಇಡೀ ರಾಜ್ಯದಲ್ಲಿಯೇ ಮದ್ಯ ಮಾರಾಟದಲ್ಲಿ ಕೊಡಗು ಮುಂಚೂಣಿಯಲ್ಲಿ ಇರುವ ಜಿಲ್ಲೆ. ಆದರೆ, ರಾಜ್ಯ ಸರ್ಕಾರವು ಬಿಯರ್‌ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿರುವುದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ ಎನ್ನುತ್ತಾರೆ ರೆಸಾರ್ಟ್‌ ಮಾಲೀಕರು.

ಜಿಲ್ಲೆಯ ಪ್ರವಾಸಕ್ಕೆ ಬರುವವರು ಹೆಚ್ಚಾಗಿ ಬಿಯರ್‌ ಅನ್ನೇ ಕೇಳುತ್ತಿದ್ದಾರೆ. ಬಿಯರ್‌ ಮತ್ತಷ್ಟು ತುಟ್ಟಿ ಆಗಲಿರುವುದು ವ್ಯಾಪಾರಕ್ಕೆ ‘ಬರೆ’ ಎಳೆಯಲಿದೆ ಎಂದೂ ನೋವು ತೋಡಿಕೊಳ್ಳುತ್ತಾರೆ.

ಹುಸಿಯಾದ ನಿರೀಕ್ಷೆಗಳು...

* ಕುಶಾಲನಗರ, ಪೊನ್ನಂಪೇಟೆ ತಾಲ್ಲೂಕು ಕೇಂದ್ರ ಘೋಷಣೆ
* ಜಿಲ್ಲಾ ಪಂಚಾಯಿತಿಗೆ ವಿಶೇಷ ಪ್ಯಾಕೇಜ್‌
* ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಹೊಸ ಯೋಜನೆ ಪ್ರಕಟಿಸಿಲ್ಲ
* ಕಾಫಿ ಬೆಳೆಗಾರರ ನಿರೀಕ್ಷೆಯೂ ಹುಸಿ 
* ಕಾವೇರಿ ನದಿ ಸ್ವಚ್ಛತೆಗೆ ಸಿಗದ ಅನುದಾನ
* ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಯೋಜನೆ ಘೋಷಣೆ ಆಗಿಲ್ಲ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !